Mysore
28
scattered clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಮಲ್ಲಯ್ಯನಪುರದಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ

ಲಕ್ಷಾಂತರ ರೂ. ಫಸಲು ನಾಶವಾಗುತ್ತಿದೆ ಎಂದು ರೈತರ ಅಳಲು; ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಆಗ್ರಹ

ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಲ್ಲಯ್ಯನಪುರ ಗ್ರಾಮದ ರೈತರ ಜಮೀನುಗಳಿಗೆ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿರುವುದರಿಂದ ಕಷ್ಟಪಟ್ಟು ಬೆಳೆದ ಫಸಲು ನಾಶವಾಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಮಲ್ಲಯ್ಯನಪುರ ಗ್ರಾಮದ ರೈತರಾದ ಮುನಿಯಪ್ಪ, ಗೋವಿಂದಯ್ಯ ಅವರಿಗೆ ಸೇರಿದ ಜಮೀನಿನಲ್ಲಿ ಒಕ್ಕಣೆಗಾಗಿ ಹಾಕಿದ್ದ ಜೋಳದ ತೆನೆ ಫಸಲನ್ನು ತಿಂದು ನಾಶ ಮಾಡಿವೆ. ಜೊತೆಗೆ ಬಾಳೆ, ಕೃಷಿ ಪರಿಕರಗಳು, ಸೋಲಾರ್ ಬೇಲಿ ತುಳಿದು ಲಕ್ಷಾಂತರ ರೂ. ಮೌಲ್ಯದ ಪದಾರ್ಥಗಳನ್ನು ನಾಶಪಡಿಸಿ ಹಾನಿ ಉಂಟುಮಾಡಿವೆ.

ನಿರಂತರ ದಾಳಿ : ಕಳೆದ ೨ ತಿಂಗಳುಗಳಿಂದ ಮಲ್ಲಯ್ಯನಪುರ ಗ್ರಾಮದ ರೈತರ ಜಮೀನುಗಳಿಗೆ ಕಾಡಾನೆಗಳು ನಿರಂತರವಾಗಿ ದಾಳಿ ಮಾಡುತ್ತಿರುವುದರಿಂದ ಮುಸುಕಿನ ಜೋಳ, ಬಾಳೆ, ರಾಗಿ, ಇತರೆ ಫಸಲುಗಳು ಹಾಳಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಬೆಳೆ ಸಂರಕ್ಷಣೆಗೆ ರಾತ್ರಿ ಕಾವಲು ಕಾಯಲು ಕೂಡ ಭಯವಾಗುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಶಾಶ್ವತ ಪರಿಹಾರಕ್ಕೆ ಆಗ್ರಹ: ಎರಡು ತಿಂಗಳುಗಳಿಂದ ನಿರಂತರವಾಗಿ ಕಾವೇರಿ ವನ್ಯಜೀವಿಧಾಮ ಅರಣ್ಯ ಪ್ರದೇಶದಿಂದ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಲಕ್ಷಾಂತರ ರೂ. ಬೆಲೆ ಬಾಳುವ ಫಸಲು ಹಾಗೂ ಕೃಷಿ ಪರಿಕರಗಳನ್ನು ನಾಶ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಽಕಾರಿಗಳು ಕಾಡುಪ್ರಾಣಿಗಳ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಹಾಕಿ ಸೂಕ್ತ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

” ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ಬೆಳೆ ನಷ್ಟಕ್ಕೆ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಶೀಘ್ರವೇ ಸೂಕ್ತ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.”

-ಚಿಕ್ಕರಾಜು, ರೈತ ಮುಖಂಡರು, ಮಲ್ಲಯ್ಯನಪುರ 

Tags:
error: Content is protected !!