Mysore
25
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡ ಚಿತ್ರರಂಗವೂ ಅರಸು – ಸಿದ್ದರಾಮಯ್ಯ ಆಡಳಿತ ರಂಗವೂ

ವೈಡ್‌ ಆಂಗಲ್‌ 

ಬಾ.ನಾ.ಸುಬ್ರಹ್ಮಣ್ಯ 

ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುರಿದರು. ಆಡಳಿತದಲ್ಲಿ ತಮ್ಮನ್ನು ದೇವರಾಜ ಅರಸರ ಜೊತೆ ಹೋಲಿಸಬಾರದು ಎನ್ನುವ ವಿನಯವನ್ನು ಸಿದ್ದರಾಮಯ್ಯ ತೋರಿದರು. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಕೊಡುಗೆಯನ್ನು ಇಲ್ಲಿ ಗಮನಿಸಬಹುದು.

೧೯೭೨ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿ ಬರುವ ಮೊದಲೇ, ಕನ್ನಡ ಚಿತ್ರಗಳಿಗೆ ಸಹಾಯಧನ ಮತ್ತು ಪ್ರಶಸ್ತಿಗಳನ್ನು ನೀಡುವ ನಿರ್ಧಾರ ಆಗಿತ್ತು. ಅದು ನಿಜಲಿಂಗಪ್ಪನವರು ಅಧಿಕಾರ ವಹಿಸಿದ್ದ ದಿನಗಳು. ೧೯೬೬ -೬೭ರಲ್ಲಿ ಈ ಉತ್ತೇಜನ ಆರಂಭವಾಗಿತ್ತು. ನಂತರ ಬಂದ ವೀರೇಂದ್ರ ಪಾಟೀಲರ ಅವಧಿಯಲ್ಲಿ ಚಿತ್ರನಗರಿಗಾಗಿ ಬೆಂಗಳೂರಿನ ಹೊರವಲಯದ ಹೆಸರಘಟ್ಟದಲ್ಲಿ ೩೪೭ ಎಕರೆ ೧೨ ಗುಂಟೆ ಜಾಗವನ್ನು ನೀಡಲಾಗಿತ್ತು.

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮಾದರಿಯಲ್ಲಿ ರಾಜ್ಯ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಸ್ಥಾಪನೆ, ಅದರ ಮೂಲಕ ಚಿತ್ರನಗರಿಯ ಯೋಜನೆಯ ಅನುಷ್ಠಾನ ಇವೆಲ್ಲ ಆಗಬೇಕಿತ್ತು. ಮೂರು ಹಂತಗಳಲ್ಲಿ ಚಿತ್ರನಗರಿಯ ಸ್ಥಾಪನೆಯ ನೀಲನಕ್ಷೆಯೂ ಸಿದ್ಧವಾಗಿತ್ತು. ದೇವರಾಜ ಅರಸು ಅವರೇ ೧೯೭೨ರ ಮಾರ್ಚ್ ತಿಂಗಳಲ್ಲಿ ಚಿತ್ರನಗರಿಗೆ ಶಂಕುಸ್ಥಾಪನೆ ಮಾಡಿದ ದಾಖಲೆ ಇದೆ. ಯೋಜನೆಯ ಪ್ರಕಾರ ಆಗಿದ್ದರೆ, ದೇಶದಲ್ಲಿ ಚಿತ್ರನಗರಿ ಸ್ಥಾಪಿಸಿದ ಮೊದಲ ರಾಜ್ಯ ಕರ್ನಾಟಕ (ಆಗ ಮೈಸೂರು) ಎನ್ನುವ ಹೆಮ್ಮೆ ನಮ್ಮದಾಗುತ್ತಿತ್ತು. ಆದರೆ ಆಗಲಿಲ್ಲ.

