ಎಂ.ಆರ್. ಚಕ್ರಪಾಣಿ
ಸ್ನೇಹಿತರು, ನೆಂಟರಿಷ್ಟರಿಗೆ ಹೋಳಿಗೆ ಊಟ ಹಾಕಿಸಿದ ರೈತ ದಂಪತಿ
ಮದ್ದೂರು: ಹಳ್ಳಿಕಾರ್ ತಳಿಯ ಗಬ್ಬದ ಹಸುವಿಗೆ ರೈತ ಕುಟುಂಬವೊಂದು ಸೀಮಂತ ಮಾಡಿ ಗ್ರಾಮಸ್ಥರು, ಸ್ನೇಹಿತರು, ನೆಂಟರಿಷ್ಟರಿಗೆ ಹೋಳಿಗೆ ಊಟ ಹಾಕಿಸಿ ಗಮನ ಸೆಳೆದಿದೆ.
ತಾಲ್ಲೂಕಿನ ದುಂಡನಹಳ್ಳಿ ಗ್ರಾಮದ ರೈತ ಕುಟುಂಬದ ಮಂಜುಳಾ-ನಾಗೇಶ್ ದಂಪತಿ, ಪುತ್ರ ಡಿ.ಎನ್.ರಘು, ಪುತ್ರಿ ಸಿಂಧು ಹಾಗೂ ಅವರ ಕುಟುಂಬದವರು ಮಹಿಳೆಯರಿಗೆ ಮಾಡುವ ಶಾಸ್ತ್ರೋಕ್ತದಂತೆ ಹಳ್ಳಿಕಾರ್ ಹಸುವಿಗೆ ಸೀಮಂತ ಮಾಡಿರುವುದು ವಿಶಿಷ್ಟವಾಗಿದೆ.
ಮಂಜುಳಾ-ನಾಗೇಶ್ ಕುಟುಂಬ ಮತ್ತು ರಾಸುಗಳ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ಇದು ತಂದೆ, ತಾಯಿ ಹಾಗೂ ಮಕ್ಕಳ ಸಂಬಂಧವಿದ್ದಂತೆ. ಹಾಗಾಗಿ ತಮ್ಮ ಮನೆಯ ನೆಚ್ಚಿನ ಹಳ್ಳಿಕಾರ್ ತಳಿಯ ನಾಟಿ ಆಕಳಿಗೆ ಸೀಮಂತ ಮಾಡಿ ಜನರ ಗಮನ ಸೆಳೆದಿದ್ದಾರೆ.
ಹಸುವಿನ ಸೀಮಂತ ಕಾರ್ಯಕ್ರಮ ಕುಟುಂಬದವರ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಸುಮಾರು ೧೨ ತಟ್ಟೆಗಳಲ್ಲಿ ಸೇಬು, ದಾಳಿಂಬೆ, ಕಿತ್ತಳೆ, ವೀಳ್ಯದೆಲೆ, ಬಳೆ, ಹೂ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು, ರವೆ ಉಂಡೆ, ಕಜ್ಜಾಯ, ಮೈಸೂರು ಪಾಕ್, ಒಬ್ಬಟ್ಟು, ಸೇರಿದಂತೆ ವಿಶೇಷ ರೀತಿಯ ಸಿಹಿ ತಿನಿಸುಗಳನ್ನಿಟ್ಟು, ಹಸುವನ್ನು ಮಧುವಣಗಿತ್ತಿಯಂತೆ ಸಿಂಗರಿಸಿ, ಪೂಜೆ ಸಲ್ಲಿಸಿ ಆಗಮಿಸಿದ್ದ ಜನರನ್ನು ಸಂತೋಷಗೊಳಿಸಿತು.
ಮಂಜುಳಾ-ನಾಗೇಶ್ ಮೂಲತಃ ರೈತ ಕುಟುಂಬದವರು. ಇವರು ೨ ಜತೆ ನಾಟಿ, ೭ ಸೀಮೆ ಹಸುಗಳನ್ನು ಸಾಕಿದ್ದಾರೆ. ಮನುಷ್ಯರಿಗೆ ಸೀಮಂತ ಮಾಡುತ್ತೇವೆ, ಪ್ರಾಣಿಗಳಿಗೊ ಮಾಡಿದರೆ ತಪ್ಪೇನು ಎಂದು ಸೀಮಂತ ಕಾರ್ಯಕ್ರಮ ಮಾಡಿ ನೆರೆದವರಿಗೆ ಸಿಹಿಯೂಟ ಉಣಬಡಿಸಿದ್ದಾರೆ.
” ಹಲವಾರು ವರ್ಷಗಳಿಂದ ನಮ್ಮ ಕುಟುಂಬ ಹಸುಗಳನ್ನು ಸಾಕುತ್ತಿದ್ದು, ಹಸುಗಳ ಮೇಲಿನ ಪ್ರೀತಿಯಿಂದ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು ೧೦೦ಕ್ಕೂ ಹೆಚ್ಚು ಜನರಿಗೆ ಹೋಳಿಗೆ ಊಟ ಹಾಕಿಸಿದ್ದೇವೆ. ಹಸುಗಳು ರೈತರಿಗೆ ಮಿತ್ರರಾಗಿರುವ ಕಾರಣ ಸೀಮಂತ ಕಾರ್ಯಕ್ರಮ ಮಾಡಿದ್ದೇವೆ. ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.
ಡಿ.ಎನ್.ರಘು, ಯುವ ರೈತ, ದುಂಡನಹಳ್ಳಿ
” ಭೂಮಿ,ಹೆಣ್ತನ ಮತ್ತು ರಾಸುಗಳ ಶ್ರಮವನ್ನು ಗೌರವಿಸುವ ಒಂದು ವಿಶಿಷ್ಟ ಸಂಪ್ರದಾಯ ಸೀಮಂತ ಕಾರ್ಯಕ್ರಮವಾಗಿದೆ. ಗರ್ಭಿಣಿ ಆಕಳನ್ನು ಸಿಂಗರಿಸಿ, ಹಬ್ಬದ ವಿಶೇಷ ಭಕ್ಷ್ಯ,ಭೋಜ್ಯವನ್ನು ಉಣಬಡಿಸಲಾಯಿತು. ರೈತರು ತಮ್ಮ ರಾಸುಗಳು ಮತ್ತು ಭೂಮಿಯ ಶ್ರಮವನ್ನು ಗೌರವಿಸಲು ಮತ್ತು ಕೃತಜ್ಞತೆ ಸಲ್ಲಿಸಲು ಈ ಸಂಪ್ರದಾಯವನ್ನು ಪಾಲಿಸಬೇಕು”
ಮಂಜುಳಾ-ನಾಗೇಶ್ ರೈತ ದಂಪತಿ




