Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಉತ್ತರ ಐರ್ಲೆಂಡಿನಲ್ಲಿ ಎಲುಬಿನೊಳಗೆ ನುಗ್ಗುವಂತಹ ಚಳಿ

ನನಗಂತೂ ಚಳಿಗಾಲ ಎಂಬುದು ಧಾವಂತದ ಜೀವನಕ್ಕೆ , ಸಮಯ ಹಾಕುವ ಒಂದು ಸಣ್ಣ ಸ್ಪೀಡ್ ಬ್ರೇಕರ್ ಅನಿಸುತ್ತದೆ

ಅಮಿತಾ ರವಿಕಿರಣ್, ಬೆಲ್ಛಾಸ್ಟ್, ಉತ್ತರ ಐರ್ಲೆಂಡ್

ಐರ್ಲೆಂಡಿನ ಚಳಿಗಾಲವನ್ನು ನಾನು ಪದಗಳಲ್ಲಿ ಹೇಳಿದರೆ ನೀವು ಕಲ್ಪಿಸಿಕೊಳ್ಳಲು ಸಾಧ್ಯವಾಗದು. ಏಕೆಂದರೆ ಇದೊಂಥರಾ ಹೆರಿಗೆಯ ನೋವಿದ್ದಂತೆ, ಅನುಭವಿಸಿದವರಿಗಷ್ಟೇ ಅರ್ಥವಾಗುತ್ತದೆ. ಅನುಭವಿಸಿದಷ್ಟೇ ಹೊತ್ತು. ಆಮೇಲೆ ಬೇಕೆಂದರೂ ನೆನಪಾಗದು, ಅನುಭವಕ್ಕೂ ಬರದು.

ಐರ್ಲೆಂಡ್‌ನ ಚಳಿ ಗದ್ದಲ ಮಾಡುವುದಿಲ್ಲ, ಆದರೆ ನಿಧಾನವಾಗಿ ಎಲುಬಿನೊಳಗೆ ನುಗ್ಗುವಂತಹ ಚಳಿ. ಇಲ್ಲಿ ತಾಪಮಾನ ಹೆಚ್ಚು ಕಡಿಮೆಯಿದ್ದರೂ, ಗಾಳಿಯಲ್ಲಿ ಸದಾ ತೇವ ಇರುವುದರಿಂದ 5°C ಕೂಡ 0°C  ತಂಪಿನಂತೆ ಅನಿಸುತ್ತದೆ. ಜೊತೆಗೆ ಮಳೆಯೂ, ಆಲಿಕಲ್ಲು, ಹಿಮಪಾತ ಸೇರಿಕೊಂಡರೆ ಅದು ಚಳಿಗಾಲದ ಉಚ್ಛ್ರಾಯ ಸ್ಥಿತಿ. ಬೆರಳತುದಿಯಲ್ಲಿ ನಿರಂತರ ಹತ್ತಾರು ಸೂಜಿ ಚುಚ್ಚಿದ ಅನುಭವ, ಮೂಗಿನಿಂದ ತನ್ನಿಂತಾನೆ ಸುರಿಯುವ ನೀರು. ಸಿಗರೇಟು, ಬೀಡಿ ಇಲ್ಲದೆಯೂ ಬಾಯಿಂದ ಹೊರಡುವ ಹೊಗೆ. ಒಂದೇ ಎರಡೇ ಈ ಚಳಿಗಾಲದ ಪಡಿಪಾಟಲು.

ಚಳಿಗಾಲವೆಂದರೆ ಇಡೀ ವಾತಾವರಣವೇ ಕಪ್ಪು ಬಿಳುಪು, ಆಕಾಶ ಬೂದು ಬಣ್ಣದ ಶಾಲು ಹೊದ್ದು ಕೂತಂತೆ, ಸಂಜೆ ನಾಲ್ಕಕ್ಕೆ ಆವರಿಸುವ ಕತ್ತಲು. ದಿನವಿಡೀ ಜಿಟಿ ಜಿಟಿ ಮಳೆ. ಒಮ್ಮೊಮ್ಮೆ ಅಬ್ಬರದ ಚಂಡಮಾರುತ, ತರಹೇವಾರಿ ಹೆಸರಿನ ಬಿರುಗಾಳಿಗಳು. ಒಳ್ಳೆ ಗುಣಮಟ್ಟದ ಕೋಟ್, ಕೈಗವಸು, ಶೂಸ್ ಇದ್ದರೆ ಮಾತ್ರ ಈ ಚಳಿಗಾಲದೊಂದಿಗೆ ನಿಮಗೆ ಮೈತ್ರಿ ಸಾಧ್ಯ.

