ಯಳಂದೂರು: ಸಮೀಪದ ಹೊಂಗನೂರು ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡದ ಸುತ್ತಮುತ್ತ ಅನೈರ್ಮಲ್ಯತಾಂಡವವಾಡುತ್ತಿದೆ. ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಗ್ರಾಪಂ ಬಳಿಯೇ ಅಶುಚಿತ್ವ ಇರುವುದು ವಿಪರ್ಯಾಸ.
ದೊಡ್ಡ ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಈ ಗ್ರಾಮದಲ್ಲಿ ೧,೮೫೮ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಹೊಂಗನೂರು ಬೆಲ್ಲವತ್ತ, ಮುರಟಿಪಾಳ್ಯ, ಶನಿವಾರಮುರಟಿ ಗ್ರಾಮಗಳನ್ನು ಈ ಪಂಚಾಯಿತಿ ಒಳಗೊಂಡಿದೆ. ಗ್ರಾಮದಿಂದ ಕಳ್ಳೀಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗ್ರಾಮದ ಹೊರ ಭಾಗದಲ್ಲಿ ಪಂಚಾಯಿತಿ ಕಟ್ಟಡವಿದೆ. ಆದರೆ ಈ ಕಟ್ಟಡದ ಸುತ್ತಲೂ ಕಳೆ ಗಿಡಗಳು ಬೆಳೆದು ನಿಂತಿವೆ. ಇದರ ಹಂಬುಗಳು ಕಿಟಕಿ ಒಳಗಿಂದ ತೂರಿ ಕಚೇರಿ ಒಳಗೂ ಹಬ್ಬಿದೆ. ಕಟ್ಟಡದ ಹಿಂಭಾಗದಲ್ಲಿ ೨ ಶೌಚಾಗೃಹಗಳಿದ್ದು, ನಿರ್ವಹಣೆಯಿಲ್ಲದೆ ಗಬ್ಬು ನಾರುತ್ತಿವೆ. ಅಲ್ಲದೆ ಇಲ್ಲಿಗೆ ನೀರಿನ ಸಂಪರ್ಕವೂ ಇಲ್ಲ. ಪಂಚಾಯಿತಿ ಸುತ್ತುಗೋಡೆಯ ಒಳಗೆ ಮದ್ಯದ ಪೌಚ್‌ಗಳು ಬಿದ್ದಿವೆ. ಅಲ್ಲದೆ ಹಿಂಭಾಗ ಅರೆಬರೆಯಾಗಿರುವ ಕಟ್ಟಡದಲ್ಲಿ ಕಳೆ ಸಸ್ಯಗಳು ಬೆಳೆದಿವೆ.
ಕ್ರಿಮಿಕೀಟಗಳು, ಸರೀಸೃಪಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಕಚೇರಿ ಮುಂಭಾಗವಿರುವ ಆಟೋ ಟಿಪ್ಪರ್ ಕೆಲಸಕ್ಕೆ ಬಾರದೆ ನಿಂತಿದ್ದು ಇದರ ಗಾಜು ಒಡೆದಿದೆ. ಮನೆ ಮನೆಕಸ ಸಂಗ್ರಹಿಸಲು ನೀಡಲು ಇಟ್ಟಿದ್ದ ಕಸದ ಬುಟ್ಟಿಗಳಿಗೇ ಕಸ ಹಿಡಿದಿದ್ದು ನಿರುಪಯುಕ್ತವಾಗಿ ಬಿದ್ದಿವೆ. ಕಚೇರಿ ಒಳಗೆ ಗ್ರಂಥಾಲಯಕ್ಕೆ ತಂದಿದ್ದ ಪಿಠೋಪಕರಣಗಳು, ಪುಸಕ್ತಗಳು ದೂಳು ಹಿಡಿಯುತ್ತಿವೆ. ಸಾರ್ವಜನಿಕರು ಬಂದರೆ ಕುಳಿತುಕೊಳ್ಳಲು ಸ್ಥಳವಿಲ್ಲದಂತಾಗಿದೆ. ಕಟ್ಟಡದಶೌಚಗೃಹದಲ್ಲಿ ನೀರಿಲ್ಲದೆ ಗಬ್ಬು ನಾರುತ್ತಿದ್ದು, ಇದರ ಬಾಗಿಲಿನ ಮುಂಭಾಗದಲ್ಲೂ ಆಳೆತ್ತರದ ಕಳೆ ಗಿಡಗಳು ಬೆಳೆದು ಆವರಿಸಿಕೊಂಡಿವೆ. ಇದರ ಪಿಟ್ ಗುಂಡಿ ಕೂಡ ಬಾಯ್ತೆರೆದು ನಿಂತಿದೆ. ಸಾರ್ವಜನಿಕರು ಬಂದರೆ ಇಲ್ಲಿ ಕುಡಿಯಲು ನೀರೂ ಸಿಗುವುದಿಲ್ಲ.
” ಹಲವು ದಿನಗಳಿಂದಲೂ ಇಲ್ಲಿನ ಸಿಸಿ ಕ್ಯಾಮೆರಾವೂಕೆಟ್ಟು ನಿಂತಿದೆ. ಅಲ್ಲದೆ ಲ್ಲಿಗೆ ತೆರಳುವ ರಸ್ತೆಯ ಸುತ್ತಮುತ್ತ ಅನೈರ್ಮಲ್ಯ ತಾಂಡವವಾಡುತ್ತಿದೆ. ತನ್ನ ಸಮಸ್ಯೆಗಳನ್ನು ಬಗೆಹರಿಸದ ಗ್ರಾಪಂ ಆಡಳಿತ ವರ್ಗ ತನ್ನ ವ್ಯಾಪ್ತಿಯ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಿದೆ.”
– ಮಹದೇವಸ್ವಾಮಿ, ಹೊಂಗನೂರು
” ಕೆಂಪನಪುರ ಗ್ರಾಮ ಪಂಚಾಯಿತಿ ಪಿಡಿಒ ರಾಮೇಗೌಡ ಇಲ್ಲಿಗೆ ಪ್ರಭಾರ ಪಿಡಿಒ ಆಗಿದ್ದಾರೆ. ಇಲ್ಲಿಗೆ ಅಪರೂಪಕ್ಕೆ ಬರುತ್ತಾರೆ.ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದರೂ ಇದನ್ನು ಬಗೆಹರಿಸಿಕೊಳ್ಳಲು ನಮಗೆ ಪಿಡಿಒ ಸಿಗುವುದೇ ಇಲ್ಲ. ಅಲ್ಲದೇ ಇಲ್ಲಿ ಕಾರ್ಯದರ್ಶಿಯೂ ಇಲ್ಲ, ಬಿಲ್ ಕಲೆಕ್ಟರ್ ಕೂಡ ಇಲ್ಲ. ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ವಹಿಸಬೇಕು.”
– ಚಾಮದಾಸಯ್ಯ, ಹೊಂಗನೂರು ಗ್ರಾ.ಪಂ.ಸದಸ್ಯ
” ನಾನು ಇಲ್ಲಿಗೆ ಪ್ರಭಾರ ಪಿಡಿಒ ಆಗಿದ್ದೇನೆ. ಹಾಗಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲುಸಾಧ್ಯವಾಗುತ್ತಿಲ್ಲ. ನಮ್ಮ ಪಂಚಾಯಿತಿ ವತಿಯಿಂದ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು.”
– ರಾಮೇಗೌಡ, ಪಿಡಿಒ ಹೊಂಗನೂರು ಗ್ರಾಪಂ





