Mysore
28
broken clouds

Social Media

ಬುಧವಾರ, 07 ಜನವರಿ 2026
Light
Dark

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆ: ಸಂವಿಧಾನದ ಆತ್ಮಕ್ಕೆ ಗೌರವ

ಬೆಂಗಳೂರು ಡೈರಿ 

ಆರ್.ಟಿ.ವಿಠ್ಠಲಮೂರ್ತಿ 

ಘನತೆಯ ಬದುಕು ಬಯಸುವ ಮನುಷ್ಯನ ಹಕ್ಕನ್ನು ಎತ್ತಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ 

ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ರಚನೆಯಾದ ಸಂವಿಧಾನ ೧೯೪೯ ನವೆಂಬರ್ ೨೬ರಂದು ಅಂಗೀಕಾರವಾಯಿತು.

ಹೀಗೆ ಅಂಗೀಕಾರವಾದ ಸಂವಿಧಾನದ ಆತ್ಮವೇ ಆದ ಪೀಠಿಕೆ ಹೀಗೆ ಹೇಳುತ್ತದೆ: ನಾವು, ಭಾರತದ ಜನರೆಲ್ಲರೂ ಭಾರತವನ್ನು ಸಾರ್ವಭೌಮ, ಸಮಾಜವಾಗಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು ಸಂಕಲ್ಪಿಸಿ ಮತ್ತು ಅದರ ಎಲ್ಲಾ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ: ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಯ ಸ್ವಾತಂತ್ರ್ಯ: ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ: ಮತ್ತು ಅವರೆಲ್ಲರಲ್ಲಿ ವೈಯಕ್ತಿಕ ಘನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಖಚಿತಪಡಿಸುವ ಭ್ರಾತ್ವತ್ವವನ್ನು ಉತ್ತೇಜಿಸಲು ನಿರ್ಧರಿಸಿ ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಈ ೧೯೪೯ ರ ನವೆಂಬರ್ ಮಾಹೆಯ ೨೬ ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಅಂಗೀಕರಿಸಿ ಶಾಸನವನ್ನಾಗಿ ವಿಧಿಸಿಕೊಂಡು, ನಮಗೇ ಅರ್ಪಿಸಿ ಕೊಳ್ಳುತ್ತಿದ್ದೇವೆ.

ಹೀಗೆ ಸಂವಿಧಾನದ ಆತ್ಮವೇ ಆಗಿರುವ ಪೀಠಿಕೆ ಎಷ್ಟು ಸ್ಪಷ್ಟವಾಗಿದೆ ಎಂದರೆ ಇದನ್ನು ಯಥಾವತ್ತಾಗಿ ಜಾರಿಗೆ ತರಲು ಸಾಧ್ಯವಾಗಿದ್ದರೆ ಭಾರತ ಇಂದು ವಿಶ್ವಗುರುವಾಗಿ ಯಾವುದೋ ಕಾಲವಾಗುತ್ತಿತ್ತು. ವಿಪರ್ಯಾಸ ವೆಂದರೆ ಸಂವಿಧಾನದ ಪೀಠಿಕೆಯ ಪ್ರಕಾರ ಈ ದೇಶವನ್ನು ರೂಪಿಸಲು ಇವತ್ತಿಗೂ ನಮ್ಮ ಆಡಳಿತಗಾರರು ಪರದಾಡುತ್ತಿದ್ದಾರೆ ಅಥವಾ ಸಂವಿಧಾನದ ಆತ್ಮವನ್ನು ಎತ್ತಿ ಹಿಡಿಯಲು ವಿಫಲರಾಗಿದ್ದಾರೆ ಅಥವಾ ಅದನ್ನು ವಿರೋಧಿಸುವ ಶಕ್ತಿಗಳ ಕೈಗೊಂಬೆಗಳಾಗಿದ್ದಾರೆ. ಇಂತಹ ದುರಂತದ ನಡುವೆಯೂ ಸಂವಿಧಾನದ ಆತ್ಮವನ್ನು ಗೌರವಿಸುವ ಮತ್ತು ಅದಕ್ಕೆ ಶಕ್ತಿ ತುಂಬುವ ಪ್ರಯತ್ನಗಳಾಗಿಲ್ಲ ಎಂದಲ್ಲ. ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸಚಿವ ಬಸವಲಿಂಗಪ್ಪನವರ ಒತ್ತಾಸೆಯಿಂದ ರೂಪುಗೊಂಡು ಮಲ ಹೊರುವ ಪದ್ಧತಿಯನ್ನು ನಿಷೇಧಿಸುವ ಕಾಯ್ದೆ ಅಂಗೀಕಾರವಾದಾಗ ಇಡೀ ದೇಶ ನಿಬ್ಬೆರಗಾಗಿ ನೋಡಿತ್ತು.