ಎಲ್ಲ ಋತುಗಳಿಗೂ, ಕಾಲಗಳಿಗೂ ಅದರದೇ ಆದ ಚೆಲುವಿದೆ, ಇಷ್ಟೆಲ್ಲಾ ಅಪಸವ್ಯಗಳ ನಡುವೆಯೂ ಚಳಿಗಾಲಕ್ಕೂ ಅದರದೇ ಆದ ಒನಪಿದೆ, ನಿಶ್ಶಬ್ದ ಸೌಂದರ್ಯ, ಎಲೆ ಉದುರಿಸಿಕೊಂಡ ಮರಗಳು ಕತೆ ಹೇಳುವ ಶಾಂತ ವಯೋವೃದ್ಧರಂತೆ ಕಾಣುತ್ತಾರೆ. ತನ್ನಷ್ಟಕ್ಕೆ ತಾನು ಸುಮ್ಮಾನದಿಂದ ಹರಿಯುವ ನದಿಯನ್ನು ಯಾರೋ ವಶಕ್ಕೆ ತೆಗೆಂದುಕೊಂಡಂತೆ ಮರಗಟ್ಟಿ ಹೋಗುತ್ತದೆ. ತಾಪಮಾನ ಕುಸಿಯುತ್ತಾ ಮನೆಬಳಕೆಯ, ಕುಡಿಯುವ ನೀರು ಕೂಡ ನಿಂತು ಹೋಗುವ ಸಾಧ್ಯತೆಗಳುಂಟು.

ಊರಿನಲ್ಲಿ AC ,fanಗಳು ಇರುವಂತೆಯೇ ನಮಗೆ ಮನೆಯಲ್ಲಿ ಕೋಣೆಗೊಂಡು ಹೀಟರ್ ಇರಲೇಬೇಕು. ಬೇಗನೆ ಕತ್ತಲಾಗುವ ಸಂಜೆಗಳಲ್ಲಿ ಬೆಂಕಿಯ ಪಂಜುಗಳನ್ನು, Fire placeಗಳನ್ನು ಬಾಗಿಲಲ್ಲಿ ಇಟ್ಟು, ಗ್ರಾಹಕರಿಗಷ್ಟೇ ಅಲ್ಲ, ಅತ್ತ ಇತ್ತ ಸುಳಿದಾಡುವ ಎಲ್ಲರಿಗೂ ಒಂದು ಬೆಚ್ಚಗಿನ ಭಾವ ಕೊಡಮಾಡುವ ಪುಟ್ಟ ಪುಟ್ಟ ಕೆಫೆಗಳು. ಕ್ರಿಸ್ಮಸ್ ಮಾರುಕಟ್ಟೆಗಳು, ಜಗಜಗಿಸುವ ವಿದ್ಯುತ್ ದೀಪಗಳು. ಎಲ್ಲಕ್ಕಿಂತ ಮಿಗಿಲಾಗಿ ಮುಗುಳ್ನಗುವ ಜನರು, ಅವರ ಸಂಭ್ರಮ ಚಳಿಯನ್ನೂ ಒಂದು ಹಂತಕ್ಕೆ ಸಹ್ಯವಾಗಿಸುತ್ತದೆ.

ಚಳಿಗಾಲ ಎಂದರೆ ನನಗೆ ನೆನಪಾಗುವ ಘಮ ದಾಲ್ಚಿನಿ, ಚಕ್ಕೆಯದು. ಚಕ್ಕೆ ಲವಂಗ ಮತ್ತು ವಿಧ ವಿಧದ ಬೆರ್ರಿಗಳಿಂದ ಮಾಡುವ ಮುಲ್ಲ್ಡ ವೈನ್ ಇರಬಹುದು. Spiced latte, ಈ ಕಾಲದಲ್ಲಿ ಅಂಗಡಿಗಳಲ್ಲಿ ಸಿಗುವ ರೂಮ್ ಫ್ರೆಶ್ನರ್ ಕೂಡ ದಾಲ್ಚಿನಿ ಘಮ ಹೊತ್ತಿರುತ್ತದೆ.

ನನಗಂತೂ ಚಳಿಗಾಲ ಎಂಬುದು ಧಾವಂತದ ಜೀವನಕ್ಕೆ, ಸಮಯ ಹಾಕುವ ಒಂದು ಸಣ್ಣ ಸ್ಪೀಡ್ ಬ್ರೇಕರ್ ಅನಿಸುತ್ತದೆ. ಬದುಕು ನಿಂತು ಹೋಗುತ್ತದೆಯೇ ಇಲ್ಲ. ಆದರೆ ಅದರ ಗತಿಯಲ್ಲೊಂದು ವಯ್ಯಾರ ಸೇರಿಕೊಳ್ಳುತ್ತದೆ. ಇದರ ಸಮಾರೋಪವಾಗುವುದು ಚೈತ್ರಕಾಲ ಹೊತ್ತು ತರುವ ಚಿಗುರುಗಳಿಂದ. ಅಲ್ಲಿಯ ತನಕ ನಾವು ಈ ಚಳಿಗಾಲವನ್ನು ಒಪ್ಪಿಯೋ, ತಪ್ಪಿಯೋ ಒಟ್ಟಿನಲ್ಲಿ ಅಪ್ಪಿಕೊಳ್ಳಲೇಬೇಕು.

Tags:
error: Content is protected !!