ಚಿತ್ರನಗರಿ ಸ್ಥಾಪನೆಯ ಹೊತ್ತಿಗೇ, ರಾಜ್ಯಾದ್ಯಂತ ಕಡಿಮೆ ಆಸನಗಳ ೧೫೦ ಜನತಾ ಚಿತ್ರಮಂದಿರಗಳನ್ನು ಕಟ್ಟುವ ಯೋಜನೆಯೂ ಆರಂಭವಾಗಿತ್ತು. ಕೆಲವು ಚಿತ್ರಮಂದಿರಗಳ ನಿರ್ಮಾಣವೂ ಆಗಿತ್ತು. ಇತ್ತೀಚೆಗೆ ಅಂತಹ ಕೆಲವು ಚಿತ್ರಮಂದಿರಗಳು ಮುಚ್ಚಿದ ಸುದ್ದಿಯೂ ಬಂತು. ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಆರಂಭದಲ್ಲಿ ಸಾಕಷ್ಟು ಕೆಲಸ ಮಾಡಿತು. ದೇವರಾಜ ಅರಸರ ಸೋದರ, ನಟ, ನಿರ್ಮಾಪಕ, ನಿರ್ದೇಶಕ ಕೆಂಪರಾಜ ಅರಸ್ ಅವರು ನಿಗಮದ ಚುಕ್ಕಾಣಿ ಹಿಡಿದರು. ಚಿತ್ರನಗರಿಯ ಕೆಲಸಕ್ಕೆ ಅದೇಕೋ ಆಂದಿನಿಂದ ಇಂದಿನವರೆಗೆ ಮುಹೂರ್ತ ಕೂಡಿಬರಲೇ ಇಲ್ಲ. ಒಂದೆರಡು ಚಿತ್ರಮಂದಿರಗಳನ್ನು ತನ್ನ ವಶಕ್ಕೆ ಪಡೆದು, ಕನ್ನಡ ಚಿತ್ರಗಳನ್ನುಮ ಉತ್ತೇಜಿಸುವ ಕೆಲಸ ಆರಂಭವಾಯಿತಾದರೂ ಅದು ಕೂಡ ನನೆಗುದಿಗೆ ಬಿತ್ತು. ಕೊನೆಗೆ ನಿಗಮ ಲಾಭದಾಯಕ ಸಂಸ್ಥೆ ಅಲ್ಲ ಎಂದು, ಅದನ್ನು ಮುಚ್ಚಲು ವಿಧಾನಮಂಡಲದ ಸಮಿತಿ ಶಿಫಾರಸು ಮಾಡಿತು. ಅಲ್ಲಿಗೆ ಒಂದು ಅಧ್ಯಾಯ ಮುಗಿಯಿತು.

ಕರ್ನಾಟಕದಲ್ಲಿ ತಯಾರಾದ ಎಲ್ಲ ಚಿತ್ರಗಳಿಗೆ ಸಹಾಯಧನ ಯೋಜನೆ ಜಾರಿಗೆ ಬಂತು. ಕನ್ನಡ ಮಾತ್ರವಲ್ಲದೆ ಪರಭಾಷೆಯ ಚಿತ್ರಗಳೂ ಸಹಾಯಧನ ಪಡೆದ ಉದಾಹರಣೆ ಇದೆ. ರಾಮನಗರದಲ್ಲಿ ಚಿತ್ರಿತವಾದ ‘ಶೋಲೆ’ ಸೇರಿದಂತೆ ಕೆಲವು ಪರಭಾಷಾ ಚಿತ್ರಗಳು ಈ ನೆರವು ಪಡೆದವು. ‘ಶೋಲೆ’ ತೆರೆ ಕಂಡು ಐವತ್ತು ವರ್ಷಗಳಾದವು. ಅದರಲ್ಲಿ ಬಳಸಿದ್ದ ಮೋಟಾರು ಸೈಕಲ್‌ನ್ನು ನವೆಂಬರ್ ತಿಂಗಳಲ್ಲಿ ಗೋವಾದಲ್ಲಿ ನಡೆದ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಾಜ್ಯ ಸರ್ಕಾರ ಪ್ರದರ್ಶನಕ್ಕೆ ಇಟ್ಟಿತ್ತು. ೧೯೮೦ರಲ್ಲಿ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ಬೆಂಗಳೂರಿನಲ್ಲಿ ನಡೆಯಿತು. ಪೂರ್ವಸಿದ್ಧತೆಯ ವೇಳೆ ದೇವರಾಜ ಅರಸರು ಇದ್ದರು. ಆದರೆ ಉದ್ಘಾಟನೆಯ ಸಂದರ್ಭದಲ್ಲಿ ರಾಜಕೀಯ ಬೆಳವಣಿಗೆಯ ಕಾರಣ ದೂರ ಉಳಿದು, ಸಮಾರೋಪದ ವೇಳೆ ಗುಂಡೂರಾಯರು ಆಡಳಿತ ಚುಕ್ಕಾಣಿ ಹಿಡಿದಿದ್ದರು.

