‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ ವರ್ಷ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಬಿಡುಗಡೆಯಾಗುತ್ತಿದ್ದವು. ಆದರೆ, ಇಂದು ಚಿತ್ರರಂಗವು ವಿಭಿನ್ನ ಕಥೆಗಳು, ತಂತ್ರಜ್ಞಾನ ಬಳಕೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಯಶಸ್ಸನ್ನು ಕಂಡು, ನೂರಾರು ಕೋಟಿ ರೂ.ಗಳಿಕೆ ಮಾಡುವ ಮೂಲಕ ಚಿತ್ರೋದ್ಯಮದ ಗಡಿಯನ್ನು ವಿಸ್ತರಿಸಿದೆ. ೨೦೨೫ರಲ್ಲಿ ಚಿತ್ರರಂಗ ಕಂಡ ಏಳು -ಬೀಳುಗಳ ಹಿನ್ನೋಟ ಇಲ್ಲಿದೆ.
‘ದಿ ಡೆವಿಲ್ ಮತ್ತು ದರ್ಶನ್’:
‘ದಿ ಡೆವಿಲ್’ ಚಿತ್ರದ ಚಿತ್ರೀಕರಣದ ವೇಳೆ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್ ಅವರು, ಜಾಮೀನಿನ ಮೇಲೆ ಹೊರ ಬಂದ ನಂತರ ಚಿತ್ರೀಕರಣದ ಕೆಲಸ ಮುಗಿಸಿ, ನಿರ್ಮಾಪಕ, ನಿರ್ದೇಶಕ ಪ್ರಕಾಶ್ ವೀರ್ ಚಿತ್ರ ಬಿಡುಗಡೆ ಮಾಡಲು ಶ್ರಮಿಸಿದರು. ಈ ನಡುವೆಯೇ ದರ್ಶನ್ ಮತ್ತೆ ಜೈಲು ಸೇರಿದರು. ನಾಯಕ ನಟನ ಗೈರಲ್ಲಿ ಚಿತ್ರ ತೆರೆಗೆ ಬಂದರೂ, ಅವರ ಅಭಿಮಾನಿಗಳು ಅದಕ್ಕೆ ಸಾಕಷ್ಟು ಪ್ರಚಾರದ ನೆರವು ನೀಡಿದರು.
‘ಸು ಫ್ರಂ ಸೋ’: ವರ್ಷದ ಪೂರ್ವಾರ್ಧದಲ್ಲಿ ಸೋಲಿನ ಸುಳಿಯಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಅಚ್ಚರಿಯ ಗೆಲುವು ತಂದು ಕೊಟ್ಟ ಚಿತ್ರ ‘ಸು ಫ್ರಂ ಸೋ’. ಜೆ.ಪಿ.ತುಮಿನಾಡು ನಿರ್ದೇಶನದ ಈ ಚಿತ್ರ ಗಲ್ಲಾಪೆಟ್ಟಿಗೆ ಯನ್ನು ದೋಚಿತು. ಮಾತ್ರವಲ್ಲದೇ, ೫೬ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿ ಪ್ರದರ್ಶನ ಕಂಡಿತು. ಚಿತ್ರ ಪ್ರದರ್ಶನದ ವೇಳೆ ಮತ್ತು ಪತ್ರಿಕಾಗೋಷ್ಠಿ ಸೇರಿದಂತೆ ಎಲ್ಲ ಕಡೆ ನಿರ್ದೇಶಕ ಜೆ.ಪಿ.ತುಮಿನಾಡು ಕನ್ನಡದಲ್ಲೇ ಮಾತನಾಡಿದರು.
‘ಅನಂತನಾಗ್‌ಗೆ ಪದ್ಮಭೂಷಣ’: ಕನ್ನಡ ಚಿತ್ರರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅನಂತ್‌ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎನ್ನುವ ಅಭಿಮಾನಿಗಳ ಒತ್ತಾಯ ಬಹಳ ವರ್ಷಗಳಿಂದ ಇತ್ತು. ಅದು ಈಡೇರಿದ್ದು ೨೦೨೫ರಲ್ಲಿ. ಕೇಂದ್ರ ಸರ್ಕಾರವು ಅನಂತ್‌ನಾಗ್ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತು. ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಮತ್ತು ಬಿ. ಸರೋಜಾದೇವಿ ಅವರ ನಂತರ ಈ ಪ್ರಶಸ್ತಿ ಪಡೆದ ಮೂರನೇ ಕಲಾವಿದ ಎಂಬ ಹೆಗ್ಗಳಿಕೆಗೆ ಅನಂತ್‌ನಾಗ್ ಪಾತ್ರರಾಗಿದ್ದಾರೆ. ವಿಷ್ಣು, ಸರೋಜಾಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ನಟ ಡಾವಿಷ್ಣುವರ್ಧನ್ ಮತ್ತು ಹಿರಿಯ ಕಲಾವಿದರಾದ ಬಿ. ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರ ಈ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಿದೆ. ಈ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರಿಗೂ ಮರಣೋತ್ತರವಾಗಿ ನೀಡಲಾಗಿತ್ತು.
