ಕೆ.ಬಿ.ರಮೇಶ್ ನಾಯಕ
ಮೈಸೂರು, ಚಾಮರಾಜನಗರ, ಬೆಂಗಳೂರು, ಚನ್ನಪಟ್ಟಣದ ಉಸ್ತಾದ್‌ಗಳಿಂದ ತಯಾರಿ; ಜಟ್ಟಿಗಳ ಅಭ್ಯಾಸ ಜೋರು
ಮೈಸೂರು: ನವರಾತ್ರಿ ಉತ್ಸವದ ಮತ್ತೊಂದು ಆಕರ್ಷಣೆಯಾದ ‘ವಜ್ರಮುಷ್ಟಿ ಕಾಳಗ’ ಅ.೨ರಂದು ನಡೆಯಲಿದ್ದು, ಮೈಸೂರು, ಚಾಮರಾಜನಗರ, ಬೆಂಗಳೂರು, ಚನ್ನಪಟ್ಟಣದ ಉಸ್ತಾದ್‌ಗಳು ವಜ್ರಮುಷ್ಟಿ ಕಾಳಗಕ್ಕೆ ಸಿದ್ಧತೆ ನಡೆಸಿದ್ದಾರೆ.
ಸಂಪ್ರದಾಯದಂತೆ ಅಂಬಾವಿಲಾಸ ಅರಮನೆ ಅಂಗಳದಲ್ಲಿ ಪ್ರತಿವರ್ಷ ವಿಜಯ ದಶಮಿಯಂದು ಯದುವಂಶದ ಅರಸರು ಶಮಿ ಪೂಜೆ ಸಲ್ಲಿಸುವ ಮೊದಲು ವಜ್ರಮುಷ್ಟಿ ಕಾಳಗ ನಡೆಯುತ್ತದೆ. ಅರಮನೆಯ ಕರಿಕಲ್ಲು ತೊಟ್ಟಿ ಅಂಗಳದಲ್ಲಿ ನಡೆಯುವ ಕಾಳಗದಲ್ಲಿ ನಾಲ್ವರು ಜಟ್ಟಿಗಳು ‘ವಜ್ರನಖ’ ಎಂಬ ಹರಿತ ವಾದ ಆಯುಧದೊಂದಿಗೆ ಕಾದಾಡುತ್ತಾರೆ.
ಕಾಳಗಕ್ಕೆ ನಿಗದಿ ಮಾಡಲಾಗಿರುವ ಸಮಯ ದಲ್ಲಿ ಜಟ್ಟಿಗಳ ಕುಲದೇವತೆ ನಿಂಬುಜಾಂಬೆಗೆ ಪೂಜೆ ಸಲ್ಲಿಸಿ, ಕೇಶಮುಂಡನ ಮಾಡಿಸಿಕೊಳ್ಳುವ ಜಟ್ಟಿಗಳು, ಮೈತುಂಬ ಕೆಮ್ಮಣ್ಣು ಬಳಿದುಕೊಂಡು ಅಖಾಡದಲ್ಲಿ ರಕ್ತ ಚಿಮ್ಮಿಸಲಿದ್ದಾರೆ. ಬಳಿಕ ರಾಜವಂಶಸ್ಥರು ಸಂಪ್ರದಾಯದಂತೆ ಶಮಿಪೂಜೆಗೆ ತೆರಳಲಿದ್ದಾರೆ.
‘ವಜ್ರಮುಷ್ಟಿ ಕಾಳಗ’ ಆಯೋಜನೆಗೆ ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಜಟ್ಟಿ, ಉಸ್ತಾದ್ ಬಾಲಾಜಿ ಜಟ್ಟಿ, ಉಸ್ತಾದ್ ಮಾಧು ಜಟ್ಟಿ, ಉಸ್ತಾದ್ ನಾಗರಾಜ ಜಟ್ಟಿ, ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ, ಚಾಮರಾಜ ನಗರದ ಉಸ್ತಾದ್ ಬಂಗಾರ ಜಟ್ಟಿ, ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ ಜಟ್ಟಿ ಹಾಗೂ ಅರಮನೆಯ ವಜ್ರಮುಷ್ಟಿ ಕಾಳಗದ ಇತರ ಉಸ್ತಾದ್‌ಗಳು ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ.