ಸಿದ್ದರಾಮಯ್ಯನವರು ದೇವೇಗೌಡರ ಸಂಪುಟದಲ್ಲಿ ಅರ್ಥ ಸಚಿವರಾಗಿದ್ದ ವೇಳೆ ರಾಜ್ಯ ಚಲನಚಿತ್ರ ಅಕಾಡೆಮಿಯ ಸ್ಥಾಪನೆಯ ಪ್ರಸ್ತಾಪ ಆಗಿತ್ತು. ಕನ್ನಡ ಚಿತ್ರರಂಗದ ಸಮಸ್ಯೆಗಳ ಅಧ್ಯಯನ ಮಾಡಿ ಸೂಕ್ತ ಶಿಫಾರಸುಗಳನ್ನು ಮಾಡಲು ನೇಮಿಸಿದ್ದ ವಿ.ಎನ್.ಸುಬ್ಬರಾವ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ಇದು ಆಯಿತು. ೧೯೯೬ರಲ್ಲಿ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದ ಭಾಷಣದಲ್ಲಿ ರಾಜ್ಯಪಾಲರು, ‘ಒಂದು ಕಲಾಪ್ರಕಾರವಾಗಿ, ಒಂದು ಉದ್ಯಮವಾಗಿ, ಸಮೂಹ ಮನರಂಜನೆಯ ಒಂದು ಮಾಧ್ಯಮವಾಗಿ ಚಲನಚಿತ್ರ ಮಾಧ್ಯಮದ ವ್ಯಾಪಾರ ಸಂವಹನ ಸಾಧ್ಯತೆ ಹಾಗೂ ಸಾಮರ್ಥ್ಯಗಳು ಸದಸ್ಯರಿಗೆ ತಿಳಿದೇ ಇದೆ. ಈ ಎಲ್ಲ ದೃಷ್ಟಿಯಿಂದ ಚಲನಚಿತ್ರ ಉದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕನ್ನಡ ಚಲನಚಿತ್ರ ಅಕಾಡೆಮಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದರು. ಆ ಸಾಲಿನ ಆಯವ್ಯಯ ಪತ್ರ ಮಂಡಿಸಿದ ಸಿದ್ದರಾಮಯ್ಯನವರು ಅದರ ಸ್ಥಾಪನೆಗಾಗಿ ೭.೫ ಲಕ್ಷ ರೂ. ಮೀಸಲಿಟ್ಟರು.

