Mysore
25
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಹೊಸ ವರ್ಷಕ್ಕೆ ಇಂದಿರಾ ಕಿಟ್

ಗಿರೀಶ್ ಹುಣಸೂರು

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪ್ರಯೋಜನ

ಮೈಸೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸ ವರ್ಷಾರಂಭದ ಜನವರಿ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಜೊತೆಗೆ ತೊಗರಿ ಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಕೂಡ ಉಚಿತವಾಗಿ ದೊರೆಯಲಿವೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಗೆ ಬದಲಾಗಿ ೨೦೨೬ರ ಜನವರಿ ತಿಂಗಳಿಂದ ‘ಇಂದಿರಾ ಆಹಾರ ಕಿಟ್’ ವಿತರಿಸಲಿದ್ದು, ಮೈಸೂರು ಜಿಲ್ಲೆಯಲ್ಲಿ ಎಂಟು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಫಲಾನುಭವಿಗೂ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೆ ಬಂದ ಆರಂಭದಲ್ಲಿ ಪ್ರತಿ ಫಲಾನುಭವಿಗೂ ಹೆಚ್ಚು ವರಿ ೫ ಕೆಜಿ ಅಕ್ಕಿ ನೀಡಲಾಗದೆ ನೇರ ನಗದು ಪಾವತಿ (ಡಿಬಿಟಿ) ಮೂಲಕ ಹಣ ಪಾವತಿಸಲಾಗುತ್ತಿತ್ತು.

ನಂತರದ ದಿನಗಳಲ್ಲಿ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಿ ಹೆಚ್ಚುವರಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತಾದರೂ ಅನ್ನಭಾಗ್ಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸಲು ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮ ದಡಿಯಲ್ಲಿ ಇಂದಿರಾ ಆಹಾರ ಕಿಟ್ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ ತೊಗರಿಬೇಳೆ, ಸಂಸ್ಕೃರಿಸಿದ ಸೂರ್ಯಕಾಂತಿ ಎಣ್ಣೆ, ಅಯೋಡಿನ್ ಯುಕ್ತ ಉಪ್ಪು ಮತ್ತು ಸಕ್ಕರೆಯನ್ನು ಒಳಗೊಂಡಿದೆ. ಈ ಯೋಜನೆಯ ಮೂಲಕ ರಾಜ್ಯಾದ್ಯಂತ ಅಂತ್ಯೋದಯ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಯ ಫಲಾನುಭವಿಗಳಿಗೆ ಅಗತ್ಯ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಒದಗಿಸುವುದಾಗಿ ಸರ್ಕಾರ ಹೇಳಿದೆ.

ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಈಗಾಗಲೇ ಆಹಾರ ಆಧಾರಿತ ಸರಕುಗಳ ವ್ಯವಹಾರದಲ್ಲಿ ತೊಡಗಿರುವ ತಯಾರಕರು, ಗಿರಣಿದಾರರು, ಸಂಸ್ಕರಣ ಕಾರರು, ಪೂರೈಕೆದಾರರು, ವ್ಯಾಪಾರಿಗಳು, ವಿತರಕರು, ಸ್ಟಾಕಿಸ್ಟ್‌ಗಳು ಮತ್ತು ಅಧಿಕೃತ ವಿತರಕರು ಸೇರಿದಂತೆ ಅರ್ಹ, ಪ್ರತಿಷ್ಠಿತ ಮತ್ತು ಅನುಭವಿ ಘಟಕಗಳಿಂದ ಟೆಂಡರ್ ಕರೆದಿದೆ. ಇಂದಿರಾ ಆಹಾರ ಕಿಟ್ ಯೋಜನೆಯಡಿ ಕರ್ನಾಟಕ ರಾಜ್ಯದಾದ್ಯಂತ ಇರುವ ವಿವಿಧ ಗೊತ್ತುಪಡಿಸಿದ ಸಗಟು ಕೇಂದ್ರಗಳು ಮತ್ತು ನ್ಯಾಯಯುತ ಬೆಲೆ ಅಂಗಡಿಗಳಿಗೆ ಅಧಿಸೂಚಿತ ಆಹಾರ ಸರಕುಗಳ ಪೂರೈಕೆ ಮತ್ತು ವಿತರಣೆಗಾಗಿ ಯೋಜನೆಯ ರಚನೆಯ ಕುರಿತು ಸಲಹೆಗಳನ್ನು ಡಿ.೧೫ರ ಸಂಜೆಯೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.

