Mysore
25
scattered clouds

Social Media

ಬುಧವಾರ, 07 ಜನವರಿ 2026
Light
Dark

ಬಳ್ಳಾರಿ ಗಲಭೆ ಪ್ರಕರಣ: ನಿರ್ದಾಕ್ಷಿಣ್ಯ ಕ್ರಮ ಅಗತ್ಯ  

ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿಗೀಡಾದ ಪ್ರಕರಣ ರಾಜಕೀಯ ಪ್ರತಿಷ್ಠೆಯ ಅಂಗಣವಾಗಿದೆ. ಅಮಾಯಕ ಮೃತಪಟ್ಟಿರುವ ಬಗ್ಗೆ ಆಘಾತದ ಮಾತುಗಳಿಗಿಂತ ವೈಯಕ್ತಿಕ ರಾಜಕೀಯ ದ್ವೇಷದ ದಳ್ಳುರಿಯೇ ಎದ್ದುಕಾಣುತ್ತಿರುವುದು ಮಾನವೀಯ ಸಮಾಜಕ್ಕೆ ಅಪಾಯಕಾರಿಯಾಗಿದೆ. ಬ್ಯಾನರ್ ಕಟ್ಟುವ ಪ್ರಕಣ ರಾಜಕೀಯ ಹಿಂಸಾಚಾರವಾಗಿ ಪರಿಣಮಿಸಿದೆ.

ಬಳ್ಳಾರಿ ರಿಪಬ್ಲಿಕ್ ಎಂಬ ನಾಮವಿಶೇಷಣಕ್ಕೆ ಹತ್ತಿರುವಾಗುತ್ತಿರುವ ಅನುಮಾನ ವ್ಯಕ್ತವಾಗಿದೆ. ಶಾಸಕರಾದ ಜನಾರ್ಧನ ರೆಡ್ಡಿ-ನಾರಾ ಭರತ್ ರೆಡ್ಡಿ ಅವರ ನಡುವಿನ ಜಿದ್ದಾಜಿದ್ದಿ ಮುನ್ನೆಲೆಗೆ ಬಂದಿದೆ. ಗಲಾಟೆ ವೇಳೆ ಗನ್‌ನಿಂದ ಸಿಡಿದ ಗುಂಡು ರಾಜ ಶೇಖರ್ ಪ್ರಾಣ ತೆಗೆದಿದೆ. ಎಫ್‌ಎಸ್‌ಎಲ್ ವರದಿ ಕೂಡ ಗುಂಡೇಟಿನಿಂದ ರಾಜ ಶೇಖರ್ ಅಸುನೀಗಿದ್ದಾರೆ ಎಂಬುದಾಗಿ ದೃಢಪಡಿಸಿದೆ ಎಂದು ಹೇಳಲಾಗಿದೆ.

ಆದರೆ, ಜನಾರ್ಧನ ರೆಡ್ಡಿ ಅವರು ಈ ಗಲಭೆಯು ನನ್ನ ಕೊಲೆಗೆ ಹೆಣೆದಿದ್ದ ಸಂಚು ಎಂದು ಆರೋಪಿಸಿದ್ದಾರೆ. ಅತ್ತ ಸತೀಶ್ ರೆಡ್ಡಿ ಅವರ ಮೂವರು ಅಂಗರಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಶೇಖರ್ ಮೃತಪಟ್ಟಿರುವ ಬಗ್ಗೆ ಸ್ಥಳೀಯ ರಾಜ ಕೀಯ ನಾಯಕರಿಗೆ ಯಾರಿಗೂ ಕಾಳಜಿ ತೋರಿಸುವಷ್ಟು ವ್ಯವಧಾನ ಇಲ್ಲದಂತಾಗಿದೆ. ಅಲ್ಲದೆ, ಸ್ಥಳೀಯ ರಾಜಕೀಯದಲ್ಲಿ ಗನ್ ಸಂಸ್ಕೃತಿಯ ಅಂಕುರಾರ್ಪಣೆ ಮಾಡಿದಂತಾಗಿದೆ. ಇದರೊಂದಿಗೆ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ನಿರತವಾಗಿವೆ. ಗೃಹ ಸಚಿವರು ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದರೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರು ಇದು ಜನಾರ್ಧನ ರೆಡ್ಡಿ ಅವರ ಕಿತಾಪತಿ ಎಂದು ಕಿಡಿಕಾರಿದ್ದಾರೆ.