ಜುಲೈ ೨೨, ೧೯೯೬ರಂದು ಅಕಾಡೆಮಿ ಸ್ಥಾಪನೆಗೆ ಸಂಬಂದಪಟ್ಟ ಆದೇಶವೂ ಬಂತು. ಅದರಲ್ಲಿ ಯಾರು ಅಧ್ಯಕ್ಷರು, ಸದಸ್ಯರು ಆಗಬಹುದು, ಅದರ ಕಾರ್ಯವ್ಯಾಪ್ತಿ ಏನು ಇತ್ಯಾದಿ ವಿವರಗಳಿದ್ದವು. ವಿಶೇಷವಾಗಿ ರಾಜ್ಯ ಪ್ರಶಸ್ತಿಗಳಆಯ್ಕೆ, ಸಹಾಯಧನ ಮಂಜೂರು ಮಾಡಲು ಅವುಗಳ ಗುಣಮಟ್ಟ ಮತ್ತು ಇತರ ವಿಷಯಗಳನ್ನು ಪರಿಶೀಲಿಸಿ, ಅರ್ಹ ಚಿತ್ರಗಳನ್ನು ಶಿಫಾರಸು ಮಾಡುವುದು, ರಾಜ್ಯದಲ್ಲಿ ಚಲನಚಿತ್ರ ಸೊಸೈಟಿಗಳ ಅಭಿವೃದ್ಧಿಗೆ ಆವಶ್ಯವಿರುವ ಕ್ರಮ ಕೈಗೊಳ್ಳುವುದು, ಚಲನಚಿತ್ರ ರಂಗದ ವಿವಿಧ ಪ್ರಕಾರಗಳಲ್ಲಿ ಅವಶ್ಯವಿರುವ ತರಬೇತಿ ಏರ್ಪಡಿಸುವುದು, ಹಾಗೂ ಇತ್ತೀಚಿನ ತಾಂತ್ರಿಕ ಮತ್ತು ಇತರ ಬೆಳವಣಿಗೆಗೆಳನ್ನು ಗಮನದಲ್ಲಿರಿಸಿ ಕನ್ನಡ ಚಲನಚಿತ್ರರಂಗವು ಈ ನಿಟ್ಟಿನಲ್ಲಿ ಅವಶ್ಯಕತೆಗೆ ತಕ್ಕಂತೆ ಅಭಿವೃದ್ಧಿ ಹೊಂದುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು, ಕನ್ನಡ ಚಿತ್ರರಂಗದಲ್ಲಿ ಅಶ್ಲೀಲತೆ ಮತ್ತು ಹಿಂಸೆಯನ್ನು ಕಡಿಮೆ ಮಾಡಿ ಕುಟುಂಬವರ್ಗದವರು ಒಟ್ಟಿಗೆ ಚಲನಚಿತ್ರ ವೀಕ್ಷಿಸಲು ಸಹಕಾರಿಯಾಗುವಂತೆ ಕನ್ನಡ ಚಿತ್ರಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಅವಶ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದು ಇವೇ ಮುಂತಾಗಿ ಕಾರ್ಯವ್ಯಾಪ್ತಿ ಇತ್ತು.

ಅಕಾಡೆಮಿಯ ಅಧ್ಯಕ್ಷರ ನಾಮಕರಣ ಕುರಿತಂತೆ ಉದ್ಯಮ ಮತ್ತು ಸರ್ಕಾರದ ನಡುವೆ ಇದ್ದ ಭಿನ್ನಾಭಿಪ್ರಾಯದಿಂದ ಅಕಾಡೆಮಿಯ ಸ್ಥಾಪನೆ ಕಾರ್ಯಗತ ಆಗಲಿಲ್ಲ. ಮುಂದೆ ೨೦೦೮ -೦೯ರ ಸಾಲಿನಲ್ಲಿ ಆಯಿತು. ಸಿದ್ದರಾಮಯ್ಯನವರ ಅವಧಿಯಲ್ಲಿ ಕನ್ನಡ ಚಿತ್ರಗಳಿಗೆ ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ನೀಡಿದರು. ಆಗಿನ್ನೂ ಜಿಎಸ್‌ಟಿ ಬಂದಿರಲಿಲ್ಲ. ಕನ್ನಡ ಚಿತ್ರಗಳಿಗೆ ಈ ವಿನಾಯಿತಿಯಿಂದ ಸಾಕಷ್ಟು ಅನುಕೂಲ ಆಯಿತು. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಬದಲಾದಾಗಲೆಲ್ಲ ಚಿತ್ರನಗರಿಯ ಕುರಿತಂತೆ ಪ್ರಸ್ತಾಪ ಆಗುತ್ತಿತ್ತು. ಕಳೆದ ಬಾರಿ, ಚಿತ್ರನಗರಿಗಾಗಿ ೧೧೦ ಎಕರೆ ಜಮೀನನ್ನು ಮೈಸೂರಿನ ಇಮ್ಮಾವಿನ ಬಳಿ ಪಡೆದುಕೊಳ್ಳಲಾಯಿತು. ಆಗ ಅದರ ಇತರ ಕೆಲಸಗಳಾಗಿರಲಿಲ್ಲ. ಮತ್ತೆ ೫೦ ಎಕರೆ ಸೇರಿಸಿ, ಇದೀಗ ಅಲ್ಲಿ ಚಿತ್ರನಗರಿ ಸ್ಥಾಪಿಸಲು ನಿರ್ಧಾರ ಆಗಿದೆ.

