Mysore
19
few clouds

Social Media

ಬುಧವಾರ, 21 ಜನವರಿ 2026
Light
Dark

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹೆಚ್ಚಿದ ಹುಲಿ ಭೀತಿ

ಮಂಜು ಕೋಟೆ

ಜನರು, ರೈತರಿಗೆ ದಾಳಿಯ ಆತಂಕ; ಅಧಿಕಾರಿಗಳಿಗೆ, ಜನಪ್ರತಿನಿಽಗಳಿಗೆ ಸೆರೆಹಿಡಿಯುವುದೇ ತಲೆನೋವ

ಎಚ್.ಡಿ.ಕೋಟೆ: ಪಟ್ಟಣ ಮತ್ತು ತಾಲ್ಲೂಕಿನ ಕಾಡಂಚಿನ ಅನೇಕ ಗ್ರಾಮಗಳ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಹುಲಿಗಳು ಮತ್ತೆಕಾಣಿಸಿಕೊಂಡು ಜನಸಾಮಾನ್ಯರಲ್ಲಿ, ರೈತರಲ್ಲಿ ಪ್ರಾಣ ಭಯ ಉಂಟುಮಾಡಿದ್ದರೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ದೊಡ್ಡ ತಲೆನೋವಾಗಿದೆ.

ತಾಲ್ಲೂಕಿನ ಬಂಡೀಪುರ ಮತ್ತು ನಾಗರ ಹೊಳೆ ಅಭಯ ಅರಣ್ಯ ವ್ಯಾಪ್ತಿಯ ರೈತರ ಅನೇಕ ಜಮೀನುಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹತ್ತಕ್ಕೂ ಹೆಚ್ಚು ಹುಲಿಗಳು ಮತ್ತು ಹುಲಿ ಮರಿಗಳು ಕಾಣಿಸಿಕೊಂಡು, ನಾಲ್ವರ ಮೇಲೆ ದಾಳಿ ನಡೆಸಿ ಮೂವರನ್ನು ಕೊಂದಿವೆ.

ರೈತರು, ಸಂಘ ಸಂಸ್ಥೆಯವರು, ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಬೆಣ್ಣೆಗೆರೆ, ಈರೇ ಗೌಡನ ಹುಂಡಿ, ಬಡಗಲಪುರ, ಹೊಸಕೋಟೆ, ಹೊಸವೀಡು ಪ್ರದೇಶಗಳಲ್ಲಿ ಐದು ಹುಲಿಗಳನ್ನು ಇಲಾಖೆಯವರು ಹರಸಾಹಸಪಟ್ಟು ಸೆರೆಹಿಡಿದಿದ್ದಾರೆ.

ಎಲ್ಲೆಲ್ಲಿ ಹುಲಿ ಸಂಚಾರ?: ತಾಲ್ಲೂಕಿನ ಗಣೇಶಗುಡಿ, ರಾಮನಹಳ್ಳಿ, ಹೊಸ ಹೊಳಲು, ಬಡಗಲಪುರ, ಹಾದನೂರು, ಹೆಗ್ಗುಡಿಲು, ಗುಂಡತ್ತೂರು, ಇಟ್ನ, ಟೈಗರ್ ಬ್ಲಾಕ್, ಗಣೇಶಪುರ, ಮೇಟಿ ಕುಪ್ಪೆ, ಕಲ್ಲಟ್ಟಿ, ಹೆಗ್ಗಡಾಪುರ, ನಾಗನಹಳ್ಳಿ, ಕೆ.ಜಿ.ಹಳ್ಳಿ, ಕೋಟೆ, ಚಾಕಳ್ಳಿ, ತಾರಕ, ಅಂತರಸಂತೆ, ಸತ್ತಿಗೆಹುಂಡಿ, ಇನ್ನಿತರ ಅನೇಕ ಗ್ರಾಮಗಳ ರೈತರ ಜಮೀನಿನಲ್ಲಿ ಹುಲಿಗಳು ಕಾಣಿಸಿಕೊಂಡು ಹಂದಿ ಮತ್ತು ದನ-ಕರುಗಳ ಮೇಲೆ ದಾಳಿ ಮಾಡುತ್ತಿರುವುದು ಆತಂಕ ಮೂಡಿಸಿದೆ.