ಇನ್ನೂ ಮುಂದುವರಿದು ಕಾಂಗ್ರೆಸ್ ಪಕ್ಷ ಭರತ್ ರೆಡ್ಡಿ ಅವರ ಬೆಂಬಲಕ್ಕೆ ಇದೆ ಎಂದಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರತ್ ರೆಡ್ಡಿ ವಿರುದ್ಧ ಗರಂ ಆಗಿದ್ದು, ಅವರೊಡನೆ ಮಾತನಾಡುವುದಕ್ಕೂ ನಿರಾಕರಿಸಿದ್ದಾರೆ ಎನ್ನಲಾಗಿದೆ. ಗಲಾಟೆಯ ನಂತರದ ಬೆಳವಣಿಗೆ ಗಳನ್ನು ಗಮನಿಸಿದರೆ, ಆರೋಪಿಗಳ ಪತ್ತೆ, ಬಂಧನ, ತಪ್ಪಿತಸ್ಥರಿಗೆ ಶಿಕ್ಷೆ… ಈ ಯಾವುದೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಬೇಕಿಲ್ಲ ಎಂಬಂತಿದೆ. ಸ್ಥಳೀಯ ರಾಜಕೀಯ ಅಥವಾ ರಾಜಕಾರಣಿಗಳನ್ನು ಈ ಪ್ರಕರಣದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುವ ಅವಶ್ಯಕತೆ ಇಲ್ಲ. ಪೊಲೀಸರು ಜನಾರ್ಧನ ರೆಡ್ಡಿ, ಭರತ್ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಿ ದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿದೆ. ಡಿ. ಕೆ.ಶಿವಕುಮಾರ್ ಅವರು, ಜನಾರ್ಧನ ರೆಡ್ಡಿ ಅವರು ಬಳ್ಳಾರಿ ಪ್ರವೇಶಿಸಿದ ನಂತರ ಗಲಾಟೆ ಆಗಿದೆ, ಅವರು ಗಡಿ ಪಾರಾಗಿದ್ದಾಗ ಬಳ್ಳಾರಿ ಪ್ರಶಾಂತವಾಗಿತ್ತು ಎಂದಿದ್ದಾರೆ. ಇಂತಹ ಮಾತುಗಳಿಗಿಂತ ವಾಸ್ತವವಾಗಿ ಏನು ನಡೆದಿದೆ, ನಿಜವಾದ ತಪ್ಪಿತಸ್ಥರು ಯಾರು ಎಂಬುದನ್ನು ತನಿಖೆ ಮಾಡುವ ಜರೂರತ್ತು ಇದೆ.

ಸಾಮಾನ್ಯವಾಗಿ ರಾಜಕೀಯ ಹಿಂಸಾಚಾರ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿತ್ತು. ಅದೀಗ ಕರ್ನಾಟಕಕ್ಕೂ ಕಾಲಿಡುವ ಸೂಚನೆ ನೀಡಿದೆ. ಗಣಿಗಾರಿಕೆ ವಿಚಾರದಲ್ಲಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಈ ಜಿಲ್ಲೆಯು ಹಿಂಸೆಯ ಕೂಪವಾಗುವ ಲಕ್ಷಣಗಳು ಗೋಚರ ವಾಗಿವೆ. ಇದನ್ನು ಚಿಗುರಿನಲ್ಲೇ ಚಿವುಟಿ ಹಾಕುವ ಅಗತ್ಯ ಇದೆ. ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರಕ್ಕೆ ಇಂತಹ ದುರಂತ ನಡೆದಿರುವ ಬಗ್ಗೆ ಜನಪ್ರತಿನಿಧಿಗಳು, ಪೊಲೀಸರು, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಅತ್ಯಂತ ಪ್ರಾಮಾಣಿಕ ಮನಸ್ಸಿನಿಂದ ಚಿಂತಿಸ ಬೇಕಿದೆ. ಯಾರದ್ದೋ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಇಂತಹ ಮಹನೀಯರ ಕಾರ್ಯಕ್ರಮ ವೇದಿಕೆಯಾಗಬಾರದು.

ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ಮೃತಪಟ್ಟ ರಾಜಶೇಖರ್ ಅವರ ಕುಟುಂಬಕ್ಕೆ ಅಗತ್ಯ ಸವಲತ್ತು, ಸೌಕರ್ಯಗಳನ್ನು ಕಲ್ಪಿಸಬೇಕು. ಆ ಮೂಲಕ ಅವರ ಬದುಕು ಸರಾಗವಾಗಿ ಸಾಗಲು ಅನುವು ಮಾಡಿಕೊಡಬೇಕು. ಅದೇ ರೀತಿಯಲ್ಲಿ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ, ಎಷ್ಟು ದೊಡ್ಡ ಪ್ರಭಾವಿಯಾಗಿದ್ದರೂ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ಈ ನೆಲದ ಕಾನೂನನ್ನು ಎತ್ತಿಹಿಡಿಯಬೇಕು. ಅದು ಬೇರೆಯವರಿಗೆ ಪಾಠವಾಗಬೇಕು.

” ಗಲಾಟೆಯ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ, ಆರೋಪಿಗಳ ಪತ್ತೆ, ಬಂಧನ, ತಪ್ಪಿತಸ್ಥರಿಗೆ ಶಿಕ್ಷೆ… ಈ ಯಾವುದೂ  ಕಾಂಗ್ರೆಸ್ ಮತ್ತು ಬಿಜೆಪಿಗೆ ಬೇಕಿಲ್ಲ ಎಂಬಂತಿದೆ. ಸ್ಥಳೀಯ ರಾಜಕೀಯ ಅಥವಾ ರಾಜಕಾರಣಿಗಳನ್ನು ಈ ಪ್ರಕರಣದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸುವ ಅವಶ್ಯಕತೆ ಇಲ್ಲ.”

Tags:
error: Content is protected !!