Mysore
23
overcast clouds

Social Media

ಬುಧವಾರ, 14 ಜನವರಿ 2026
Light
Dark

ಅಳಿವಿನಂಚಿನ ಪ್ರಾಣಿಗಳ ಪಾಲನೆ-ಪೋಷಣೆಯಲ್ಲಿ ಯಶಸ್ಸು

ಹೇಮಂತ್‌ಕುಮಾರ್

ಪಶು ವೈದ್ಯ ಎಚ್.ರಮೇಶ್ ಸಾಧನೆಗೆ ಮುಖ್ಯಮಂತ್ರಿ ಪದಕದ ಗೌರವ 

ಮಂಡ್ಯ: ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಇಲಾಖೆಯಲ್ಲಿ ವಿವಿಧ ಪ್ರಭೇದದ ಪ್ರಾಣಿಗಳ ಆರೋಗ್ಯ ತಪಾಸಣೆ, ಚಿಕಿತ್ಸೆ, ಪೋಷಣೆ ಮತ್ತು ಪಾಲನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಮದ್ದೂರಿನ ಪಶು ವೈದ್ಯ ಡಾ.ಎಚ್.ರಮೇಶ್ ಅವರು ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ. ೭೧ನೇ ವನ್ಯಜೀವಿ ಸಪ್ತಾಹದ ಸಮಾರೋಪದ ಅಂಗವಾಗಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ.ಎಚ್.ರಮೇಶ್ ಅವರಿಗೆ ಪದಕ ಪ್ರದಾನ ಮಾಡಿ ಅಭಿನಂದಿಸಿದರು.

ಮೂಲತಃ ಮದ್ದೂರು ತಾಲ್ಲೂಕಿನ ಚಿಕ್ಕಅರಸಿನಕೆರೆ ಹೋಬಳಿ ಛತ್ರದ ಹೊಸಹಳ್ಳಿಯ ಮಲವಮ್ಮ ಮತ್ತು ಹುಚ್ಚಯ್ಯ ದಂಪತಿಯ ಪುತ್ರರಾದ ಡಾ.ರಮೇಶ್ ಅವರು ಅರಣ್ಯ ಇಲಾಖೆಯ ಬಂಡೀಪುರ ಮತ್ತು ಬನ್ನೇರುಘಟ್ಟದಲ್ಲಿ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ರಮೇಶ್ ಸುಮಾರು ೧೦೦ ವಿವಿಧ ಜಾತಿಗಳ ೨ ಸಾವಿರಕ್ಕೂ ಹೆಚ್ಚು ಪ್ರಾಣಿಗಳ ಆರೋಗ್ಯ ನಿರ್ವಹಣೆ ಮತ್ತು ಪಾಲನೆ, ಪೋಷಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಅರಣ್ಯ ಇಲಾಖೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಡಾ.ಎಚ್.ರಮೇಶ್ ಅವರು ವಿಶೇಷವಾಗಿ ಆನೆ, ಹುಲಿ, ಸಿಂಹ, ಜೀಬ್ರಾಗಳಂತಹ ಪ್ರಮುಖ ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆ, ಲೇಸರ್ ಚಿಕಿತ್ಸೆ ಮತ್ತು ರೇಡಿಯೋ ಕಾಲರಿಂಗ್ ಹಾಗೂ ಹಲವು ಸಂಕೀರ್ಣ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿರುವುದು ಇವರ ಹೆಗ್ಗಳಿಕೆ.

ಪ್ರಮುಖವಾಗಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳ ಸಂತಾನೋತ್ಪತ್ತಿ ಯನ್ನು ಯಶಸ್ವಿಯಾಗಿ ನಡೆಸಿರುವುದು ಪ್ರಮುಖ ಸಾಧನೆ. ಹಲವು ಕಾರಣಗಳಿಂದಾಗಿ ಮೃತಪಟ್ಟ ೫೧ ಆನೆಗಳು, ೨೦ ಹುಲಿಗಳು, ೨೦ ಚಿರತೆಗಳು ಹಾಗೂ ವಿವಿಧ ಪ್ರಾಣಿಗಳ ಮರಣೋತ್ತರ ಪರೀಕ್ಷೆ ನಡೆಸಿ ಇಲಾಖೆಗೆ ಈ ಪ್ರಾಣಿಗಳ ಸಾವಿನ ನಿಖರ ಕಾರಣ ತಿಳಿಸುವಲ್ಲಿ ಡಾ.ರಮೇಶ್ ನಿಪುಣರಾಗಿದ್ದಾರೆ. ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವ ಡಾ.ಎಚ್.ರಮೇಶ್ ಅವರಿಗೆ ಪಶ್ಚಿಮ ಘಟ್ಟಗಳ ಅರಣ್ಯ ಸಂರಕ್ಷಣಾ ಕಾರ್ಯಪಡೆ ಸಮಿತಿ ಮಾಜಿ ನಿರ್ದೇಶಕ ಲಿಂಗನದೊಡ್ಡಿ ರಾಮಕೃಷ್ಣ ಅಭಿನಂದಿಸಿದ್ದಾರೆ.

ಮಂಡ್ಯ ಜಿಲ್ಲೆಗೆ ಸಂದ ಗೌರವ….: 

ಮಾನವ ವನ್ಯಜೀವಿ ಸಂಘರ್ಷದ ಸಂದರ್ಭದಲ್ಲಿ ಒಟ್ಟು ೭೧ ಕಾಡಾನೆಗಳನ್ನು ಸೆರೆಹಿಡಿದು ಚಿಕಿತ್ಸೆ ನೀಡಿದ್ದಾರೆ. ಅದರಲ್ಲಿ ೩೦ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಜೊತೆಗೆ ೧೪ ಹುಲಿಗಳ ಸೆರೆ ಹಿಡಿದು ಚಿಕಿತ್ಸೆ ನೀಡಿ ರೇಡಿಯೋ ಕಾಲರ್ ಅಳವಡಿಸಿರುವ ಇವರ ವನ್ಯಜೀವಿ ಸಂರಕ್ಷಣೆಯ ಈ ಎಲ್ಲಾ ಕಾರ್ಯ ಸಾಧನೆಗಳನ್ನು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸಿರುವ ಸರ್ಕಾರ, ಅರಣ್ಯ ಇಲಾಖೆ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಿರುವುದು ಮಂಡ್ಯ ಜಿಲ್ಲೆಗೆ ಸಂದ ಗೌರವವೂ ಹೌದು.

Tags:
error: Content is protected !!