Mysore
28
broken clouds

Social Media

ಬುಧವಾರ, 07 ಜನವರಿ 2026
Light
Dark

‘ಬಡವರಿಗೆ ನೀಡಿದ ಭೂಮಿಯನ್ನು ಕಬಳಿಸುವ ಯತ್ನ’

ಸಾಲಿಗ್ರಾಮ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಚಂದ್ರು ಆರೋಪ

ಸಾಲಿಗ್ರಾಮ: ದಲಿತ ಮತ್ತು ಹಿಂದುಳಿದ ವರ್ಗದ ಬಡವರಿಗೆಂದು ಸರ್ಕಾರವು ನೀಡಿರುವ ಸರ್ಕಾರಿ ಭೂಮಿಯನ್ನು ಬಡವರಿಂದ ಉಳ್ಳವರು ಅಕ್ರಮವಾಗಿ ಕಬಳಿಸುವ ಯತ್ನವನ್ನು ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು ಆರೋಪಿಸಿದರು.

ತಾಲ್ಲೂಕಿನ ತಿಂಗಳ ಮಾವನ ಕಟ್ಟೆಯ ಬಳಿ ರೈತರ ಜಮೀನಿನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಹರದನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.೧೯೭ರಲ್ಲಿ ಹಲವಾರು ಬಡ ರೈತರುಗಳನ್ನು ಗುರುತಿಸಿ ಸರ್ಕಾರಿ ಗೋಮಾಳದ ಜಾಗವನ್ನು ನೀಡಿದೆ. ಅದಕ್ಕಾಗಿ ಆ ರೈತರುಗಳಿಗೆ ಈಗಾಗಲೇ ಸಾಗುವಳಿ ಚೀಟಿಯನ್ನು ಕೂಡ ನೀಡಲಾಗಿದೆ. ಅದರ ಆಧಾರದ ಮೇಲೆ ರೈತರು ಆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅಂತಹ ಬಡ ರೈತರುಗಳಿಗೆ ಸರ್ಕಾರವು ನೀಡಿರುವ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಹಲವರು ಮಾಡುತ್ತಿದ್ದಾರೆ. ಸರ್ಕಾರವು ಬಡವರಿಗಾಗಿ ನೀಡಿರುವ ಸರ್ಕಾರಿ ಜಮೀನಿನ ಸಾಗುವಳಿಯ ಚೀಟಿಯ ಜೊತೆಗೆ ಅವರು ಅನುಭವದಲ್ಲಿರುವ ಭೂಮಿಯನ್ನು ಆ ರೈತರುಗಳಿಗೆ ದುರಸ್ತಿ ಮಾಡಿಕೊಡದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ.

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳು ಕೂಡಲೇ ಇದರ ಬಗ್ಗೆ ಅಗತ್ಯ ಕ್ರಮವಹಿಸಿ ಈ ಭಾಗದ ರೈತರುಗಳಿಗೆ ನೀಡಿರುವ ಸಾಗುವಳಿ ಚೀಟಿ ಮತ್ತು ಅನುಭವದ ಆಧಾರದ ಮೇಲೆ ಭೂಮಿಯನ್ನು ದುರಸ್ತಿ ಮಾಡಿಕೊಟ್ಟು ಅನುಕೂಲ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸದಿದ್ದರೆ ತಾಲ್ಲೂಕು ಆಡಳಿತದ ಕಚೇರಿಯ ಮುಂದೆ ಸಂಘಟನೆಯ ವತಿಯಿಂದ ಈ ಭಾಗದ ರೈತರುಗಳನ್ನು ಒಗ್ಗೂಡಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಲಿತ ಮುಖಂಡರುಗಳಾದ ಲಕ್ಕಿಕುಪ್ಪೆ ರಮೇಶ್, ರಾಮಕೃಷ್ಣ, ಸಾಲಿಗ್ರಾಮ ಶ್ರೀನಿವಾಸ, ಬೆಟ್ಟಹಳ್ಳಿ ಸಣ್ಣಯ್ಯ, ಸುರೇಶ, ರಮೇಶ್, ದಡದಹಳ್ಳಿ ಪ್ರೀತಮ್, ರೈತ ಮಹಿಳೆಯರು ಹಾಜರಿದ್ದರು.

‘ಆತ್ಮಹತ್ಯೆಯೊಂದೇ ದಾರಿ’:  ಸಾಗುವಳಿ ಚೀಟಿ ಪಡೆದ ರೈತರುಗಳಾದ ಸಿದ್ದರಾಜು, ಯೋಗೇಶ, ಕುಮಾರ, ದೇವೇಗೌಡ ಅವರುಗಳು ಮಾತನಾಡಿ, ಬಡತನದಿಂದ ಜೀವನ ಸಾಗಿಸುತ್ತಿರುವ ನಮಗೆ ಸರ್ಕಾರವು ಸಾಗುವಳಿ ಚೀಟಿಯನ್ನು ನೀಡಿದೆ. ಅದರಂತೆ ನಮ್ಮ ಹೆಸರಿಗೆ ಖಾತೆಯೂ ಆಗಿದೆ. ಆದರೆ ಇದುವರೆಗೂ ನಮಗೆ ನೀಡಿರುವ ಸಾಗುವಳಿ ಚೀಟಿ ಮತ್ತು ನಾವು ಅನುಭವದಲ್ಲಿರುವ ಆಧಾರದ ಮೇಲೆ ಭೂಮಿಯನ್ನು ದುರಸ್ತಿ ಮಾಡಿಕೊಟ್ಟಿಲ್ಲ. ಇರುವ ಭೂಮಿಯ ಜಾಗವನ್ನೇ ಬೇರೆಯವರು ಅಕ್ರಮವಾಗಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಆಕಸ್ಮಿಕವಾಗಿ ಈ ಭೂಮಿಯನ್ನು ಯಾರಾದರೂ ನಮ್ಮಿಂದ ಕಿತ್ತುಕೊಂಡರೆ ಈ ಭೂಮಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ನಾವು ಬೀದಿಗೆ ಬರುವಂತಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವುಗಳೆಲ್ಲರೂ ಆತ್ಮಹತ್ಯೆಯ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

Tags:
error: Content is protected !!