Mysore
26
broken clouds

Social Media

ಮಂಗಳವಾರ, 13 ಜನವರಿ 2026
Light
Dark

‘ಪತ್ರಿಕೋದ್ಯಮ ಚಳವಳಿಯ ಭಾಗವೆಂದು ತಿಳಿಸಿಕೊಟ್ಟವರು ಕೋಟಿ’

‘ಆಂದೋಲನ’ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಸ್ಮರಣೆಯಲ್ಲಿ ನಡೆದ ಆನ್‌ಲೈನ್ ಸಂವಾದದಲ್ಲಿ ಇಂದೂಧರ ಹೊನ್ನಾಪುರ 

ಮೈಸೂರು: ಪತ್ರಿಕೋದ್ಯಮವೆಂದರೆ ಚಳವಳಿಯ ಮುಂದುವರಿದ ಭಾಗವೆಂದು ತಿಳಿಸಿಕೊಟ್ಟವರು ರಾಜಶೇಖರ ಕೋಟಿಯವರು ಎಂದು ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ ಹೇಳಿದರು. ‘ಆಂದೋಲನ’ದ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಸ್ಮರಣೆ ಹಿನ್ನೆಲೆಯಲ್ಲಿ ‘ಆಂದೋಲನ’ ಕಚೇರಿಯಲ್ಲಿ ನಡೆದ ಆನ್ ಲೈನ್ ಸಂವಾದದಲ್ಲಿ ‘ಸುದ್ದಿಗಳು ಮಾರಾಟದ ಸರಕುಗಳಾಗಿವೆ’ ಎಂಬ ವಿಚಾರ ಕುರಿತು ಅವರು ಮಾತನಾಡಿದರು.

ಅಂದಿನ ದಿನಗಳಲ್ಲೂ ಬಹಳ ಬದಲಾವಣೆ ಇರಲಿಲ್ಲ. ಆದರೆ ಇಷ್ಟು ಕೆಟ್ಟು ಹೋಗಿರಲಿಲ್ಲ. ಪತ್ರಿಕೋದ್ಯಮ ಮಾರಾಟಕ್ಕೆ ಒಳಗಾಗಿದೆ ಎನ್ನುವುದು ಯೋಚಿಸಬೇಕಾದ ವಿಷಯ. ಆದರೆ, ಪತ್ರಕರ್ತರು ಮಾರಾಟವಾಗುತ್ತಿದ್ದಾರೆ ಎಂಬುದು ಒಪ್ಪಬೇಕಾದ ಸತ್ಯ. ಆಗಿನ ಪತ್ರಕರ್ತರಲ್ಲಿ ಬದ್ಧತೆಯಿತ್ತು. ಆವಾಗ ವೃತ್ತಿ ನಿಷ್ಠತೆಯಿತ್ತು. ಈಗ ಹೊಟ್ಟೆಗೆ ನಿಷ್ಠರಾಗಿರುವವರ ಸಂಖ್ಯೆ ಹೆಚ್ಚಾಗಿದೆ.

ಹಾಗೆಂದು ಪ್ರಾಮಾಣಿಕರು ಇಲ್ಲವೆಂದಲ್ಲ. ಆದರೆ, ಅಂತಹ ಪತ್ರಕರ್ತರಿಗೆ ಮುಖ್ಯ ವಾಹಿನಿಯ ಪತ್ರಿಕೋದ್ಯಮದಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆ. ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಪ್ರಾಮಾಣಿಕ ಪತ್ರಕರ್ತರು ನಿರುದ್ಯೋಗಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಕೆಲವರು ಸಕ್ರಿಯರಾಗಿದ್ದಾರೆ ಎಂದು ಹೇಳಿದರು.

ನಾನು ಮೂಲತಃ ಚಳವಳಿಗಾರ. ಪತ್ರಿಕೋದ್ಯಮದ ಬಗ್ಗೆ ಕನಸು ಮೂಡುವ ಮೊದಲೇ ವಿದ್ಯಾರ್ಥಿ ದೆಸೆಯಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದವನು. ನಾನು ಪತ್ರಕರ್ತನಾಗಬಹುದು ಎಂದು ಮೊದಲು ಆಸೆ ಮೂಡಿಸಿದ್ದೇ ರಾಜಶೇಖರ ಕೋಟಿಯವರು. ಅವರು ಆಗಷ್ಟೇ ಮೈಸೂರಿಗೆ ಬಂದಿದ್ದರು. ಹಣಕಾಸಿನಸೌಲಭ್ಯವಿದ್ದಾಗ ಮಾತ್ರ ‘ಆಂದೋಲನ’ ಮುದ್ರಣವಾಗುತ್ತಿದ್ದ ಕಾಲ ಅದು. ರಾಜಶೇಖರ ಕೋಟಿ ಅವರು ಜಗತ್ತಿನ ವಿಚಾರಗಳನ್ನು ಅಧಿಕಾರವಾಣಿಯಿಂದ ಹೇಳುತ್ತಿದ್ದರು.