ಜಟ್ಟಿಗಳ ಜೋಡಿ ಆಯ್ಕೆ ಹೀಗಿದೆ: ಪ್ರತಿವರ್ಷ ವಜ್ರಮುಷ್ಟಿ ಕಾಳಗದಲ್ಲಿ ಎರಡು ಜೋಡಿಗಳು ಮಾತ್ರ ಕಾಳಗ ನಡೆಸುವ ಕಾರಣ ನಾಲ್ಕು ಜನರಿಗೆ ಅವಕಾಶ ದೊರೆಯಲಿದೆ. ಕಾಳಗದಲ್ಲಿ ಭಾಗಿಯಾಗುವ ದೃಷ್ಟಿಯಿಂದ ಜಟ್ಟಿ ಗಳು ಅರಮನೆಯ ವಜ್ರಮುಷ್ಟಿ ಕಾಳಗದ ಉಸ್ತಾದ್‌ಗಳ ಬಳಿ ಈಗಾಗಲೇ ಅಭ್ಯಾಸ ನಡೆಸುತ್ತಿದ್ದಾರೆ. ಕಾಳಗದಲ್ಲಿ ಸೆಣಸಲಿರುವ ಜಟ್ಟಿಗಳ ಜತೆ ಅರಮನೆ ಆವರಣದಲ್ಲಿ ಸೆ.೨೨ರ ನಂತರ ಒಂದು ದಿನ ಜೋಡಿ ಕಟ್ಟಲಾಗುತ್ತದೆ. ಸೆಣಸಾಟಕ್ಕೆಂದೇ ಅಭ್ಯಾಸದಲ್ಲಿ ತೊಡಗಿರುವವರ ಪೈಕಿ ನಾಲ್ಕು ಜಟ್ಟಿಗಳನ್ನು ಎತ್ತರ ಮತ್ತು ತೂಕದ ಆಧಾರದ ಮೇಲೆ ದೈಹಿಕವಾಗಿ ಸರಿ ಹೊಂದುವ ಎರಡು ಜೋಡಿಯನ್ನು ಜತೆ ಮಾಡಲಾಗುತ್ತದೆ. ಜೋಡಿ ಕಟ್ಟಿದ ಬಳಿಕ ಕಾಳಗದಲ್ಲಿ ಸೆಣಸಾಡುವ ಜೋಡಿಗಳನ್ನು ಅಂದೇ ರಾಜವಂಶಸ್ಥರಿಗೆ ಪರಿಚಯ ಮಾಡಿಸಲಾಗುತ್ತದೆ. ಬೆಂಗಳೂರು, ಮೈಸೂರು, ಚನ್ನಪಟ್ಟಣ ಹಾಗೂ ಚಾಮರಾಜನಗರದ ಒಬ್ಬೊಬ್ಬ ಜಟ್ಟಿಗೆ ಅವಕಾಶ ನೀಡಲಾಗುತ್ತದೆ. ಈ ಪೈಕಿ ಯಾವ ಊರಿನಿಂದ ಯಾರು ಕಾಳಗ ನಡೆಸಲಿದ್ದಾರೆ ಎಂಬುದು ಅಂತಿಮವಾಗಬೇಕಿದೆ ಎಂದು ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ ತಿಳಿಸಿದ್ದಾರೆ.
ಕಳೆದ ವರ್ಷದ ರೋಚಕತೆ ಹೀಗಿತ್ತು…: ೨೦೨೪ರ ದಸರಾದಲ್ಲಿ ನಡೆದ ವಜ್ರಮುಷ್ಟಿ ಕಾಳಗ ರೋಚಕವಾಗಿತ್ತು. ಅಲ್ಲಿ ನೆರೆದಿದ್ದವರ ಎದೆ ಝಲ್ ಎನ್ನುವಂತೆ ಮಾಡಿತ್ತು. ಮೊದಲ ಜೋಡಿ ಬೆಂಗಳೂರಿನ ಉಸ್ತಾದ್ ಕೃಷ್ಟ ಜಟ್ಟಿ ಶಿಷ್ಯ ನಾರಾಯಣಸ್ವಾಮಿ ಜೆಟ್ಟಿ ಮತ್ತು ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಅವರ ಮಗ ಬಲರಾಮ ಜಟ್ಟಿ ನಡುವೆ ಕಾಳಗ ನಡೆದಿತ್ತು. ಎರಡನೇ ಜೋಡಿಯಾಗಿ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಅವರ ಶಿಷ್ಯ ಶ್ರೀನಿವಾಸ ಜಟ್ಟಿ ಮತ್ತು ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ರಾಘವೇಂದ್ರ ಜಟ್ಟಿ ನಡುವೆ ಕಾಳಗ ಏರ್ಪಟ್ಟಿತ್ತು. ಈ ಪೈಕಿ ನಾರಾಯಣಸ್ವಾಮಿ ಜೆಟ್ಟಿ ಮತ್ತು ಬಲರಾಮ ಜಟ್ಟಿ ನಡುವೆ ನಡೆದ ಕಾಳಗ ರೋಚಕವಾಗಿತ್ತು.
” ದಸರಾ ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ ಅಂಬಾವಿಲಾಸ ಅರಮನೆ ಅಂಗಳದಲ್ಲಿ ವಿಜಯದಶಮಿ ದಿನದಂದು ‘ವಜ್ರಮುಷ್ಟಿ ಕಾಳಗ’ ಆಯೋಜಿಸಲಾಗುತ್ತದೆ. ಸೆ.೨೨ರ ನಂತರ ಅರಮನೆ ಆವರಣದಲ್ಲಿ ಒಂದು ದಿನ ಜೋಡಿ ಕಟ್ಟಲಾಗುತ್ತದೆ. ಬೆಂಗಳೂರು, ಚನ್ನಪಟ್ಟಣ, ಮೈಸೂರು, ಚಾಮರಾಜನಗರದಿಂದ ತಲಾ ಒಬ್ಬರು ಜಟ್ಟಿಗಳು ಕಾಳಗ ನಡೆಸಲಿದ್ದಾರೆ.”
ಉಸ್ತಾದ್ ಕೃಷ್ಣ ಜಟ್ಟಿ, ಬೆಂಗಳೂರು





