Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ಭತ್ತ ಖರೀದಿಗೆ ಮುಂದಾಗದ ರಾಜ್ಯ ಸರ್ಕಾರ

ಗಿರೀಶ್ ಹುಣಸೂರು

ಭತ್ತ ಕೊಯ್ಲು ಶುರುವಾಗಿ ವಾರ ಕಳೆದರೂ ಆರಂಭವಾಗದ ಖರೀದಿ ಕೇಂದ್ರ

ಎಂಎಸ್‌ಪಿ ಬೆಲೆಗಿಂತ ಕಡಿಮೆಗೆ ಖರೀದಿಸುತ್ತಿರುವ ಮಧ್ಯವರ್ತಿಗಳು

ಮೈಸೂರು: ಭತ್ತದ ಕೊಯ್ಲು ಪ್ರಾರಂಭವಾಗಿ ವಾರ ಕಳೆದರೂ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದಿರುವುದರಿಂದ ಖಾಸಗಿಯವರು ಕೇಳಿದಷ್ಟು ದರಕ್ಕೆ ರೈತರು ಗದ್ದೆಗಳಲ್ಲೇ ಭತ್ತ ಮಾರಿ ಕೊಳ್ಳುತ್ತಿದ್ದು, ಮಧ್ಯವರ್ತಿಗಳು ಹಣ ಮಾಡಿ ಕೊಳ್ಳಲು ಸರ್ಕಾರವೇ ದಾರಿ ಮಾಡಿಕೊಟ್ಟಂತಾಗಿದೆ.

ಮುಖ್ಯಮಂತ್ರಿ ಗದ್ದುಗೆಯ ಗುದ್ದಾಟದಲ್ಲಿ ನಿರತರಾಗಿರುವ ಆಳುವವರು ಕಬ್ಬು ಬೆಳೆಗಾರರು ಬೀದಿಗೆ ಇಳಿಯುವವರೆಗೂ ದರ ನಿಗದಿಗೆ ಮುಂದಾಗಲಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಭತ್ತ, ಮೆಕ್ಕೆಜೋಳ ಬೆಳೆದಿರುವ ರೈತರು ಕೂಡ ಬೀದಿಗೆ ಇಳಿಯ ಬೇಕಾದ ಅನಿವಾರ್ಯತೆಯನ್ನು ಸರ್ಕಾರವೇ ಸೃಷ್ಟಿಸಿದಂತಾಗುತ್ತದೆ.

೨೦೨೪-೨೫ನೇ ಸಾಲಿಗೆ ಸರ್ಕಾರ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ೨,೩೦೦ ರೂ., ಎ ಗ್ರೇಡ್ ಭತ್ತಕ್ಕೆ ೨,೩೨೦ ರೂ. ನಿಗದಿಪಡಿಸಿದೆ. ಆದರೆ, ಭತ್ತದ ಕೊಯ್ಲು ಶುರುವಾದರೂ ಖರೀದಿ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಇದರಿಂದಾಗಿ ಸಾಲ ಮಾಡಿ ಭತ್ತ ಬೆಳೆದಿರುವ ರೈತರು ಅನಿವಾರ್ಯವಾಗಿ ಖಾಸಗಿಯವರಿಗೆ ಕ್ವಿಂಟಾಲ್ಗೆ ೧,೯೦೦ ರಿಂದ ೨,೦೦೦ ರೂ.ಗಳಿಗೆ ಗದ್ದೆ ಬಯಲಲ್ಲೇ ಮಾರಾಟ ಮಾಡುತ್ತಿದ್ದಾರೆ.

ಖಾಸಗಿಯವರಿಗೆ ಮಾರುವುದರಿಂದ ದರ ಕಡಿಮೆಯಾದರೂ ಸ್ಥಳದಲ್ಲೇ ಹಣ ದೊರೆಯುತ್ತದೆ. ಸಾಗಣೆ ವೆಚ್ಚ, ಖರೀದಿ ಕೇಂದ್ರಗಳಲ್ಲಿ ದಿನವಿಡೀ ಕಾಯುವಿಕೆ ತಪ್ಪುವ ಜತೆಗೆ ಭತ್ತ ಮಾರಿ ಹಣಕ್ಕಾಗಿ ಕಾಯುವುದು ತಪ್ಪುತ್ತದೆ ಎನ್ನುತ್ತಾರೆ ರೈತರು.

