ಒಂದು ಕಾಲದಲ್ಲಿ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ ಹರಿಕಥಾ ಕಾಲಕ್ಷೇಪಗಳು ಇತ್ತೀಚಿನ ದಶಕಗಳಲ್ಲಿ ಜನಮಾನಸದಿಂದ ಮಾಸಿಹೋಗುತ್ತಿರುವುದು ಬೇಸರದ ಸಂಗತಿಯಾಗಿದೆ. ರಾಜ್ಯಾದ್ಯಂತ ಹೆಸರು ಗಳಿಸಿದ್ದ ಸುಪ್ರಸಿದ್ಧ ಹರಿಕಥಾ ವಿದ್ವಾನ್ ಕೀರ್ತಿ ಶೇಷ ಗುರುರಾಜುಲು ನಾಯ್ಡು, ಸಂತ ಭದ್ರಗಿರಿ ಅಚ್ಯುತದಾಸರು, ಭದ್ರಗಿರಿ ಕೇಶವದಾಸ್ ಮುಂತಾದ ಹರಿಕಥಾ ವಿದ್ವಾಂಸರ ಕಥಾಕಾಲಕ್ಷೇಪಗಳಿಲ್ಲದೆ ಯಾವ ಧಾರ್ಮಿಕ ಕಾರ್ಯಕ್ರಮಗಳೂ ಸಂಪನ್ನಗೊಳ್ಳುತ್ತಿರಲಿಲ್ಲ.
ಜನರೂ ಅಷ್ಟೇ, ಹರಿಕಥೆಗಳಿಲ್ಲದ ಕಾರ್ಯಕ್ರಮಗಳು ವ್ಯರ್ಥ ಎಂದೇ ಭಾವಿಸಿದ್ದರು. ಆದರೆ ಕಾಲಕ್ರಮೇಣ ಹರಿಕಥೆಗಳನ್ನು ಕೇಳುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದ ಹಾಗೆ, ಹರಿಕಥೆಗಳು ಜನರ ಸ್ಮೃತಿ ಪಟಲದಿಂದಲೇ ಮರೆಯಾಗಿರುವುದು ವಿಷಾದಕರ ಸಂಗತಿ. ದಿವಂಗತ ಗುರುರಾಜುಲು ನಾಯ್ಡು ಅವರ ಮಗಳು ಈಗಲೂ ಹರಿಕಥೆಗಳನ್ನು ನಡೆಸಿಕೊಡುತ್ತಾರೆ.
ಅದೇ ರೀತಿ ಎಲೆ ಮರೆ ಕಾಯಿಗಳಂತಿರುವ ಅನೇಕ ಹರಿಕಥಾ ವಿದ್ವಾಂಸರು ಅಲ್ಲಲ್ಲಿ ಕಾಣ ಸಿಗಬಹುದು. ಇಂದಿನ ಡಿಜಿಟಲ್ ಯುಗದಲ್ಲಿ ಹರಿಕಥೆಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ. ಬಹಳ ವರ್ಷಗಳ ಹಿಂದೆ ರಾಮೋತ್ಸವ, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಹರಿಕಥೆಗಳನ್ನು ಏರ್ಪಡಿಸಲಾಗುತ್ತಿತ್ತು. ಈಗ ಹರಿಕಥೆಯೆಂಬ ವಿಶಿಷ್ಟ ಕಲೆಯು ನಶಿಸಿಹೋಗದಂತೆ ಸರ್ಕಾರ ರಕ್ಷಣಾ ಕ್ರಮಗಳನ್ನು ತೆಗೆದುಕೊಂಡು ಪ್ರೋತ್ಸಾಹ ನೀಡಬೇಕಾಗಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