ಕಿಟ್‌ನಲ್ಲಿ ಏನೇನು ಇರಲಿದೆ?: ಇಂದಿರಾ ಆಹಾರ ಕಿಟ್ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ಪಡಿತರ ಚೀಟಿಯಲ್ಲಿ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತದೆ. ಒಬ್ಬರು ಅಥವಾ ಇಬ್ಬರು ಫಲಾನುಭವಿಗಳಿರುವ ಪಡಿತರ ಚೀಟಿಗೆ ೦.೭೫ ಕೆಜಿ ತೊಗರಿ ಬೇಳೆ, ಅರ್ಧ ಲೀ. ಸೂರ್ಯಕಾಂತಿ ಎಣ್ಣೆ, ಅರ್ಧ ಕೆಜಿ ಸಕ್ಕರೆ, ಅರ್ಧ ಕೆಜಿ ಉಪ್ಪು. ೩ ಅಥವಾ ೪ ಮಂದಿ -ಲಾನುಭವಿಗಳಿರುವ ಪಡಿತರ ಚೀಟಿಗೆ ೧.೫೦ ಕೆಜಿ ತೊಗರಿ ಬೇಳೆ, ೧ ಲೀ. ಸೂರ್ಯಕಾಂತಿ ಎಣ್ಣೆ, ೧ ಕೆಜಿ ಸಕ್ಕರೆ, ೧ ಕೆಜಿ ಉಪ್ಪು. ಐವರು ಮತ್ತು ಅದಕ್ಕಿಂತ ಹೆಚ್ಚು ಫಲಾನುಭವಿಗಳಿರುವ ಪಡಿತರ ಚೀಟಿಗೆ ೨.೨೫ ಕೆಜಿ ತೊಗರಿ ಬೇಳೆ, ೧.೫೦ ಲೀ. ಸೂರ್ಯಕಾಂತಿ ಎಣ್ಣೆ, ೧.೫೦ ಕೆಜಿ ಸಕ್ಕರೆ, ೧.೫೦ ಕೆಜಿ ಉಪ್ಪು ವಿತರಿಸಲಾಗುತ್ತದೆ.

ರಾಜ್ಯದ ಒಟ್ಟು -ಲಾನುಭವಿಗಳೆಷ್ಟು?: ರಾಜ್ಯದಲ್ಲಿ ಅಂತ್ಯೋದಯ ಯೋಜನೆಯ (ಎಎವೈ) ೧೦,೪೯,೬೦೦ ಪಡಿತರ ಚೀಟಿಗಳಿದ್ದು, ೧,೧೩,೫೩,೯೬೦ ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್)ಗಳ -ಲಾನುಭವಿಗಳು ಇಂದಿರಾ ಆಹಾರ ಕಿಟ್ ಯೋಜನೆಯ ಲಾಭ ಪಡೆಯಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ೪೮,೪೫೪ ಎಎವೈ, ೬,೨೯,೯೫೯ ಪಿಎಚ್‌ಎಚ್ ಪಡಿತರಚೀಟಿಗಳಿದ್ದು, ಎಎವೈನ ೨,೦೨,೫೬೧ ಮಂದಿ ಫಲಾನುಭವಿಗಳು, ಆದ್ಯತಾ ಪಡಿತರ ಚೀಟಿಯ ೨೦,೧೮,೮೬೨ ಮಂದಿ ಫಲಾನುಭವಿಗಳು ಸೇರಿದಂತೆ ಒಟ್ಟಾರೆ ೨೨,೨೧,೪೨೩ ಮಂದಿ ಫಲಾನುಭವಿಗಳಿಗೆ ಇಂದಿರಾ ಆಹಾರ ಕಿಟ್‌ನ ಪ್ರಯೋಜನ ದೊರೆಯಲಿದೆ.

ರಾಜ್ಯದ ಒಟು ಫಲಾನುಭವಿಗಳೆಷ್ಟು?: 
ರಾಜ್ಯದಲ್ಲಿ ಅಂತ್ಯೋದಯ ಯೋಜನೆಯ (ಎಎವೈ) ೧೦,೪೯,೬೦೦ ಪಡಿತರ ಚೀಟಿಗಳಿದ್ದು, ೧,೧೩,೫೩,೯೬೦ ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್)ಗಳ ಫಲಾನುಭವಿಗಳು ಇಂದಿರಾ ಆಹಾರ ಕಿಟ್ ಯೋಜನೆಯ ಲಾಭ ಪಡೆಯಲಿದ್ದಾರೆ.

ಜನವರಿಯಿಂದಲೇ ಇಂದಿರಾ ಆಹಾರ ಕಿಟ್ ವಿತರಣೆಗೆ ಸರ್ಕಾರದ ಆದೇಶ ಆಗಿದ್ದು, ಟೆಂಡರ್ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಆಗಲಿದೆ. ಫಲಾನುಭವಿಗಳಿಗೆ ಕಿಟ್ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ತಾಲ್ಲೂಕು ಮಟ್ಟದ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ನಿರ್ದೇಶನ ನೀಡಲಾಗುವುದು.

-ಮಂಟೇಸ್ವಾಮಿ, ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

 

Tags:
error: Content is protected !!