ಜ್ಯೋತಿ ಭತ್ತಕ್ಕೆ ಹೆಚ್ಚು ದರ: ಜ್ಯೋತಿ ಭತ್ತವನ್ನು ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿಸದಿರುವು ದರಿಂದ ಮಧ್ಯವರ್ತಿಗಳು ರೈತರಿಂದ ಪ್ರತಿ ಕ್ವಿಂಟಾಲ್‌ಗೆ ೨,೯೦೦ ರೂ.ಗೆ ಖರೀದಿಸುತ್ತಿದ್ದಾರೆ. ಯಂತ್ರಗಳ ಮೂಲಕ ಕೊಯ್ಲು ಆದ ಕೂಡಲೇ ಭತ್ತಒಕ್ಕಣೆಯಾಗುವುದರಿಂದ ಗದ್ದೆ ಬಯಲಲ್ಲೇ ರೈತರು ಭತ್ತವನ್ನು ಮಾರುತ್ತಿದ್ದು, ಭತ್ತವನ್ನು ಒಣಗಿಸಲು ಅವಕಾಶ ಇಲ್ಲದೇ ಇರುವುದರಿಂದ ಪ್ರತಿ ಕ್ವಿಂಟಾಲ್ ಗೆ ೨ಕೆಜಿ ತೇವಾಂಶ ಹಾಗೂ ೧ ಕೆಜಿ ಚೀಲದ ತೂಕವನ್ನು ಕಳೆದು ಖರೀದಿಸುತ್ತಿದ್ದಾರೆ.

ಸರ್ಕಾರದ ಪ್ರೋತ್ಸಾಹಧನಕ್ಕೆ ಆಗ್ರಹ: ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಜೊತೆಗೆ ನೆರೆಯ ಕೇರಳ, ಪಾಂಡಿಚೇರಿ, ತೆಲಂಗಾಣ ರಾಜ್ಯ ಸರ್ಕಾರಗಳು ಪ್ರತಿ ಕ್ವಿಂಟಾಲ್ ಭತ್ತಕ್ಕೆ ೫೦೦ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಕರ್ನಾಟಕ ಸರ್ಕಾರ ಕೂಡ ಎಂಎಸ್‌ಪಿ ಜತೆಗೆ ಹೆಚ್ಚುವರಿ ೫೦೦ ರೂ. ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಭತ್ತದ ಕಣಜ ಎಂದೇ ಹೆಸರಾಗಿರುವ ಕೆ.ಆರ್.ನಗರ, ತಿ.ನರಸೀಪುರ, ನಂಜನಗೂಡು ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಭತ್ತದ ಕೊಯ್ಲು ನಡೆಯುತ್ತಿದ್ದು, ಮಧ್ಯವರ್ತಿಗಳು ಗದ್ದೆ ಬಯಲಿನಲ್ಲೇ ಭತ್ತ ಖರೀದಿ ಮಾಡಿ ದಾಸ್ತಾನು ಮಾಡುತ್ತಿದ್ದಾರೆ. ಸರ್ಕಾರ ಖರೀದಿ ಕೇಂದ್ರ ಆರಂಭಿಸಿದಾಗ ಹೀಗೆ ರೈತರಿಂದ ಕಡಿಮೆ ಬೆಲೆಗೆ ಖರೀದಿಸಿದ ಭತ್ತವನ್ನೇ ಖರೀದಿ ಕೇಂದ್ರಗಳಿಗೆ ತಂದು ರೈತರ ಹೆಸರಲ್ಲಿ ಮಾರಾಟ ಮಾಡಿ ಬೆಂಬಲ ಬೆಲೆ ಯೋಜನೆಯ ಲಾಭ ಪಡೆಯುವುದು ಪ್ರತಿ ವರ್ಷ ನಡೆಯುತ್ತಿದೆ.

