Mysore
23
overcast clouds

Social Media

ಬುಧವಾರ, 14 ಜನವರಿ 2026
Light
Dark

ಪರಿಶಿಷ್ಟ ವಿದ್ಯಾರ್ಥಿನಿಯರಿಗೆ ಶಾಸ್ತ್ರೀಯ ಸಂಗೀತ ತರಬೇತಿ

ಚಿರಂಜೀವಿ ಸಿ ಹುಲ್ಲಹಳ್ಳಿ

ಸಂಗೀತಾಸಕ್ತರಿಗಾಗಿ ವಿನೂತನ ಯೋಜನೆ ‘ಕಲಾ ತರಬೇತಿ’

ಉಚಿತವಾಗಿ ಸಂಗೀತ ಪರಿಕರಗಳ ವಿತರಣೆ

ಪ್ರತಿ ವರ್ಷ ವಿದ್ಯಾರ್ಥಿನಿಲಯಗಳಲ್ಲೇ ೬ ತಿಂಗಳು

ಮೈಸೂರು: ಶಿಕ್ಷಣ, ಕಲೆ ಸೇರಿದಂತೆ ಯಾವುದೇ ಕ್ಷೇತ್ರವೂ ಯಾರೊಬ್ಬರ ಸ್ವತ್ತಲ್ಲ. ಆಸಕ್ತಿ, ಶ್ರದ್ಧೆ ಇದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಈ ಆಶಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಲಿತ ಸಮುದಾಯದ ವಿದ್ಯಾರ್ಥಿನಿಯರಿಗೆ ಶಾಸೀಯ ಸಂಗೀತ ಕಲಿಕಾ ತರಬೇತಿಗೆ ಅವಕಾಶ ಕಲ್ಪಿಸಿದೆ.

ಇಂತಹ ವಿನೂತನ ಯೋಜನೆಗೆ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮುನ್ನುಡಿ ಬರೆದಿದೆ. ಶೋಷಿತ ಸಮುದಾಯಗಳಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶದವರಿಗೆ ಹೆಚ್ಚೂ ಕಡಿಮೆ ಅಪರಿಚಿತವೇ ಆಗಿರುವ ಸಂಗೀತ ಕಲಿಕೆಯ ತರಬೇತಿ ಹೊಸ ಬಗೆಯ ಕಾರ್ಯಕ್ರಮವಾಗಿದ್ದು, ಕಳೆದ ಆಗಸ್ಟ್ ತಿಂಗಳಿನಿಂದ ಅನುಷ್ಠಾನಕ್ಕೆ ಬಂದಿದೆ.

ಜಿಲ್ಲೆಯ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ೮,೯,೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದೂಸ್ಥಾನಿ, ಕರ್ನಾಟಕಿ, ಶಾಸೀಯ ಸಂಗೀತ, ಸುಗಮ ಸಂಗೀತವನ್ನು ಕಲಿಸಿ ಸಂಗೀತದ ಕ್ಷೇತ್ರದಲ್ಲಿ ದಲಿತ ಹೆಣ್ಣುಮಕ್ಕಳ ಮಧುರ ಸ್ವರಾಲಾಪನೆ ಕಳೆದ ೨ ತಿಂಗಳುಗಳಿಂದ ‘ಕಲಾ ತರಬೇತಿ’ ಎಂಬ ಹೊಸ ಯೋಜನೆಯಡಿ ನಡೆಯುತ್ತಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ‘ಕಲಾ ತರಬೇತಿ’ ಯೋಜನೆಗಾಗಿ ಶಾಲೆಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ನೂರಾರು ಆಸಕ್ತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆಗಳ ವಸತಿ ನಿಲಯಗಳ ಕ್ರಮವಾಗಿ ೨೦ ಹಾಗೂ ೧೫ ವಿದ್ಯಾರ್ಥಿನಿಯರಿಗೆ ಮಾತ್ರ ಸಂಗೀತಾಭ್ಯಾಸಕ್ಕೆ ಅವಕಾಶ ನಿಗದಿಪಡಿಲಾಗಿತ್ತು. ಆದರೆ, ಹೆಣ್ಣುಮಕ್ಕಳಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದ್ದರಿಂದ ಜಿಲ್ಲೆಯಲ್ಲಿ ೪೦-೪೫ ವಿದ್ಯಾರ್ಥಿನಿಯರಿಗೆ ಅನುಮತಿ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮಾಹಿತಿ ನೀಡಿದರು.