ಚಳವಳಿಯ ಮುಂದುವರಿದ ಭಾಗವಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದೆಂಬ ಯೋಚನೆ ಮೂಡಿಸಿದ್ದೇ ಕೋಟಿಯವರು. ಆಲನಹಳ್ಳಿ ಕೃಷ್ಣ, ರಾಜಶೇಖರ ಕೋಟಿ, ವೀರೇಂದ್ರ ಸ್ವಾಮಿ, ಪ.ಮಲ್ಲೇಶ್, ರಾಮದಾಸ್, ಅನಂತಮೂರ್ತಿ, ನಾಗರಾಜ್ ಮುಂತಾದವರೆಲ್ಲ ಸೇರಿ ಚರ್ಚಿಸುತ್ತಿದ್ದರು. ಹಾಗಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡೆ. ಪತ್ರಿಕೋದ್ಯಮ ಈಗಿನಷ್ಟು ಹತಾಶೆ ಹುಟ್ಟಿಸಿರಲಿಲ್ಲ. ಬರವಣಿಗೆಯಿಂದ ಬದಲಾವಣೆ ತರಬಹುದೆಂಬ ಆಶಾಭಾವನೆ ಇತ್ತು. ಇದು ಆಗಿನ ಪತ್ರಿಕೋದ್ಯಮದ ಶಕ್ತಿ. ಪತ್ರಿಕೋದ್ಯಮದ ಬಗ್ಗೆ ಭರವಸೆ ಹುಟ್ಟಿಸುವ ಕಾಲವಾಗಿತ್ತು ಎಂದು ಹೇಳಿದರು.

‘ಆಂದೋಲನ’ದಂತಹ ಪತ್ರಿಕೆ ಈಗಲೂ ಮೂಲಗುರಿಯಿಂದ ಆಚೆ ಹೋಗಿಲ್ಲ. ಕೆಲವು ಹೊಂದಾಣಿಕೆಗಳು ಅನಿವಾರ್ಯವಾದರೂ ಬದ್ಧತೆ ಬಿಟ್ಟಿಲ್ಲ. ಒತ್ತಡಗಳಿದ್ದರೂ ಪತ್ರಿಕಾನೀತಿ ಬಿಟ್ಟಿಲ್ಲ. ಸಣ್ಣಪುಟ್ಟ ರಾಜಿಗಳನ್ನು ಮಾಡಿಕೊಂಡತಕ್ಷಣ ದೂರ ತಳ್ಳುವುದು ಸರಿಯಲ್ಲ. ಲಕ್ಷಾಂತರ ಸಂಬಳ ಕೊಟ್ಟುಕೊಂಡುಜನಪರವಾಗಿ, ವೃತ್ತಿನಿಷ್ಠರಾಗಿ ಇರುತ್ತೇವೆ ಎಂಬ ಜನ ಈಗಲೂ ಇದ್ದಾರೆ. ಪತ್ರಕರ್ತನೊಳಗೆ ಚಳವಳಿಕಾರ, ಬಂಡುಕೋರ ಇದ್ದರಷ್ಟೇ ಪತ್ರಿಕೋದ್ಯಮ ಉಳಿಯುತ್ತದೆ. ಪತ್ರಿಕೆಯ ಮಾಲೀಕರು ಪತ್ರಕರ್ತರಿಗೆ ಪ್ಯಾಕೇಜ್ ಕೊಡುವುದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಜಾಸ್ತಿಯಾಗಿದೆ ಎಂದು ಹೇಳಿದರು.

ಈಗ ಯುವಕರ ದಾರಿ ತಪ್ಪಿಸುವ ಮಾಧ್ಯಮಗಳು ಅನೇಕ ಇವೆ. ಆದರೆ, ಇಂದಿನ ಪೀಳಿಗೆ ಹೊಸತನ ತರಬೇಕು. ಈಗಿನ ದೊಡ್ಡ ಅವಕಾಶ ಎಂದರೆಸೋಶಿಯಲ್ ಮೀಡಿಯಾ. ಮುಖ್ಯವಾಹಿನಿಯಷ್ಟೇ ಯುಟ್ಯೂಬ್ ಪ್ರಭಾವ ಬೀರಬಲ್ಲದು. ಹಾಗಿದ್ದಾಗ ಬದ್ಧತೆಯನ್ನಿಟ್ಟುಕೊಂಡು ಹೊಸ ತಲೆಮಾರಿನ ಪತ್ರಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದರು

” ಹಣಕಾಸಿನ ಸೌಲಭ್ಯವಿದ್ದಾಗ ಮಾತ್ರ ‘ಆಂದೋಲನ’ ಮುದ್ರಣವಾಗುತ್ತಿದ್ದ ಕಾಲ ಅದು. ರಾಜಶೇಖರ ಕೋಟಿ ಅವರು ಜಗತ್ತಿನ ವಿಚಾರಗಳನ್ನು ಅಽಕಾರವಾಣಿಯಿಂದ ಹೇಳುತ್ತಿದ್ದರು. ಚಳವಳಿಯ ಮುಂದುವರಿದ ಭಾಗವಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದೆಂಬ ಯೋಚನೆ ಮೂಡಿಸಿದ್ದೇ ಕೋಟಿಯವರು.”

ಇಂದೂಧರ ಹೊನ್ನಾಪುರ 

Tags:
error: Content is protected !!