Mysore
25
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

19 ಬೇಚರಾಕ್ ಹಳ್ಳಿಗಳು ಇನ್ಮುಂದೆ ಕಂದಾಯ ಗ್ರಾಮಗಳು

ಹುಣಸೂರು ತಾಲ್ಲೂಕಿನ ಜನರ ನಾಲ್ಕು ದಶಕಗಳ ಕನಸು ನನಸು; ಗ್ರಾಮಸ್ಥರು ಫುಲ್ ಖು

ಹುಣಸೂರು: ತಾಲ್ಲೂಕಿನ ೧೯ ಬೇಚರಾಕ್ ಗ್ರಾಮಗಳನ್ನು ಸರ್ಕಾರ ಕಂದಾಯ ಗ್ರಾಮವಾಗಿಸುವ ಮೂಲಕ ೪ ದಶಕಗಳ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದೆ.

೨೦೧೯ರಲ್ಲಿ ರಾಜ್ಯ ಸರ್ಕಾರ ಬೇಚರಾಕ್ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಆದೇಶಿಸಿತ್ತು. ಅದರಂತೆ ಎಲ್ಲಾ ಪ್ರಕ್ರಿಯೆಗಳು ನಡೆದು ತಿಂಗಳ ಹಿಂದಷ್ಟೆ ತಾಲ್ಲೂಕಿನಲ್ಲಿರುವ ೧೯ ಬೇಚರಾಕ್ ಗ್ರಾಮಗಳ ಪೈಕಿ ೧೮ನ್ನು ಕಂದಾಯ ಗ್ರಾಮಗಳಾಗಿ ಮತ್ತು ಉಪಗ್ರಾಮಗಳ ಪೈಕಿ ಒಂದನ್ನು ಉಪಗ್ರಾಮ ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗಿದೆ.

ದಶಕಗಳ ಕಾಲ ತಮ್ಮ ಆಸ್ತಿ, ಪಾಸ್ತಿ, ಹಕ್ಕು, ವ್ಯವಹಾರ ನಡೆಸಲಾಗದೆ ಜನರು ತೊಂದರೆ ಅನುಭವಿಸಿದ್ದರು. ಇದೀಗ ಈ ಗ್ರಾಮಗಳ ನಿವಾಸಿಗಳು ಸಂಕಷ್ಟದಿಂದ ಪಾರಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಕಂದಾಯ ಇಲಾಖೆಯಲ್ಲಿ ಆಗಿರುವ ಎಲ್ಲಾ ಕಾರ್ಯಗಳು ರೈತರ ಸಂಕಷ್ಟ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು. ಆರ್‌ಟಿಸಿ ಪಡೆಯಬೇಕೆಂದರೆ ಪರಿತಪಿಸುತ್ತಿದ್ದ ಹಾಗೂ ಭೂಮಿಯ ದಾಖಲೆಗಳನ್ನು ಪಡೆಯಬೇಕೆಂದರೆ ಅಲೆದಾಡಬೇಕಾದ ಕಾಲವಿತ್ತು. ಆದರೆ ಕಂದಾಯ ಮಂತ್ರಿ ಕೃಷ್ಣಬೈರೇಗೌಡರ ನಿರ್ದೇಶನದಂತೆ ಕಂದಾಯ ಇಲಾಖೆ ಆಧುನಿಕ ತಂತ್ರಜ್ಞಾನ ಬಳಕೆಯತ್ತ ಮುಖ ಮಾಡಿದ ಮೇಲೆ ಅಧಿಕಾರಿಗಳು ಹೊಸತನಕ್ಕೆ ತಾವು ತೊಡಗಿಕೊಂಡಿದ್ದಾರೆ. ಈ ಪರಿಣಾಮ ವ್ಯವಸ್ಥೆಯಲ್ಲಿನ ಸುಧಾರಣೆ ಮಾಡತೊಡಗಿದ್ದು ತಾಲ್ಲೂಕು ಆಡಳಿತ ಪರಿಪೂರ್ಣವಾಗಿ ಕೆಲಸ ನಿರ್ವಹಿಸುತ್ತಿದೆ.

ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮಸ್ಥರು: ಈ ಬೇಚರಾಕ್ ಗ್ರಾಮಗಳು ಅಧಿಕೃತವಾಗಿ ಕಂದಾಯ ಸ್ಥಾನಮಾನ ಹೊಂದಿಲ್ಲದ ಗ್ರಾಮಗಳಾಗಿದ್ದು ಕಳೆದ ೪೦ ವರ್ಷಗಳಿಂದ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು. ಪ್ರಮುಖ ಗ್ರಾಮವೊಂದರ ಹೊರವಲಯದಲ್ಲಿ ಹುಟ್ಟಿಕೊಂಡ ಸಮೂಹವೊಂದರ ಪ್ರದೇಶ ತನ್ನ ಎಲ್ಲ ಆಗುಹೋಗುಗಳನ್ನು ಪ್ರಮುಖ ಗ್ರಾಮದೊಂದಿಗೆ ಹೊಂದಿರುತ್ತದೆ. ಭೂಮಿಯ ಆಸ್ತಿಯ ದಾಖಲೆಗಳು ಪ್ರಮುಖ ಗ್ರಾಮದ ಹೆಸರಿನಲ್ಲಿಯೇ ಇರುತ್ತವೆ. ಸಣ್ಣ ಸಮೂಹವಿರುವ ಪ್ರದೇಶದಲ್ಲಿ ಗ್ರಾಮ ಠಾಣೆಯಾಗಲಿ, ಮೂಲಸೌಕರ್ಯಗಳಾಗಲಿ ಲಭಿಸದೆ ಅಲ್ಲಿನ ಕುಟುಂಬಗಳಲ್ಲಿ ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಪ್ರತಿಪಾದಿಸಲು ಅಗತ್ಯ ದಾಖಲೆಗಳು ಇರುವುದಿಲ್ಲ, ಆಸ್ತಿ ಹಂಚಿಕೆ, ಮಾರಾಟ, ಖರೀದಿ, ಬ್ಯಾಂಕ್ ಸಾಲ ಸೌಲಭ್ಯ ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೆ ಗ್ರಾಮಗಳ ಬೇಚರಾಕ್ ಗ್ರಾಮವಾಗಿದ್ದ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಗೌರಿಪುರ ಗ್ರಾಮ ಅಭಿವೃದ್ಧಿಯಿಂದ ಮರೀಚಿಕೆಯಾಗಿತ್ತು.

ಪರಿವರ್ತಿತ ಕಂದಾಯ ಗ್ರಾಮಗಳು ತಾಲ್ಲೂಕಿನ ಮಧುಗಿರಿಕೊಪ್ಪಲು (ಮೂಲ ಕಂದಾಯ ಗ್ರಾಮ ಬನ್ನಿಕುಪ್ಪೆ), ಮರಳಯ್ಯನಕೊಪ್ಪ ಲು(ಬನ್ನಿಕುಪ್ಪೆ), ತೆಕ್ಕಲಹಾಡಿ (ಕಾಡುವಡ್ಡರಗುಡಿ), ಯಲಚವಾಡಿ (ದಲ್ಲಾಳು), ಮಹದೇವಪುರ ಹಾಡಿ (ದೈತ್ಯನಕೆರೆ ಹಾಡಿ), ವಿಜಯಗಿರಿಹಾಡಿ (ದಾಸನಪುರ), ಈರದಾಸನಕೊಪ್ಪಲು (ಗಾಗೇನಹಳ್ಳಿ), ಗೌರಿಪುರ (ಉದ್ದೂರು), ಕೆಂಪಮ್ಮನಹೊಸೂರು (ಅಂಕನಹಳ್ಳಿ), ಜೋಳೇನಹಳ್ಳಿ (ಕೆಂಪನಹಳ್ಳಿ), ಹುಂಡಿಮಾಳ (ಉಯಿಗೊಂಡನಹಳ್ಳಿ), ಹೊಸವಾರಂಚಿ (ಉಯಿಗೊಂಡನಹಳ್ಳಿ), ಲಕ್ಕನಕೊಪ್ಪಲು (ಮುಳ್ಳೂರು), ಹರವೆ ಕಲ್ಲಹಳ್ಳಿ (ರಾಮೇನಹಳ್ಳಿ), ಕಟ್ಟೆಮಳಲವಾಡಿ ಕೊಪ್ಪಲು(ಕಟ್ಟೆಮಳಲವಾಡಿ). ಶಂಕರೇಗೌಡನಕೊಪ್ಪಲು (ಕೆರೆಯೂರು), ೧ನೇ ಪಕ್ಷಿರಾಜಪುರ (ಉಮ್ಮತ್ತೂರು), ಕಳ್ಳಿಕೊಪ್ಪಲು (ಜಾಬಗೆರೆ) ಗ್ರಾಮಗಳು ಕಂದಾಯ ಗ್ರಾಮಗಳಾಗಿವೆ.

