Mysore
28
haze

Social Media

ಗುರುವಾರ, 01 ಜನವರಿ 2026
Light
Dark

ರಾಜಾಸೀಟ್‌ನಲ್ಲಿ ಸ್ಥಾಪನೆಯಾಗಲಿದೆ ಫುಡ್‌ ಕೋರ್ಟ್‌

ನವೀನ್ ಡಿಸೋಜ

ಖಾಸಗಿ ಸಹಭಾಗಿತ್ವದಲ್ಲಿ ಆರಂಭಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ; ಟ್ರಾಫಿಕ್ ಕಿರಿಕಿರಿಗೂ ಕಡಿವಾಣ

ಮಡಿಕೇರಿ: ನಗರದ ರಾಜಾಸೀಟ್ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಫುಡ್ ಕೋರ್ಟ್ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ರಾಜಾಸೀಟ್ ಒಳಭಾಗದಲ್ಲೇ ಫುಡ್ ಕೋರ್ಟ್ ಆರಂಭವಾದರೇ ಟ್ರಾಫಿಕ್ ಕಿರಿಕಿರಿಗೂ ಕಡಿವಾಣ ಬೀಳಲಿದೆ.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೋಟಗಾರಿಕಾ ಇಲಾಖೆ ಅಧಿನದಲ್ಲಿರುವ ರಾಜಾಸೀಟ್‌ನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಫುಡ್ ಕೋರ್ಟ್ ಸ್ಥಾಪನೆಗೆ ೪,೩೦೦ ಚದರ ಅಡಿ ಜಾಗವನ್ನು ೨೦ ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ.

ಇದರಿಂದ ಸದ್ಯದಲ್ಲೇ ರಾಜಾಸೀಟ್ ಆವರಣದಲ್ಲಿ ಫುಡ್ ಕೋರ್ಟ್ ಸ್ಥಾಪನೆಯಾಗಲಿದ್ದು, ಎದುರಲ್ಲಿರುವ ತಳ್ಳುಗಾಡಿಗಳ ಸಮಸ್ಯೆ ಹಾಗೂ ಟ್ರಾಫಿಕ್ ಕಿರಿಕಿರಿಗೆ ಪರಿಹಾರ ಸಿಕ್ಕಂತಾಗಲಿದೆ. ರಾಜಾಸೀಟ್‌ನಲ್ಲಿ ಹೊಸದಾಗಿ ಸ್ಕೈ ವಾಕ್ ಗ್ಲಾಸ್ ಬ್ರಿಡ್ಜ್ ಮತ್ತು ಫುಡ್ ಕೋರ್ಟ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ವಿಚಾರ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿ ರಾಜಾಸೀಟ್ ಬೆಟ್ಟದ ಸಾಲಿನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಭೂಕುಸಿತ ಪ್ರದೇಶವಾಗಿರುವುದರಿಂದ ಅಲ್ಲಿ ಗ್ಲಾಸ್‌ಬ್ರಿಡ್ಜ್ ನಿರ್ಮಾಣದಂತಹ ಅಪಾಯಕಾರಿ ಕೆಲಸಕ್ಕೆ ಕೈ ಹಾಕಬಾರದು ಎಂಬ ಅಭಿಪ್ರಾಯ ಸಾರ್ವಜ ನಿಕರು ಸೇರಿದಂತೆ ಸಂಘ- ಸಂಸ್ಥೆಗಳಿಂದ ವ್ಯಕ್ತವಾಗಿತ್ತು. ಸಾರ್ವಜನಿಕರ ಒತ್ತಡದ ಹಿನ್ನೆಲೆಯಲ್ಲಿ ಗ್ಲಾಸ್ ಬ್ರಿಡ್ಜ್ ಪ್ರಸ್ತಾವನೆಯನ್ನು ಕೈ ಬಿಡುವುದಾಗಿ ಶಾಸಕ ಡಾ.ಮಂಥರ್ ಗೌಡ ಘೋಷಿಸಿದ್ದರು.

ಅದರಂತೆ ಗ್ಲಾಸ್ ಬ್ರಿಡ್ಜ್ ಯೋಜನೆ ಕೈಬಿಡಲಾಗಿದ್ದು, ಕೇವಲ ಫುಡ್ ಕೋರ್ಟ್ ಸ್ಥಾಪನೆಗಷ್ಟೇ ಸಂಪುಟ ಒಪ್ಪಿಗೆ ನೀಡಿದೆ. ರಾಜಾಸೀಟ್‌ನಲ್ಲಿ ಪುಟಾಣಿ ರೈಲು ಸಂಚರಿಸುತ್ತಿದ್ದ ಗಾಂಧಿ ಮೈದಾನಕ್ಕೆ ಹೊಂದಿ ಕೊಂಡಂತಿರುವ ಸ್ಥಳದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದೀಗ ಸಂಪುಟದ ಒಪ್ಪಿಗೆ ಸಿಕ್ಕಿದೆ. ೪,೩೦೦ ಚದರ ಅಡಿ ವಿಸ್ತೀರ್ಣದಲ್ಲಿ ಫುಡ್‌ಕೋರ್ಟ್ ನಿರ್ಮಾಣಕ್ಕೆ ಯೋಜನೆ ರೂಪುಗೊ ಳ್ಳಬೇಕಿದ್ದು, ಮುಂದಿನ ದಿನಗಳಲ್ಲಿ ಟೆಂಡರ್ ಮೂಲಕ ಖಾಸಗಿಯವರಿಂದ ಈ ಫುಡ್ ಕೋರ್ಟ್ ನಿರ್ಮಾಣವಾಗಲಿದೆ. ಇದರಿಂದ ಇದೀಗ ಬಳಕೆಯಾಗದೇ ನಿಷ್ಪ್ರಯೋಜಕ ವಾಗಿರುವ ಪುಟಾಣಿ ರೈಲು ಸ್ಟೇಷನ್ ಬಳಿಯ ಸ್ಥಳ ಪ್ರವಾಸಿಗರ ಉಪಯೋಗಕ್ಕೆ ಬರಲಿದೆ.