ಎಲ್ಲೆಲ್ಲಿ ತರಬೇತಿ?: ಪಡುವಾರಹಳ್ಳಿಯಲ್ಲಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ಪ್ರೌಢಶಾಲೆ ವಿದ್ಯಾರ್ಥಿ ನಿಲಯ ಮತ್ತು ಇಲವಾಲದಲ್ಲಿರುವ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಯರ ಇಲಾಖೆಯ ವಿದ್ಯಾರ್ಥಿನಿಲಯದಲ್ಲಿ ಸಂಗೀತ ತರಬೇತಿ ನಡೆಯುತ್ತಿದೆ. ವಾರದಲ್ಲಿ ಮೂರು ದಿನಗಳು ತಲಾ ೨ ಗಂಟೆಗಳು ಆರು ತಿಂಗಳು ತರಬೇತಿ ನೀಡ ಲಾಗುತ್ತಿದೆ. ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ನಡೆಯಲಿರುವ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ವಿದ್ಯಾರ್ಥಿನಿಯರಿಗೆ ಸಂಗೀತ ಕಲಿಸಲು ದಲಿತ ಸಮುದಾಯದ ಸಂಗೀತ ವಿದ್ವಾಂಸರನ್ನೇ ಶಿಕ್ಷಕರನ್ನಾಗಿ ನೇಮಿಸಲಾಗಿದೆ. ದಲಿತರಲ್ಲಿ ಸಂಗೀತ ಕಲಿತವರು ಬೆರಳೆಯಣಿಯಷ್ಟು ಇದ್ದರೂ ಅವರನ್ನೇ ಗುರುತಿಸಿ ತರಬೇತಿ ನೀಡಲಾಗುತ್ತಿದೆ. ಇವರಿಗೆ ಪ್ರತಿ ತಿಂಗಳು ೧೦ ಸಾವಿರ ರೂ. ಗೌರವಧನ ನೀಡಲಾಗುತ್ತಿದೆ ಎಂದು ಸುದರ್ಶನ್ ತಿಳಿಸಿದರು.

ಕಲಿಕಾ ಪರಿಕರಗಳ ವಿತರಣೆ: ಸಂಗೀತ ಕಲಿಕೆಗೆ ಅತ್ಯಂತ ಅವಶ್ಯವಾದ ಹಾರ್ಮೋನಿಯಂ, ತಬಲ, ಕೀ ಬೋರ್ಡ್ ಇತರೆ ಸಂಗೀತ ಪರಿಕರಗಳನ್ನು ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೀಡಲಾಗುವುದು. ಈಗಾಗಲೇ ಕೆಲ ವಿದ್ಯಾರ್ಥಿನಿಯರಿಗೆ ವಿತರಿಸಲಾಗಿದೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣದಿಂದ ನೆರವು: ದಲಿತರ ಅಭಿವೃದ್ಧಿಗೆ ಎಸ್‌ಸಿಎಸ್‌ಪಿ – ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆ ವಿನಿಯೋಗಿಸಲಾಗಿತ್ತು. ಇದರಿಂದ ದಲಿತ ಸಂಘಟನೆಗಳು ಆಕ್ರೋಶಗೊಂಡಿದ್ದವು. ಈ ಹಿಂದೆ ಬಿಜೆಪಿ ಸರ್ಕಾರವೂ ಸಾವಿರಾರು ಕೋಟಿ ರೂ.ಗಳನ್ನು ಬಳಕೆ ಮಾಡದೆ ವಾಪಸ್ ಕಳುಹಿಸಿತ್ತು. ರಾಜ್ಯ ಸರ್ಕಾರ ದಲಿತರ ಹಣವನ್ನು ದಲಿತರಿಗಾಗಿ ವಿನಿಯೋಗಿಸಬೇಕೆಂದು ನಿರ್ಧರಿಸಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯ ಮೂಲಕ ಕಲಾ ತರಬೇತಿಗೆ ಬಳಸಿ ಕೊಳ್ಳಲಾಗುತ್ತಿದೆ.

ಏನೇನು ಕಲಾ ತರಬೇತಿ?: 

ಕಲಾ ತರಬೇತಿ ಯೋಜನೆಯಲ್ಲಿ ಶಾಸೀಯ ಸಂಗೀತ ಕಲಿಕೆಯ ಜೊತೆಗೆ ಅಭಿನಯ, ನೃತ್ಯ, ಜಾನಪದ ಸಂಗೀತ ವಿವಿಧ ಬಗೆಯ ಕಲಾ ಪ್ರಕಾರಗಳನ್ನೂ ಕಲಿಸಲಾಗುತ್ತಿದೆ. ವಿದ್ಯಾರ್ಥಿನಿಯರು ಕೂಡ ಅತ್ಯಂತ ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾರೆ. ಕಲಾ ತರಬೇತಿ ರಾಜ್ಯ ಮಟ್ಟದ ಯೋಜನೆಯಾಗಿದ್ದು, ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಆಗಸ್ಟ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಯೋಜನೆಯಲ್ಲಿ ಕೇವಲ ೩೦ ಮಕ್ಕಳಿಗೆ ಅವಕಾಶವಿತ್ತು. ಆದರೆ, ನಾವು ೧೦-೧೫ ವಿದ್ಯಾರ್ಥಿನಿಯರಿಗೆ ಹೆಚ್ಚುವರಿಯಾಗಿ ಅವಕಾಶ ಕಲ್ಪಿಸಿದ್ದೇವೆ.

ಡಾ.ಎಂ.ಡಿ.ಸುದರ್ಶನ್, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Tags:
error: Content is protected !!