ಈ ನಡುವೆ, ಬೆಂಗಳೂರಿನ ಹೆಸರಘಟ್ಟದ ಬಳಿ, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಗೆ ನೀಡಿದ ೨೫ ಎಕರೆ ಹೊರತಾಗಿ ಉಳಿದ ಜಮೀನನ್ನು ಅದನ್ನು ನೀಡಿದ ಪಶುಸಂಗೋಪನೆ ಇಲಾಖೆ ಮರಳಿ ಪಡೆದಿದೆ. ಅಲ್ಲೇ ಚಿತ್ರನಗರಿ ಸ್ಥಾಪನೆಯ ಮಾತಿತ್ತು. ದೇವಿಕಾರಾಣಿ ಎಸ್ಟೇಟ್‌ನ ಪ್ರಸ್ತಾಪವಿತ್ತು. ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ಮತ್ತು ಚಿತ್ರನಗರಿ ಸ್ಥಾಪನೆಯ ಪ್ರಸ್ತಾಪವನ್ನು ಆಗ ಮುಖ್ಯಮಂತ್ರಿಗಳಾಗಿದ್ದ, ಚಿತ್ರೋದ್ಯಮಿ ಎಚ್.ಡಿ.ಕುಮಾರಸ್ವಾಮಿ ಅವರು ಮುಂದಿಟ್ಟಿದ್ದರು. ಆದರೆ ಅದೇಕೋ ಏನೋ ಅವು ಯಾವುವೂ ನಡೆಯಲಿಲ್ಲ. ಇದೀಗ ಚಿತ್ರನಗರಿಯ ಯೋಜನೆ ಮೈಸೂರಿಗೆ ಸಾಗಿದೆ.

ಈಗಾಗಲೇ, ಚಿತ್ರನಗರಿಗಾಗಿ ಪಡೆದ ಜಾಗದ ಸುತ್ತ ಗೋಡೆ ಕಟ್ಟುವ ಕೆಲಸ ಸಾಗಿರುವ ಸುದ್ದಿ ಇದೆ. ಬಹುಶಃ ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ ಚಿತ್ರನಗರಿಗೆ ಶಂಕುಸ್ಥಾಪನೆ ಮಾಡುವ ಕೆಲಸ ಮಾಡಬಹುದು. ಹಾಗೆ ಶಂಕುಸ್ಥಾಪನೆಯಾದರೆ, ಹಿಂದಿನಂತೆ ಉಳಿಯದೆ ಚಿತ್ರನಗರಿಯ ಕೆಲಸ ಮುಂದೆ ಸಾಗಲಿ ಎಂದು ಆಶಿಸೋಣ. ಬೆಂಗಳೂರಿನಲ್ಲಿ ದೇವರಾಜ ಅರಸು ಅವರು ಚಿತ್ರನಗರಿಗೆ ಶಂಕುಸ್ಥಾಪನೆ ಮಾಡಿದ ಹಾಗೆ, ಮಕ್ಕಳ ಚಲನಚಿತ್ರ ಕಾಂಪ್ಲೆಕ್ಸ್‌ಗಾಗಿ ಅಲ್ಲಿ ಸ್ಯಾಂಕಿ ಕೆರೆಯ ದಡದಲ್ಲಿ ಅಂದಿನ ಪ್ರಧಾನ ಮಂತ್ರಿ ರಾಜೀವ ಗಾಂಧಿ ೧೯೮೫ರ ನವೆಂಬರ್ ೧೪ರಂದು ಅಡಿಗಲ್ಲು ಹಾಕಿದ್ದರು. ಆದರೆ ಪರಿಸರವಾದಿಗಳು ಅಲ್ಲಿ ಸಂಕೀರ್ಣ ತಲೆ ಎತ್ತುವುದನ್ನು ಬಲವಾಗಿ ವಿರೋಧಿಸಿ ಯಶಸ್ವಿಯಾದರು. ಆ ಯೋಜನೆ ಹತ್ತು ವರ್ಷಗಳ ನಂತರ ಹೈದರಾಬಾದಿಗೆ ಹೋಯಿತು. ಅಲ್ಲಿ ಕೂಡ ಆ ಕೆಲಸ ಮುಗಿದಿಲ್ಲ! ಸಿದ್ದರಾಮಯ್ಯನವರು ಮೊದಲನೇ ಬಾರಿ ಮುಖ್ಯಮಂತ್ರಿಗಳಾಗಿ ಬಂದಾಗ, ಉದ್ಯಮದ ಬೇಡಿಕೆಯಂತೆ ೭೫ರ ಬದಲು ೧೨೫ ಚಿತ್ರಗಳಿಗೆ ಸಹಾಯಧನ ನೀಡಲು ಆದೇಶಿಸಿದರು. ನಂತರ ಬಂದ ಮುಖ್ಯಮಂತ್ರಿಗಳ ಬಳಿ ಮತ್ತೆ ೫೦ ಚಿತ್ರಗಳನ್ನು ಏರಿಸಲು ಹೇಳಿದರೆ, ಅವರು ೭೫ ಏರಿಸಿ, ೨೦೦ ಚಿತ್ರಗಳಿಗೆ ಸಹಾಯಧನ ಎಂದು ಪ್ರಕಟಿಸಿದರು. ಡಬ್ಬಿಂಗ್ ಮತ್ತು ರಿಮೇಕ್ ಹೊರತಾಗಿ, ರಾಜ್ಯದಲ್ಲೇ ತಯಾರಾದ ಉತ್ತಮ ಗುಣಮಟ್ಟದ, ಸದಭಿರುಚಿಯ ಚಿತ್ರಗಳಿಗೆ ಸಹಾಯಧನ ನೀಡಲಾಗುತ್ತಿದೆ.