ಮನುಷ್ಯನ ಆತ್ಮಗೌರವವನ್ನು ಎತ್ತಿ ಹಿಡಿಯುವುದೇ ಸಂವಿಧಾನದ ಆತ್ಮವನ್ನು ಗೌರವಿಸುವ ಪರಿ ಎಂಬುದನ್ನು ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ರಾಜ್ಯ ಎತ್ತಿ ತೋರಿಸಿತು. ಇದಾದ ನಂತರ ಸಂವಿಧಾನದ ಆತ್ಮವನ್ನು ಗೌರವಿಸುವ ಹಲವು ಪ್ರಯತ್ನಗಳಾಗಿವೆಯಾದರೂ ಒಟ್ಟಾರೆಯಾಗಿ ನೋಡಿದರೆ ಸಂವಿಧಾನದ ಆತ್ಮಕ್ಕೆ ಇನ್ನೂ ಮೈ ತುಂಬ ಬಟ್ಟೆ ಹೊದಿಸುವ ಕೆಲಸವಾಗಿಲ್ಲ. ಮೊನ್ನೆ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕಾರವಾದ ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆ ಕೂಡ ಹೀಗೆ ಸಂವಿಧಾನದ ಆತ್ಮಕ್ಕೆ ಗೌರವ ತರುವ ಪ್ರಯತ್ನ ಎಂಬುದು ನಿಸ್ಸಂದೇಹ.

ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್ ಅವರಂತಹ ನಾಯಕರ ಒತ್ತಾಸೆ ಇಲ್ಲದಿದ್ದರೆ ಸಾಮಾಜಿಕ ಬಹಿಷ್ಕಾರ ತಡೆ ಮತ್ತು ನಿಷೇಧ ಕಾಯ್ದೆ ಜಾರಿಗೆ ಬರಲು ಇನ್ನೆಷ್ಟು ಕಾಲ ಕಾಯಬೇಕಿತ್ತೋ ಗೊತ್ತಿಲ್ಲ.ಆದರೆ ಸರ್ಕಾರದಲ್ಲಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಂತಹದೊಂದು ಮಹತ್ವದ ಕಾಯ್ದೆ ಜಾರಿಗೆ ಬರಲು ಕಾರಣರಾದ ಈ ನಾಯಕರು ಅಭಿನಂದನಾರ್ಹರು. ಏಕೆಂದರೆ ಸಾಮಾಜಿಕ ಬಹಿಷ್ಕಾರದಂತಹ ಪಿಡುಗನ್ನು ಪ್ರೋತ್ಸಾಹಿಸುವ ಶಕ್ತಿಗಳು ಈಗಲೂ ಎಷ್ಟು ಬಲಿಷ್ಠವಾಗಿವೆ ಎಂದರೆ, ಬಹುತೇಕ ಕ್ಷೇತ್ರಗಳಲ್ಲಿ ಇಂತಹ ಶಕ್ತಿಗಳು ಆಳುವವರು ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಜಾಗದಲ್ಲಿವೆ.

ಹೀಗಾಗಿ ಇಂತಹ ಶಕ್ತಿಗಳನ್ನು ವಿರೋಧಿಸಿ ಸಾಮಾಜಿಕ ಬಹಿಷ್ಕಾರ ತಡೆ ಮತ್ತು ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಪ್ರಬಲ ಇಚ್ಛಾಶಕ್ತಿ ಬೇಕು ಮತ್ತು ಸಾಮಾಜಿಕ ಬಹಿಷ್ಕಾರದ ಕರಾಳ ಮುಖವನ್ನು ಖುದ್ದು ಬಲ್ಲ ಮನಸ್ಸು ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನವರು ಇಂತಹ ಅರಿವು ಮತ್ತು ಮನಸ್ಸನ್ನು ಹೊಂದಿದ ನಾಯಕರು ಎಂಬುದು ನಿಸ್ಸಂದೇಹ.

