ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದಿದೆ. ಈ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹಳೇ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ.
ಕನ್ನಡ ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡುವ ಬಗ್ಗೆ ಡಿಕೆ ಶಿವಕುಮಾರ್ ಅವರು ಈ ಮೊದಲು ನೀಡಿದ್ದ ಹೇಳಿಕೆಯನ್ನು ಈಗ ಕೆಲವರು ನೆನಪಿಸಿಕೊಂಡಿದ್ದಾರೆ. ಜೆಡಿಎಸ್ ಕೂಡ ಇದೇ ಆರೋಪ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಮಹಾಪಂಚ್ ಕಾರ್ಟೂನ್
ಕುಮಾರಸ್ವಾಮಿ ಮತ್ತು ಜೆಡಿಎಸ್ನವರು ಬರೀ ರಾಜಕೀಯ ಮಾಡುತ್ತಿದ್ದಾರೆ. ಕುಮಾರಸ್ವಾಮಿಯಾದರೂ ಟ್ವೀಟ್ ಮಾಡಲಿ, ಮೇಲಿನವರಾದರೂ ಟ್ವೀಟ್ ಮಾಡಲಿ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ವಿಚಾರಿಸಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಇದನ್ನು ಮಾಡಿದ್ದಾರೆ. ಆದರೂ ಕೂಡ ನಾನು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉದ್ಯೋಗಾವಕಾಶ ತುಂಬ ಮುಖ್ಯ. ಸಮಸ್ಯೆ ನಿವಾರಣೆಗೆ ಒಂದು ಅವಕಾಶ ನೀಡಲು ಸೂಚಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
‘ನಮ್ಮಲ್ಲಿ ಮನರಂಜನೆ ಆಗಬೇಕು. ನಾನೇ ಅದನ್ನು ಉದ್ಘಾಟನೆ ಮಾಡಿದ್ದು. ನನ್ನ ಬಗ್ಗೆ ಮಾತನಾಡಲಿಲ್ಲ ಎಂದರೆ ಜೆಡಿಎಸ್ ಪಕ್ಷದವರಿಗೆ ನೆಮ್ಮದಿಯೇ ಇಲ್ಲ, ನಿದ್ರೆ ಬರಲ್ಲ. ಅವರಿಗೆ ಯಾವುದಕ್ಕೂ ಶಕ್ತಿ ಬರಲ್ಲ. ನಮ್ಮ ಸರ್ಕಾರದವರು ತಮ್ಮ ಕರ್ತವ್ಯ ಮಾಡಿರುವುದು ನನಗೆ ಗೊತ್ತಿರಲಿಲ್ಲ. ಫೋನ್ ಮಾಡಿ ಡಿಸಿ ಮತ್ತು ಎಸ್ಪಿ ಅವರಿಗೆ ಹೇಳಿದ್ದೇನೆ. ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು ಅಂತ ಹೇಳಿದ್ದೇನೆ’ ಎಂದಿದ್ದಾರೆ ಡಿಕೆ ಶಿವಕುಮಾರ್.
ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋದವರು ಡಿಸಿ ಬಳಿ ಸಮಯಾವಕಾಶ ಕೋರಿದ್ದಾರೆ. ಆ ಮನವಿಯನ್ನು ಜಿಲ್ಲಾಡಳಿತವು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳಿಸಿದೆ. ಒಂದು ವೇಳೆ ಅನುಮತಿ ಸಿಕ್ಕರೆ ಕೂಡಲೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಆರಂಭ ಆಗಲಿದೆ. ಅನುಮತಿ ಸಿಗುವುದು ತಡವಾದರೆ ಇನ್ನಷ್ಟು ದಿನಗಳ ಕಾಲ ಕಾಯುವುದು ಅನಿವಾರ್ಯ ಆಗುತ್ತದೆ. ಸದ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಗಳನ್ನು ರೆಸಾರ್ಟ್ನಲ್ಲಿ ಇರಿಸಲಾಗಿದೆ.