‘ಕಾಂತಾರ; ಒಂದು ದಂತಕತೆ-ಅಧ್ಯಾಯ-೧’: ಹೊಂಬಾಳೆ ಸಂಸ್ಥೆಗಾಗಿ ರಿಷಭ್ ಶೆಟ್ಟಿ ನಿರ್ದೇಶಿಸಿ – ನಟಿಸಿದ ‘ಕಾಂತಾರ; ಒಂದು ದಂತಕತೆ’ ಬರೆದ ದಾಖಲೆಯನ್ನು ‘ಕಾಂತಾರ; ಒಂದು ದಂತಕತೆ-ಅಧ್ಯಾಯ-೧’ ಮುರಿದಿದೆ. ೨೦೨೫ರಲ್ಲಿ ಅತ್ಯಽಕ ಗಳಿಕೆ ಮಾಡಿದ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆ ಅದರದು. ಮೊದಲ ಕಾಂತಾರ, ವಿಶ್ವಾದ್ಯಂತ ಮೊದಲು ಕನ್ನಡದಲ್ಲೇ ತೆರೆ ಕಂಡು, ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿತ್ತು. ಆದರೆ, ಈ ಬಾರಿ ಹಲವು ಭಾಷೆಗಳಿಗೆ ಡಬ್ ಆಗಿಯೇ ಚಿತ್ರ ಬಿಡುಗಡೆಯಾಯಿತು. ಇಂಗ್ಲಿಷ್ ಮತ್ತು ಸ್ಪ್ಯಾನಿಶ್ ಭಾಷೆಗೂ ಈ ಚಿತ್ರ ಡಬ್ ಆಗಿದ್ದು ವಿಶೇಷ.
‘ನಿರ್ಮಾಪಕರಾಗಿ ಯಶ್’ ಪಾದಾರ್ಪಣೆ: ಇದುವರೆಗೂ ನಟರಾಗಿ ಗುರುತಿಸಿಕೊಂಡಿದ್ದ ಯಶ್, ಇದೀಗ ನಿರ್ಮಾಪಕರಾಗಿದ್ದಾರೆ. ಮುಂದಿನ ವರ್ಷ ಯುಗಾದಿಯಂದು ತೆರೆಗೆ ಬರಲಿರುವ ‘ಟಾಕ್ಸಿಕ್’ ಚಿತ್ರವನ್ನು ಕೆ.ವಿ.ಎನ್.ಪ್ರೊಡಕ್ಷನ್ಸ್ ಜತೆಗೆ ಸೇರಿ ನಿರ್ಮಿಸುತ್ತಿದ್ದಾರೆ. ಯಶ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ್ದಾರೆ. ಜನಪ್ರಿಯ ನಟರು ಸಂಭಾವನೆಯ ಬದಲು, ಲಾಭದಲ್ಲಿ ಪಾಲು ಪಡೆದುಕೊಳ್ಳಬೇಕು ಎನ್ನುವ ಉದ್ಯಮದ ಒತ್ತಾಯಕ್ಕೆ ಇದು ಪೂರಕವಾಗಿದೆ.
‘ಸಂಜು ವೆಡ್ಸ್ ಗೀತಾ-೨’: ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ ಗೀತಾ-೨’ ಈ ವರ್ಷ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ಈ ಚಿತ್ರ ಜನವರಿ ೧೦ ರಂದು ಬಿಡುಗಡೆಯಾಗಲಿದೆ ಎಂದು ಪ್ರಕಟವಾದರೂ, ನ್ಯಾಯಾಲಯ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ತಡವಾಗಿ ತೆರೆಗೆ ಬಂತು.