ಅಂದ ಹಾಗೆ ಸಂವಿಧಾನದ ಪೀಠಿಕೆಯ ಆರಂಭವನ್ನೇ ನೋಡಿ.ನಾವು ಭಾರತದ ಜನರೆಲ್ಲರೂ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು ಸಂಕಲ್ಪಿಸಿ ಮತ್ತು ಅದರ ಎಲ್ಲ ನಾಗರಿಕರಿಗೆ ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಒದಗಿಸುವ ಸದುದ್ದೇಶದ ಬಗ್ಗೆ ಹೇಳುತ್ತದೆ. ಆದರೆ ಅದರ ಸದುದ್ದೇಶ ಸಮರ್ಪಕವಾಗಿ ಈಡೇರಿದೆಯೇ ಎಂದು ನೋಡಿದರೆ ಅಲ್ಲೂ ವಿಷಾದವೇ ಎದ್ದು ಕಾಣುತ್ತದೆ. ಈ ಸದುದ್ದೇಶ ಈಡೇರಿಲ್ಲ ಎಂಬುದಕ್ಕೆ ಸಾಮಾಜಿಕ ಬಹಿಷ್ಕಾರದ ಪಿಡುಗು ಇವತ್ತಿಗೂ ಜೀವಂತಾಗಿರುವುದೇ ಕಾರಣ.

ಮತ್ತು ಇದು ಏಕೆ ಸಾಧ್ಯವಾಗಿದೆ ಎಂದರೆ ಇವತ್ತಿಗೂ ಈ ದೇಶದಲ್ಲಿ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಮಾನತೆ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಹೀಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಬಲಿಷ್ಠವಾಗಿರುವ ಶಕ್ತಿಗಳು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲರಾದವರನ್ನು ತಮ್ಮ ಮನಸ್ಸಿಗೆ ಬಂದಂತೆ ಹಣಿಯುತ್ತಲೇ ಇವೆ.

ಹೀಗಾಗಿ ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಸಾಮಾಜಿಕ ಬಹಿಷ್ಕಾರದ ಪಿಡುಗು ಜೀವಂತವಾಗಿರುವುದಕ್ಕೆ ನಿದರ್ಶನಗಳು ಸಿಗುತ್ತವೆ ಮತ್ತು ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವವರ ಹಿಡಿತಕ್ಕೆ ಸಿಕ್ಕು ನರಳುವ ದುರ್ಬಲರು ಎಲ್ಲ ಜಾತಿಗಳಲ್ಲೂ ಇದ್ದಾರೆ ಎಂಬುದೇ ಅದರ ವ್ಯಾಪ್ತಿ ಎಷ್ಟು ವಿಸ್ತಾರವಾಗಿದೆ ಎಂಬುದಕ್ಕೆ ಸಾಕ್ಷಿ. ರಾಮಪ್ಪ ಊರ ಮಧ್ಯೆ ಇರುವ ಬಾವಿಯಲ್ಲಿ ನೀರು ಸೇದಿದ, ವೆಂಕಟಸ್ವಾಮಿಯ ಮಗ ಕುಲೀನ ಮನೆಯ ಹೆಣ್ಣು ಮಗಳನ್ನು ಪ್ರೇಮವಿವಾಹವಾದ, ಈ ಸಮುದಾಯದ ಜನ ತಪ್ಪು ಮಾಡಿದ್ದಾರೆ ಎಂಬುದರಿಂದ ಹಿಡಿದು ಹಲವಾರು ವಿಷಯಗಳು ಬಲಿಷ್ಠರ ಕೆಂಗಣ್ಣಿಗೆ ಸಿಲುಕಿ ವ್ಯಕ್ತಿ ಮತ್ತು ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರದ ವಿಧಿಸುವ ಮಟ್ಟಕ್ಕೆ ಹೋಗುತ್ತವೆ.

ಅಂದ ಹಾಗೆ ಸಾಮಾಜಿಕ ಬಹಿಷ್ಕಾರ ಎಂಬುದೇ ಮನುಷ್ಯತ್ವಕ್ಕೆ ವಿರುದ್ಧವಾದ ಕೆಲಸ. ಆದರೆ ಇಂತಹ ಕೆಲಸ ಮಾಡುವವರು ಸಾಮಾಜಿಕವಾಗಿ, ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಬಲಾಢ್ಯರಾಗಿರುತ್ತಾರೆ. ಹೀಗಾಗಿ ಅವರ ಮಾತನ್ನು ಆಯಾ ಪ್ರದೇಶಗಳ ಜನ ಮತ್ತು ಹಲವು ಬಾರಿ ಊರ ಪಂಚಾಯ್ತಿಗಳು ಒಪ್ಪಿಕೊಳ್ಳುತ್ತವೆ. ಹೀಗೆ ಅವು ಒಪ್ಪಿಕೊಳ್ಳುತ್ತವೆ ಎಂಬುದೇ ನಮ್ಮಲ್ಲಿ ರಾಜಕೀಯ ನ್ಯಾಯವೂ ಮರೀಚಿಕೆ ಎಂಬುದರ ಸಂಕೇತ. ಆದರೆ ಇಂತಹ ದುಷ್ಟ ಪಿಡುಗನ್ನು ಬೇರು ಸಮೇತ ಕಿತ್ತು ತೆಗೆಯಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್ ಅವರಂತಹ ನಾಯಕರು ಗೌರವದಿಂದ ಬದುಕಲು ಬಯಸುವ ಮನುಷ್ಯನ ಹಕ್ಕನ್ನು ಎತ್ತಿ ಹಿಡಿದಿದ್ದಾರೆ.