ಐದು ಉಪಗ್ರಾಮಗಳ ಪೈಕಿ ಬಿಳಿಕೆರೆ ಹೋಬಳಿಯ ಕೊಮ್ಮೇಗೌಡನಕೊಪ್ಪಲು (ಗೆರಸನಹಳ್ಳಿ) ಕಂದಾಯ ಗ್ರಾಮವಾಗಿ ರಚಿತವಾಗಿದೆ. ಉಳಿದಂತೆ ಪ್ರಸ್ತಾವನೆ ಹಂತದಲ್ಲಿ ತೆಂಕಲಕೊಪ್ಪಲು (ಹುಸೇನ್‌ಪುರ), ಉಪಗ್ರಾಮಗಳಾದ ಲಕ್ಷ್ಮೀಪುರ(ಕೂಡೂರು), ಕಲ್ಕಡ(ಹರೀನಹಳ್ಳಿ), ಯಾಲಕ್ಕಿಕಟ್ಟೆ (ಕುಡಿನೀರು ಮುದ್ದನಹಳ್ಳಿ) ಮತ್ತು ದೇವರಾಜ ಕಾಲನಿ(ಕರಣಕುಪ್ಪೆ) ಕಂದಾಯ ಗ್ರಾಮಗಳು ಬಾಕಿ ಉಳಿದುಕೊಂಡಿವೆ.

ಏನಿದು ಬೇಚರಾಕ್ ಗ್ರಾಮ?: 

ಅಧಿಕೃತವಾಗಿ ಕಂದಾಯ ಸ್ಥಾನಮಾನ ಇಲ್ಲದ ಗ್ರಾಮಗಳನ್ನು ಬೇಚರಾಕ್ ಗ್ರಾಮಗಳೆಂದು ಕರೆಯುತ್ತಾರೆ. ಬೇಚರಾಕ್ ಗ್ರಾಮಗಳ ಜಮೀನಿನ ದಾಖಲೆಗಳು ಅಕ್ಕಪಕ್ಕದ ಗ್ರಾಮಗಳ ಹೆಸರಿನಲ್ಲಿ ದಾಖಲಾಗಿರುತ್ತವೆ.

” ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗಿರುವ ೧೮ ಗ್ರಾಮಗಳಲ್ಲಿ ಒಟ್ಟು ೫೯೨ ಹಕ್ಕು ಪತ್ರಗಳು ಅನುಮೋದನೆಗೊಂಡಿದ್ದು, ೨೭೪ ಆಸ್ತಿಗಳನ್ನು ನೋಂದಣಿ ಮಾಡಿಕೊಡಲಾಗಿದೆ. ಬಾಕಿಯಿರುವ ಹಕ್ಕುಪತ್ರಗಳನ್ನು ನೋಂದಣಿಮಾಡಿಸಿ, ಕಾರ್ಯಕ್ರಮ ಏರ್ಪಡಿಸಿ ವಿತರಿಸಲಾಗುವುದು. ನಾಲ್ಕು ಉಪ ಗ್ರಾಮಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.”

-ಜೆ.ಮಂಜುನಾಥ್, ತಹಸಿಲ್ದಾರ್, ಹುಣಸೂರು

” ಬೇಚರಾಕ್ ಗ್ರಾಮವಾಗಿದ್ದ ಗೌರೀಪುರ ಸೇರಿದಂತೆ ತಾಲ್ಲೂಕಿನ ೧೯ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ದಾಖಲೆ ಮಾಡಿಕೊಡುವ ಮೂಲಕ ಎಷ್ಟೋ ವರ್ಷಗಳ ಗ್ರಾಮಸ್ಥರ ಕನಸು ನನಸಾದಂತಾಗಿದೆ. ಒಡೆತನದ ಹಕ್ಕಿಲ್ಲದೆ ಬದುಕುತ್ತಿದ್ದ ನಮಗೆ ನ್ಯಾಯ ಸಿಕ್ಕಿದೆ.”

-ಮನುಕುಮಾರ್, ಗ್ರಾ.ಪಂ.ಸದಸ್ಯ, ಉದ್ದೂರ್ ಕಾವಲ್

Tags:
error: Content is protected !!