ರಾತ್ರಿ ೧೨ ಗಂಟೆಯಾದರೂ ನಿಲ್ದಾಣದಲ್ಲೇ ಕಾದಿದ್ದ ಜನರು
ಮೈಸೂರು: ಮಧ್ಯರಾತ್ರಿಯಾದರೂ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಸ್‌ಗಳು ಬರದೆ ನಂಜನಗೂಡು, ಚಾಮರಾಜನಗರ, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ, ಗೋಣಿಕೊಪ್ಪ, ಕೇರಳ, ತಮಿಳುನಾಡು ಕಡೆಗೆ ತೆರಳುವ ಜನರು ಬಸ್ ನಿಲ್ದಾಣದಲ್ಲೇ ಪರದಾಡಿದರು.
ದಸರಾ ಮಹೋತ್ಸವದ ಅಂಗವಾಗಿ ನಗರಕ್ಕೆ ಹೆಚ್ಚು ಜನರು ಬರುತ್ತಿದ್ದಾರೆ. ಆದರೆ ಮತ್ತೆ ಅವರ ಸ್ಥಳಗಳಿಗೆ ತೆರಳಲು ಸೂಕ್ತ ಬಸ್‌ಗಳ ವ್ಯವಸ್ಥೆ ಇಲ್ಲದ ಕಾರಣ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು. ರಾತ್ರಿ ೧೦ ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದಿದ್ದೇವೆ. ೧೨ ಗಂಟೆಯಾದರೂ ನಮ್ಮ ಊರುಗಳಿಗೆ ತೆರಳಲು ಬಸ್ಸಿಲ್ಲ. ಈ ಸಂಬಂಧ ಅಧಿಕಾರಿಗಳನ್ನು ವಿಚಾರಿಸಿದರೆ ಬಸ್ ಬರುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಬಸ್ಸುಗಳು ನಿಲ್ದಾಣಕ್ಕೆ ಬಂದೇ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು
” ಟ್ರಾಫಿಕ್ ಸಮಸ್ಯೆಯಿಂದ ಬಸ್ಗಳು ನಿಗದಿತ ಸಮಯಕ್ಕೆ ನಿಲ್ದಾಣಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಜನದಟ್ಟಣೆ ಹೆಚ್ಚಿರುವುದರಿಂದ ದಸರಾ ವಿಶೇಷ ವಾಹನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.”
-ಶಿವಣ್ಣ, ಸಂಚಾರ ನಿಯಂತ್ರಕ,
” ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ಬಸ್ ನಿಲ್ದಾಣಕ್ಕೆ ರಾತ್ರಿ ೧೧ ಗಂಟೆಗೇ ಬಂದಿದ್ದೇನೆ. ಸುಮಾರು ಒಂದು ಗಂಟೆಯಾದರೂ ಹುಣಸೂರಿಗೆ ಹೋಗಲು ಯಾವುದೇ ಬಸ್ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಬಸ್ ಬರುತ್ತದೆ ಎಂದು ಹೇಳುತ್ತಾರೆ. ಆದರೆ ರಾತ್ರಿ ೧೨ ಗಂಟೆಯಾದರೂ ಬಸ್ ಬಂದಿಲ್ಲ. ಊರಿಗೆ ಹೋಗಲು ತೊಂದರೆಯಾಗುತ್ತಿದೆ.”
-ಶಂಕರ್, ಹುಣಸೂರು