ಕೆಲ ಕಾಲದ ಹಿಂದೆ ಸಂವಿಧಾನವನ್ನು ವಿರೋಧಿಸುವ ಶಕ್ತಿಗಳು ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿದ್ದಾಗ ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪನವರು ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾಗಳನ್ನು ನಡೆಸುವ ಮೂಲಕ ಸಂವಿಧಾನಕ್ಕೆ ಆ ಮೂಲಕ ಮನುಷ್ಯನ ಆತ್ಮಗೌರವಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಅವರ ಈ ಪ್ರಯತ್ನ ಸಂವಿಧಾನ ವಿರೋದಿ ಶಕ್ತಿಗಳಿಗೆ ಯಾವ ಮಟ್ಟದಲ್ಲಿ ಘಾಸಿ ಮಾಡಿತ್ತು ಎಂದರೆ ಮುಂದೆ ಸಂವಿಧಾನದ ವಿರುದ್ಧ ಮಾತನಾಡುವುದನ್ನು ಫ್ಯಾಷನ್ ಮಾಡಿಕೊಂಡಿದ್ದವರು ಬಾಯಿ ಮುಚ್ಚಿಕೊಂಡರು. ಹೀಗೆ ಅವರು ಬಾಯಿ ಮುಚ್ಚಿಕೊಳ್ಳುವಂತೆ ಮಾಡಿದ ಕೀರ್ತಿ ನಿಸ್ಸಂಶಯವಾಗಿ ಹೆಚ್.ಸಿ.ಮಹದೇವಪ್ಪನವರದು. ಅವತ್ತು ಇಂತಹ ಕೆಲಸ ಮಾಡಿದ ಅವರು, ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ನಿಂತು ಸಾಮಾಜಿಕ ಬಹಿಷ್ಕಾರ ತಡೆ ಮತ್ತು ನಿಷೇಧ ಕಾಯ್ದೆಯ ಜಾರಿಗೆ ಕಾರಣರಾಗಿದ್ದಾರೆ. ಅಂದ ಹಾಗೆ ಮನುಷ್ಯನ ಆತ್ಮಗೌರವವನ್ನು ಎತ್ತಿ ಹಿಡಿಯುವ ಇಂತಹ ಕೆಲಸವನ್ನು ವರ್ತಮಾನ ಎಷ್ಟರ ಮಟ್ಟಿಗೆ ಗುರುತಿಸುತ್ತದೋ ಗೊತ್ತಿಲ್ಲ. ಆದರೆ ಈ ಕಾರ್ಯದ ಮಹತ್ವವನ್ನು ಇತಿಹಾಸ ನಿಸ್ಸಂಶಯವಾಗಿ ಸ್ಮರಿಸುತ್ತದೆ.

” ಸಂವಿಧಾನದ ಆತ್ಮವೇ ಆಗಿರುವ ಪೀಠಿಕೆಯನ್ನು ಯಥಾವತ್ತಾಗಿ ಜಾರಿಗೆ ತರಲು ಸಾಧ್ಯವಾಗಿದ್ದರೆ ಭಾರತ ಇಂದು ವಿಶ್ವಗುರುವಾಗಿ ಯಾವುದೋ ಕಾಲವಾಗುತ್ತಿತ್ತು. ವಿಪರ್ಯಾಸವೆಂದರೆ ಸಂವಿಧಾನದ ಪೀಠಿಕೆಯ ಪ್ರಕಾರ ಈ ದೇಶವನ್ನು ರೂಪಿಸಲು ಇವತ್ತಿಗೂ ನಮ್ಮ ಆಡಳಿತಗಾರರು ಪರದಾಡುತ್ತಿದ್ದಾರೆ ಅಥವಾ ಸಂವಿಧಾನದ ಆತ್ಮವನ್ನು ಎತ್ತಿ ಹಿಡಿಯಲು ವಿಫಲರಾಗಿದ್ದಾರೆ”

Tags:
error: Content is protected !!