‘ಬರ್ಲಿನ್‌ನಲ್ಲಿ ವಾಘಾಚಿ ಪಾಣಿ’: ಈ ಬಾರಿಯ ಬರ್ಲಿನ್ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ನಟೇಶ್ ಹೆಗಡೆ ನಿರ್ದೇಶನದ ‘ವಾಘಾಚಿಪಾಣಿ’ ಚಿತ್ರವು ಆಯ್ಕೆಯಾಗಿ ಪ್ರದಶರ್ನಗೊಂಡಿತ್ತು. ಈ ಹಿಂದೆ ಅವರು ‘ಪೆದ್ರೊ’ ಚಿತ್ರ ನಿರ್ದೇಶಿಸಿದ್ದರು. ಅದು ಬೂಸಾನ್ ಸೇರಿದಂತೆ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿತ್ತು. ರಿಷಭ್ ಶೆಟ್ಟಿ ನಿರ್ಮಾಣದ ಚಿತ್ರಗಳಿವು. ಅನೂಪ್ ಲಕ್ಕೂರ್ ನಿರ್ದೇಶನದ ‘ಅಮ್ಮಂಗ್ಹೇಳ್ಬೇಡಿ’ ಚಿತ್ರವು ಬೂಸಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಏಷ್ಯನ್ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಈ ಎರಡೂ ಚಿತ್ರಗಳು ಕಳೆದ ವಾರ ನಡೆದ ಕೇರಳ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡವು.
ಮೈಸೂರಿನಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ: ೨೦೧೮ ಮತ್ತು ೨೦೧೯ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯಿತು. ಕೊರೊನಾ ಮತ್ತಿತರ ಕಾರಣಗಳಿಂದ ಈ ಪ್ರಶಸ್ತಿಗಳ ಆಯ್ಕೆ ತಡವಾಗಿತ್ತು. ಇದೀಗ ೨೦೨೦ ಮತ್ತು ೨೧ನೇ ಸಾಲಿನ ಪ್ರಶಸ್ತಿಗೆ ಘೋಷಿಸಿದ್ದು, ಅದರ ಪ್ರಶಸ್ತಿ ಪ್ರದಾನ ಆಗಬೇಕಿದೆ. ೨೦೨೨, ೨೦೨೩, ೨೦೨೪ನೇ ಸಾಲಿನ ಪ್ರಶಸ್ತಿಗಳಿಗೆ ಚಿತ್ರಗಳನ್ನು ಆಹ್ವಾನಿಸಬೇಕಿದೆ.
‘ರಜನಿಕಾಂತ್‌ಗೆ ಚಿತ್ರೋತ್ಸವದಲ್ಲಿ ಗೌರವ’: ನಟ ರಜನಿಕಾಂತ್ ಅಭಿನಯ ಜೀವನ ೫೦ ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಅವರಿಗೆ ೫೬ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ವಿಶೇಷ ಗೌರವ ನೀಡಲಾಯಿತು. ಕೆಲವು ವರ್ಷಗಳ ಹಿಂದೆ ಇದೇ ವೇದಿಕೆಯಲ್ಲಿ ಅವರನ್ನು, ಭಾರತೀಯ ಚಿತ್ರರಂಗದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಾಗಿತ್ತು. ಈ ನಡುವೆ ಚಲನ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ನೀಡುವ ಅತ್ಯುನ್ನತ ಗೌರವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗಿದೆ.
‘ರಿಷಭ್‌ಗೆ ಕಿರೀಟ’: ದೈವಾರಾಧನೆಯ ಹಿನ್ನೆಲೆಯ ಕಥೆಯನ್ನು ತೆರೆಯ ಮೇಲೆ ತಂದು, ಅದನ್ನು ಪ್ರಪಂಚದಾದ್ಯಂತ ಪರಿಚಯಿಸಿದ ನಟ, ನಿರ್ದೇಶಕ ರಿಷಭ್ ಶೆಟ್ಟಿ. ಅವರ ಚಿತ್ರ ‘ಕಾಂತಾರ; ಒಂದು ದಂತಕತೆ- ಅಧ್ಯಾಯ-೧’ ೨೦೨೫ರಲ್ಲಿ ತೆರೆ ಕಂಡ ಭಾರತೀಯ ಭಾಷಾ ಚಿತ್ರಗಳಲ್ಲೇ ಅತ್ಯಽಕ ಗಳಿಕೆ ಮಾಡಿದ ಚಿತ್ರ ಎನ್ನುವ ಹೆಗ್ಗಳಿಕೆ ಪಡೆದಿದೆ. ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರಿಗೆ ವಿಶೇಷ ರೀತಿಯಲ್ಲಿ ಯಕ್ಷಗಾನ ಕಿರೀಟ ತೊಡಿಸಿ, ಗೌರವಿಸಲಾಯಿತು.





