ಶಿವಪ್ರಸಾದ್ ಮುಳ್ಳೂರು
ದಸರಾ ವಸ್ತುಪ್ರದರ್ಶನದಲ್ಲಿ ಕಣ್ಮನ ಸೂರೆ ಮಾಡುವ ಗ್ರಾಮೀಣ ಸೊಬಗು
ಮಂಗಳೂರು ಕಲಾವಿದರ ಕೈಚಳಕದಲ್ಲಿ ಮೂಡಿರುವ ಕಲಾಕೃತಿ
ಮೈಸೂರು: ಅರಳಿದ ಸೂರ್ಯಕಾಂತಿ ಹೂಗಳ ಸ್ವಾಗತವನ್ನು ಸಂಭ್ರಮಿಸುತ್ತಾ ಆ ಮಳಿಗೆಯ ಒಳಹೊಕ್ಕರೆ, ಅಕ್ಷರಶಃ ನವ ಗ್ರಾಮವೊಂದಕ್ಕೆ ಪ್ರವೇಶ ಮಾಡಿದಂತೆ ಭಾಸವಾಗುತ್ತದೆ. ಜನವಸತಿ ಪ್ರದೇಶಕ್ಕೆ ಅಗತ್ಯವಾದ ಸರ್ವಸ್ವವೂ ಅಲ್ಲಿ ಕಾಣಸಿಗುತ್ತದೆ. ನೀರು, ಶಾಲೆ, ರಸ್ತೆ ಸೇರಿದಂತೆ ಸಕಲ ಮೂಲ ಸೌಕರ್ಯಗಳೂ ಇವೆ… ಇದು ನಗರದ ದೊಡ್ಡಕೆರೆ ಮೈದಾನದಲ್ಲಿರುವ ದಸರಾ ವಸ್ತುಪ್ರದರ್ಶನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಿರ್ಮಿಸಿರುವ ಮಳಿಗೆಯ ಚಿತ್ರಣ.
ಹಳ್ಳಿಗಳಿಂದ ಯುವಜನರ ವಲಸೆ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಸೌಕರ್ಯಗಳನ್ನೂ ಕಲ್ಪಿಸಲು ಯೋಜಿಸಿರುವ ಇಲಾಖೆಯ ಯೋಜನೆಗಳನ್ನು ಇಲ್ಲಿ ನೋಡುಗರ ಎದುರು ಸಾಕ್ಷಾತ್ಕರಿಸಲಾಗಿದೆ ಎನ್ನಬಹುದು. ಮಳಿಗೆಯ ಒಳಗಡೆಗೆ ಪ್ರವೇಶಿಸುತ್ತಿದ್ದಂತೆಯೇಎಡಭಾಗದಲ್ಲಿ ‘ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ- ನಮ್ಮೂರ’ ಎಂಬ ಫಲಕ ಕಣ್ಮನ ಅರಳಿಸುತ್ತದೆ. ಆ ಶಾಲೆಯು ಅತ್ಯಂತ ಸ್ವಚ್ಛತೆಯಿಂದ ಕಂಗೊಳಿಸುತ್ತಿದೆ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುತ್ತಿರುವ ದೃಶ್ಯವನ್ನು ಪಡಿ ಮೂಡಿಸಿರುವುದು ಹುಬ್ಬೇರುವಂತೆ ಮಾಡುತ್ತದೆ. ಶಾಲೆಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ಅದು. ತುಸು ಮುಂದೆ ಹೋದರೆ ‘ಕೂಸಿನ ಮನೆ’ ಎಂಬ ಫಲಕ ಅತ್ಯಾಕರ್ಷಕ ವಾಗಿದ್ದು, ಬಾಗಿಲ ಮೇಲೆ ಕನ್ನಡ ವರ್ಣಮಾಲೆಯ ನಾಲ್ಕಾರು ಅಕ್ಷರಗಳು ಸುಂದರವಾಗಿದ್ದು, ವೀಕ್ಷಕರನ್ನು ಮುದಗೊಳಿಸುತ್ತಿವೆ.
ಊರಿನಲ್ಲಿ ಕೆಲ ಮಕ್ಕಳು ಆಟವಾಡುತ್ತಿರುವುದು, ಮಿನಿ ಟ್ಯಾಂಕ್‌ನಲ್ಲಿ ನೀರು ಸದಾ ಸುರಿಯುತ್ತಿರುವುದು, ಕಿರಾಣಿ ಅಂಗಡಿ, ಸುರಸುಂದರ ವೆನಿಸುವ ರಸ್ತೆಗಳು, ಅರಳಿಕಟ್ಟೆ ಮೇಲೆ ಹಿರಿಯರು ಪತ್ರಿಕೆ ಓದುತ್ತಿರುವುದು, ಹೊಲಿಗೆ ಕೇಂದ್ರ, ಮಹಿಳಾ ಸಂಘದಲ್ಲಿ ಸದಸ್ಯರ ಚರ್ಚೆ, ಬಯಲು ರಂಗಮಂದಿರ, ಹೂವಾಡಿಗಿತ್ತಿ, ಶೌಚಾಲಯ… ಹೀಗೆ ಇಡೀ ಹಳ್ಳಿ ಮತ್ತು ಅಲ್ಲಿನ ಜನರಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಸ್ಮರಣೀಯಗೊಳಿಸುವಂತೆ ಮಳಿಗೆಯನ್ನು ನಿರ್ಮಿಸಲಾಗಿದೆ. ಕಲಾವಿದ ದೇವಿಪ್ರಸಾದ್ ನೇತೃತ್ವದ ತಂಡ ಈ ಮಳಿಗೆಯನ್ನು ಕಲಾಕೃತಿ ಎಂಬಂತೆ ಸಿದ್ಧಪಡಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಗಾಂಽಜಿ ಅವರ ಗ್ರಾಮ ಸ್ವರಾಜ್ ಕನಸನ್ನು ಎತ್ತಿಹಿಡಿದಿದೆ.