ಹೀಗಾಗಿ ಸರ್ಕಾರ ಅಕ್ಟೋಬರ್-ನವೆಂಬರ್ ತಿಂಗಳಲ್ಲೇ ಭತ್ತ ಖರೀದಿಗೆ ರೈತರ ನೋಂದಣಿ ಆರಂಭಿಸಿ, ಕೊಯ್ಲು ಆರಂಭವಾಗುತ್ತಿದ್ದಂತೆ ಖರೀದಿ ಶುರು ಮಾಡಬೇಕು ಎನ್ನುತ್ತಾರೆ ರೈತರು.

ಭತ್ತ ಖರೀದಿಗೆ ಮಿತಿಯಿಲ್ಲ: ಎಕರೆಗೆ ೨೫ ಕ್ವಿಂಟಾಲ್‌ನಂತೆ ಭತ್ತ ಬೆಳೆದಿರುವ ಹಿಡುವಳಿಯ ಮಿತಿ ಒಳಪಟ್ಟು ಗರಿಷ್ಟ ಮಿತಿಯಿಲ್ಲದೆ ರೈತರ ಹಿಡುವಳಿಹಾಗೂ ಬೆಳೆ ದಾಖಲೆಗಳ ದೃಢೀಕರಣದ ಆಧಾರದ ಮೇಲೆ ಲಭ್ಯವಾಗುವ ಭತ್ತದ ಪ್ರಮಾಣವನ್ನು ಪ್ರಸಕ್ತ ಸಾಲಿನಲ್ಲಿ ಖರೀದಿಸಲಿದೆ.

” ಸರ್ಕಾರ ಬೆಳೆ ಖರೀದಿಗೆ ಕೇಂದ್ರ ತೆರೆಯುತ್ತಿಲ್ಲ. ರೈತರ ಸಮಸ್ಯೆ ಪರಿಹಾರ ಮಾಡುತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಶಾಸಕರನ್ನು ಕೊಂಡುಕೊಳ್ಳಲು ಖರೀದಿ ಕೇಂದ್ರ ತೆರೆಯಲಾಗಿದೆ.”

-ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ

” ಸರ್ಕಾರ ನಡೆಸುವವರು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದು, ರೈತರ ಕಷ್ಟ ಕೇಳುವವರೆ ಇಲ್ಲದಂತಾಗಿದೆ. ಭತ್ತ, ಜೋಳ ಕಟಾವು ನಡೆಯುತ್ತಿದ್ದರೂ ಸರ್ಕಾರ ಈವರೆಗೆ ಖರೀದಿ ಕೇಂದ್ರ ಆರಂಭಿಸಿಲ್ಲ. ಹೀಗಾಗಿ ಸಾಲ ಮಾಡಿ ಭತ್ತ, ಜೋಳ ಬೆಳೆದಿರುವ ರೈತರು ಖಾಸಗಿಯವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ.”

-ಹೊಸೂರು ಕುಮಾರ್, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ

” ಭತ್ತ ಕಟಾವು ಆರಂಭವಾಗಿದ್ದು ಸರ್ಕಾರ ತಕ್ಷಣವೇ ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ಯಾವುದೇ ನಿರ್ಬಂಧ ವಿಧಿಸದೆ ಸಂಪೂರ್ಣ ಖರೀದಿ ಮಾಡಿ ಮೂರು ದಿನಗಳ ಒಳಗೆ ರೈತರ ಖಾತೆಗೆ ಹಣ ಜಮಾ ಮಾಡಬೇಕು. ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಿ ವ್ಯತ್ಯಾಸದ ಹಣವನ್ನು ರೈತರಿಗೆ ಕೊಡಸಬೇಕು.”

ಅತ್ತಹಳ್ಳಿ ದೇವರಾಜ್, ರೈತ ಮುಖಂಡ

Tags:
error: Content is protected !!