ಸಿದ್ದರಾಮಯ್ಯನವರ ಈ ಅವಧಿಯಲ್ಲೇ ಅವರು ಚಿತ್ರಮಂದಿರಗಳಲ್ಲಿ ಪ್ರವೇಶ ಶುಲ್ಕವನ್ನು ಗರಿಷ್ಟ ೨೦೦ ರೂ. ಮೀರದಂತೆ ಹೊರಡಿಸಿದ ಆದೇಶಕ್ಕೆ ತಡೆಯಾಜ್ಞೆಯ ಕಾರಣ ಅದಿನ್ನೂ ಜಾರಿಯಾಗಿಲ್ಲ. ಡಿಜಿಟಲ್‌ಗೆ ಸಿನಿಮಾ ಹೊರಳಿದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. ಕನ್ನಡ ಚಿತ್ರೋದ್ಯಮ ಹೊರಳು ಹಾದಿಯಲ್ಲಿದೆ. ೨೦೧೧ರಲ್ಲಿ ಐದು ವರ್ಷದ ಅವಽಗೆ ಬಂದ ಚಲನಚಿತ್ರ ನೀತಿಗೆ ಮತ್ತೆ ಹತ್ತು ವರ್ಷ ಸೇರಿದೆ. ಸಮಗ್ರ ಚಲನಚಿತ್ರ ನೀತಿಯೊಂದರ ಅಗತ್ಯ ಇವತ್ತು ಇದೆ. ಆ ನಿಟ್ಟಿನಲ್ಲಿ ವಾರ್ತಾ ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಗಮನ ಹರಿಸಲಿ. ಚಿತ್ರನಗರಿಯ ಯೋಜನೆ ಸಫಲವಾಗಲಿ

” ರಾಜ್ಯದಲ್ಲಿ ಮುಖ್ಯಮಂತ್ರಿಗಳು ಬದಲಾದಾಗಲೆಲ್ಲ ಚಿತ್ರನಗರಿಯ ಕುರಿತಂತೆ ಪ್ರಸ್ತಾಪ ಆಗುತ್ತಿತ್ತು. ಕಳೆದಬಾರಿ, ಚಿತ್ರನಗರಿಗಾಗಿ ೧೧೦ ಎಕರೆ ಜಮೀನನ್ನು ಮೈಸೂರಿನ ಇಮ್ಮಾವಿನ ಬಳಿ ಪಡೆದುಕೊಳ್ಳಲಾಯಿತು. ಆಗ ಅದರ ಇತರ ಕೆಲಸಗಳಾಗಿರಲಿಲ್ಲ. ಮತ್ತೆ ೫೦ ಎಕರೆ ಸೇರಿಸಿ, ಇದೀಗ ಅಲ್ಲಿ ಚಿತ್ರನಗರಿ ಸ್ಥಾಪಿಸಲು ನಿರ್ಧಾರ ಆಗಿದೆ”

Tags:
error: Content is protected !!