ಈ ಮಳಿಗೆ ಪ್ರವೇಶಕ್ಕೆ ಮುನ್ನ ಕೂಡ ಅಗಲವಾದ ಸೂರ್ಯಕಾಂತಿ ಹೂಗಳ ಮಾದರಿಗಳು ಆಕರ್ಷಕವಾಗಿವೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಟೌಟ್ ಮಾದರಿಗಳು ಅವುಗಳ ಮೇಲೆ ಕರ್ನಾಟಕ ನಕ್ಷೆ ಮತ್ತು ಅದರೊಳಗೆ ಮಹಾತ್ಮ ಗಾಂಧಿ ಕಲಾಕೃತಿಗಳು ಮಳಿಗೆಯೊಳಗೆ ಹೊಕ್ಕಿ ನೋಡುವ ಆಸೆಯನ್ನು ಸ್ಛುರಿಸುತ್ತವೆ.
೧೯ ದಿನಗಳಲ್ಲಿ ಮಳಿಗೆ ನಿರ್ಮಾಣ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮಳಿಗೆಯು ಮಂಗಳೂರು ಕಲಾವಿದರ ಕರಕೌಶಲದಲ್ಲಿ ಅರಳಿದೆ. ಹಿರಿಯ ಕಲಾವಿದ ದೇವಿಪ್ರಸಾದ್ ಶೆಟ್ಟಿ ಅವರ ತಂಡದವರ ಶ್ರಮದಿಂದ ಮಳಿಗೆಯು ಬಹಳ ಅಚ್ಚುಕಟ್ಟಾಗಿ ಮೈದಾಳಿದೆ. ದಸರಾ ವಸ್ತುಪ್ರದರ್ಶನದಲ್ಲಿ ಈ ತಂಡ ಸತತ ೬ನೇ ಬಾರಿ ಗ್ರಾಮೀಣಾಭಿವೃದ್ಧಿ ಇಲಾಖೆ ಮಳಿಗೆಯನ್ನು ನಿರ್ಮಿಸಿದೆ. ಸುಮಾರು ೨೦ ವರ್ಷಗಳಿಂದ ದಸರಾ ವಸ್ತು ಪ್ರದರ್ಶನದಲ್ಲಿ ಮಳಿಗೆಗಳನ್ನು ನಿರ್ಮಿಸುತ್ತಿದ್ದಾರೆ. ಪ್ರಸ್ತುತ ಈ ಬಾರಿ ತಂಡದಲ್ಲಿ ೧೩೦ ಮಂದಿ ಇದ್ದಾರೆ. ಅದರಲ್ಲಿ ಸಹಾಯಕರು, ಬಡಗಿಗಳು, ವೆಲ್ಡಿಂಗ್ ಕಾರ್ಮಿಕರು, ಕಲಾವಿದರು, ಬಣ್ಣಬಳಿಯುವವರು ಇದ್ದಾರೆ. ಈ ಮಳಿಗೆಯನ್ನು ೧೯ ದಿನಗಳಲ್ಲಿ ನಿರ್ಮಿಸಲಾಗಿದೆ.
” ದಸರಾ ವಸ್ತುಪ್ರದರ್ಶನದಲ್ಲಿ ಹಿಂದಿನಿಂದಲೂ ಮೊದಲ ದಿನದಿಂದಲೇ ಮಳಿಗೆಯನ್ನು ಆರಂಭಿಸುವುದು ನಮ್ಮ ಬದ್ಧತೆಯಾಗಿದೆ. ಅದಕ್ಕೆ ಭಂಗ ಉಂಟಾಗದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ನಾವೆಲ್ಲ ಹಿರಿಯ ಕಲಾವಿದ ಶಶಿಧರ ಅಡಪ ಅವರ ಶಿಷ್ಯಂದಿರು. ಹಿಂದೆ ಪ್ರಾಸೋದ್ಯಮ ಇಲಾಖೆ ಮಳಿಗೆಗಾಗಿ ಕೆಲಸ ಮಾಡುತ್ತಿದ್ದೆವು. ೬ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಮಳಿಗೆ ನಿರ್ಮಾಣ ಮಾಡುತ್ತಿದ್ದೇವೆ. ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಳಿಗೆಗಳನ್ನು ನಾವು ನಿರ್ಮಿಸಿದ್ದೇವೆ.”
-ದೇವಿಪ್ರಸಾದ್ ಶೆಟ್ಟಿ, ಹಿರಿಯ ಕಲಾವಿದ





