ಹನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ; ಜಮೀನಿಗೆ ತೆರಳಲು ಹಿಂದೇಟು
ವೀರನಹೊಸಹಳ್ಳಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ಬಫರ್ ಜೋನ್ ವ್ಯಾಪ್ತಿಗೆ ಸೇರಿದ ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ನಿರಂತರವಾಗಿ ಹುಲಿ, ಚಿರತೆಗಳುಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸುತ್ತಿದ್ದು, ಇದರಿಂದಾಗಿ ರೈತರು ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆಗಳನ್ನು ನಡೆಸಲು ಹಿಂದೇಟು ಹಾಕುತ್ತಿದ್ದಾರೆ.
ಹನಗೋಡು, ಕಾಮಗೌಡನಹಳ್ಳಿ, ಬಿ.ಆರ್. ಕಾವಲು, ಶಿಂಡೇನಹಳ್ಳಿ, ಅಬ್ಬೂರು, ಗುರುಪುರ, ಕಲ್ಲಹಳ್ಳಿ, ನಾಗಮಂಗಲ, ಹಿಂಡಗೂಡ್ಲು, ದಾಸನಪುರ ಗ್ರಾಮಗಳ ವ್ಯಾಪ್ತಿಯಲ್ಲಿ ೩-೪ಹುಲಿ, ಚಿರತೆಗಳ ಓಡಾಟ ಕಂಡುಬಂದಿದೆ. ಇದರಿಂದಾಗಿ ಸಂಜೆಯಾಗುತ್ತಿದ್ದಂತೆ ಜನರು ಮನೆ ಸೇರುವಂತಾಗಿದೆ.
ಹನಗೋಡು ಅಕ್ಕ ಪಕ್ಕದ ಗ್ರಾಮಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವಲಯಕ್ಕೆ ಸೇರುತ್ತವೆ. ಪ್ರತಿ ವರ್ಷ ಮುಂಗಾರು ಅವಧಿಯಲ್ಲಿ ಶುಂಠಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ಲಿ ಹಾಗೂ ಇತರ ಕಾಡುಪ್ರಾಣಿಗಳ ಹಾವಳಿಯಿಂದ ಆತಂಕಗೊಂಡಿರುವ ರೈತರು ಜಮೀನುಗಳನ್ನು ಬೀಳು ಬಿಟ್ಟಿದ್ದಾರೆ. ಕೆಲವರು ಮಾತ್ರ ರಾಗಿ ಬಿತ್ತನೆ ಮಾಡಿದ್ದಾರೆ. ಸಂಜೆ ೫ ಗಂಟೆಯ ಒಳಗಾಗಿ ಮನೆ ಸೇರಬೇಕಾದ ಪರಿಸ್ಥಿತಿ ಇದೆ ಎಂದು ಸ್ಥಳೀಯ ನಿವಾಸಿ ಶಿವಣ್ಣ ತಿಳಿಸಿದರು.
ಈ ಭಾಗದಲ್ಲಿ ಹಂದಿ ಮತ್ತು ಜಿಂಕೆಗಳ ಕಾಟವೂ ವ್ಯಾಪಕವಾಗಿದೆ. ವನ್ಯಪ್ರಾಣಿಗಳಿಂದಆಗುತ್ತಿರುವ ಸಮಸ್ಯೆಗಳನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುವುದು ರೈತರ ಅಳಲು. ರೈತರು ಒತ್ತಾಯಿಸಿದಾಗ ಕಾಟಾಚಾರಕ್ಕೆ ವಾಹನಗಳಲ್ಲಿ ಒಂದೆರಡು ಸುತ್ತು ಹಾಕಿ ಹೋಗುತ್ತಾರೆ. ನಂತರ ಇವರ ಸುಳಿವೇ ಇರುವುದಿಲ್ಲ. ಜಮೀನಿನಲ್ಲಿ ಹುಲಿ, ಚಿರತೆ ಹೆಜ್ಜೆ ಗುರುತು ಕಂಡುಬಂದಿರುವುದರಿಂದ ಎಲ್ಲಿ ಅಡಗಿ ಕುಳಿತಿರುತ್ತವೆಯೋ ಎಂಬ ಭಯದಲ್ಲೇ ಓಡಾಡಬೇಕಿದೆ.
ಜಾನುವಾರುಗಳ ಮೇಲೂ ದಾಳಿ ಮಾಡಿವೆ. ಈ ಭಯದಿಂದ ಜಾನುವಾರುಗಳನ್ನು ಕೂಡ ಮೇಯಿಸಲು ಆಗುತ್ತಿಲ್ಲ. ಮನೆಯ ಬಳಿಯೇ ಕಟ್ಟಿ ಸಾಕಬೇಕಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ರಾತ್ರಿ ಸಮಯದಲ್ಲಿ ಇಲಾಖೆಯ ಸಿಬ್ಬಂದಿ ಗಸ್ತು ತಿರುಗಿ ಪ್ರಾಣಿಗಳನ್ನು ಸೆರೆ ಹಿಡಿದು ಜನರ ಆತಂಕ ದೂರ ಮಾಡಬೇಕು ಎಂದು ಶಿವಣ್ಣ ಒತ್ತಾಯಿಸಿದರು.
” ಹನಗೋಡು ಭಾಗದಲ್ಲಿ ಕಾಡು ಪ್ರಾಣಿಗಳಿಂದ ಸಮಸ್ಯೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಡ್ರೋನ್ ಮೂಲಕ ಹುಲಿಗಳ ಚಲನ ವಲನ ತಿಳಿದುಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ.”
– ಸೀಮಾ, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ
” ಈಗಾಗಲೇ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಅರಣ್ಯ ಸಚಿವರ ಗಮನಕ್ಕೆ ತಂದು ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಸದ್ಯದಲ್ಲೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುತ್ತೇನೆ ಎಂದು ತಿಳಿಸಿದ್ದಾರೆ. ನಾನು ಅಧಿವೇಶನದಲ್ಲಿ ಭಾಗವಹಿಸಿರುವುದರಿಂದ ಬಂದ ನಂತರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ.:
-ಜಿ.ಡಿ.ಹರೀಶ್‌ಗೌಡ, ಶಾಸಕ