ರಾಜಾಸೀಟ್ ಮುಂಭಾಗದಲ್ಲಿ ತಳ್ಳುಗಾಡಿ ಮೂಲಕ ವ್ಯಾಪಾರ ಮಾಡಲಾಗುತ್ತಿದೆ. ಸದ್ಯ ರಾಜಾಸೀಟ್ ಎದುರಲ್ಲೇ ಇರುವ (ಹಿಂದೆ ದ್ವಿಚಕ್ರ ವಾಹನಗಳ ಪಾರ್ಕಿಂಗ್) ಸ್ಥಳದಲ್ಲಿ ಹಲವು ತಳ್ಳುಗಾಡಿಗಳಿಗೆ ಅವಕಾಶ ಕಲ್ಪಿಸಿದ್ದು, ಇದರಿಂದ ಪಾರ್ಕಿಂಗ್ ಸಮಸ್ಯೆಯ ಜತೆಗೆ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ. ಫುಡ್ ಕೋರ್ಟ್ ಆರಂಭವಾದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಲಿದೆ.

ಈಗಿರುವ ತಳ್ಳುಗಾಡಿಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಮತ್ತು ಪ್ರವಾಸಿಗರಿಂದ ಹೆಚ್ಚು ಹಣ ಪಡೆಯುವ ಕುರಿತು ಹಿಂದಿನಿಂದಲೂ ದೂರುಗಳು ಕೇಳಿಬರುತ್ತಿದ್ದು, ಇದು ಕೊಡಗಿನ ಪ್ರವಾಸೋದ್ಯಮದ ಮೇಲೆಯೂ ಪರಿಣಾಮ ಬೀರುತ್ತದೆ. ಅಲ್ಲದೇ ಇಲ್ಲಿನ ವ್ಯಾಪಾರಿಗಳ ನಡುವೆ ಮಾರಾಮಾರಿ ನಡೆದು ಪ್ರಕರಣಗಳೂ ದಾಖಲಾಗಿವೆ. ಹೀಗಾಗಿ ಫುಡ್ ಕೋರ್ಟ್ ಸ್ಥಾಪಿಸುವ ಮೂಲಕ ಶಾಶ್ವತ ಅಂಗಡಿ ಮಳಿಗೆಗಳನ್ನು ತೆರೆಯಬೇಕು. ಪ್ರವಾಸಿಗರಿಗೆ ಆರೋಗ್ಯಕರ ತಿನಿಸುಗಳು ಸಿಗುವಂತೆ ಮಾಡಬೇಕೆಂಬ ಪ್ರಸ್ತಾವನೆ ಈ ಹಿಂದೆ ಡಾ. ಸತೀಶ್ ಅವರು ಜಿಲ್ಲಾಧಿಕಾರಿಯಾಗಿದ್ದ ಕಾಲದಲ್ಲಿಯೇ ಇತ್ತು. ಆದರೆ ತೋಟಗಾರಿಕಾ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿ ವರ್ಗಾವಣೆಯಾದ ಬಳಿಕ ಆ ಚಿಂತನೆ ಅಲ್ಲಿಗೇ ನಿಂತಿತ್ತು. ಇದೀಗ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಫುಡ್ ಕೋರ್ಟ್ ಸ್ಥಾಪನೆ ಆಗುವ ಸಾಧ್ಯತೆ ಇದೆ.

” ರಾಜಾಸೀಟ್‌ನಲ್ಲಿ ಫುಡ್‌ಕೋರ್ಟ್ ಸ್ಥಾಪನೆಗೆ ಸಂಬಂಧಿಸಿದಂತೆ ಈ ಹಿಂದಿನ ಉಪನಿರ್ದೇಶಕರ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಗ್ಲಾಸ್ ಬ್ರಿಡ್ಜ್ ಮತ್ತು ಫುಡ್ ಕೋರ್ಟ್ ಪ್ರಸ್ತಾವನೆಯ ಪೈಕಿ ಗ್ಲಾಸ್ ಬ್ರಿಡ್ಜ್‌ಗೆ ವಿರೋಧವಿದ್ದ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿದೆ. ಸಚಿವ ಸಂಪುಟದ ತೀರ್ಮಾನದಂತೆ ಪುಟಾಣಿ ರೈಲು ಸ್ಟೇಷನ್ ಸಮೀಪದ ಸ್ಥಳದಲ್ಲಿ ಫುಡ್ ಕೋರ್ಟ್ ಸ್ಥಾಪನೆಗೆ ಮುಂದಿನ ಪ್ರಕ್ರಿಯೆಗಳು ನಡೆಯಬೇಕಿದೆ.”

-ಶಶಿಧರ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕರು

Tags:
error: Content is protected !!