ಸೋಮವಾರ ಗಣೇಶನಗುಡಿ ಗ್ರಾಮದ ರಾಮಕೃಷ್ಣಪ್ಪ ಎಂಬವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆ ಮತ್ತು ನಿವೃತ್ತ ಶಿಕ್ಷಕ ಚಿಕ್ಕಣ್ಣಯ್ಯ ಅವರ ಮನೆಯ ಹಿಂಭಾಗವಿರುವ ಜಮೀನಿನಲ್ಲಿ ಹುಲಿ ಓಡಾಟ ನಡೆಸಿರುವುದು ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ.

ಕೆಲವೊಂದು ಪ್ರದೇಶಗಳಲ್ಲಿ ಒಂದು ಬಾರಿ ಕಾಣಿಸಿಕೊಂಡ ಹುಲಿಗಳು ಕಾಡಿನ ಪ್ರದೇಶಕ್ಕೆ ಹೋಗಿ ಮತ್ತೆ ವಾರದ ನಂತರ ಕಾಣಿಸಿಕೊಳ್ಳುತ್ತವೆ. ಮತ್ತೆ ಕೆಲವು ಹುಲಿಗಳು ರೈತರ ಬಾಳೆ, ಕಬ್ಬು, ಮುಸುಕಿನ ಜೋಳ ಜಮೀನುಗಳ ಆಸುಪಾಸಿನ ಪೊದೆಗಳ ರೀತಿಯಲ್ಲಿರುವ ಜಾಗಗಳಲ್ಲಿ ವಾಸ್ತವ್ಯ ಮಾಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ಆನೆಗಳು ಕಾಡಂಚಿನ ಗ್ರಾಮಗಳಿಗೆ, ಜಮೀನುಗಳಿಗೆ ಬಂದು ದಾಳಿ ಮಾಡುವುದು ಕಡಿಮೆಯಾಗಿದ್ದರೂ ಹುಲಿಗಳ ಆರ್ಭಟ ಹೆಚ್ಚಾಗಿರುವುದು ಜನರ ಆತಂಕ ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು, ಜನಪ್ರತಿನಿಽಗಳು ರೈತರು, ವನ್ಯಜೀವಿಗಳ ಹಿತವನ್ನು ಗಮನ ದಲ್ಲಿಟ್ಟುಕೊಂಡು ಸೂಕ್ತ ಕ್ರಮ ಜರುಗಿಸಬೇಕಿದೆ.

ಜಮೀನಿಗೆ ಹೋಗಲು ಭಯ:  ಎರಡು-ಮೂರು ದಿನಗಳಿಂದ ಹುಲಿಗಳ ಆರ್ಭಟ ಎಲ್ಲೆಂದರಲ್ಲಿ ಹೆಚ್ಚಾಗಿದ್ದು, ರೈತರು ಮತ್ತು ಕೂಲಿ ಕಾರ್ಮಿಕರು ಜಮೀನುಗಳಿಗೆ ಕೆಲಸ ಕಾರ್ಯಗಳಿಗಾಗಿ ತೆರಳುವುದನ್ನು ನಿಲ್ಲಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಆ ಭಾಗದ ರೈತರು ಮತ್ತು ಮುಖಂಡರು ಹುಲಿ ಕಾಣಿಸಿಕೊಂಡಿರುವ ವಿಚಾರ ತಿಳಿಸುತ್ತಿದ್ದಾರೆ. ಕೆಲವೊಂದೆಡೆ ಅರಣ್ಯ ಇಲಾಖೆಯವರು ತಂಡಗಳೊಡನೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

” ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯ ಕಾಡಂಚಿನ ಮತ್ತು ಇನ್ನಿತರ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿ ಕೊಳ್ಳುತ್ತಿರುವುದು ತಿಳಿದುಬಂದಿದೆ. ಈಗಾಗಲೇ ಮೂರು ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಈ ಸಂಬಂಧ ಸಭೆ ನಡೆಯುತ್ತಿದೆ. ಕಾಡಿನಲ್ಲಿ ಹುಲಿಗಳಮಿಲನ ಸಮಯ ಇದಾಗಿ ರುವುದರಿಂದ ಕೆಲವೊಂದು ಹುಲಿಗಳು ಕಾಡಿನಿಂದ ಹೊರಬರುತ್ತಿವೆ.”

-ವಿನೀತ, ಎಸಿಎಫ್, ಎಚ್.ಡಿ.ಕೋಟೆ. 

Tags:
error: Content is protected !!