Mysore
24
broken clouds

Social Media

ಬುಧವಾರ, 14 ಜನವರಿ 2026
Light
Dark

ಸತತ ಮಳೆ, ತೇವಾಂಶದಿಂದ ಬೆಳೆಗಳಿಗೆ ಹಾನಿ; ರೈತರಿಗೆ ಸಂಕಷ್ಟ

ಮಂಜು ಕೋಟೆ

ಕೋಟೆ: ೩ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ರೈತರಿಗೆ ನಷ್ಟ ಭರಿಸಿಕೊಡಬೇಕೆಂಬ ಆಗ್ರಹ 

ಎಚ್.ಡಿ.ಕೋಟೆ: ಕೋಟೆ ಕ್ಷೇತ್ರದಲ್ಲಿ ಮೂರು ತಿಂಗಳುಗಳಿಂದ ವಿಪರೀತವಾದ ಮಳೆ ಮತ್ತು ವಾತಾವರಣದ ಏರುಪೇರಿನಿಂದಾಗಿ ರೈತರು ಬೆಳೆದ ಹತ್ತಿ, ಮುಸುಕಿನ ಜೋಳ, ಶುಂಠಿ, ಹೊಗೆ ಸೊಪ್ಪು ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿದ್ದು, ಬಹಳಷ್ಟು ನಷ್ಟ ಉಂಟಾಗಿ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ನಾಲ್ಕು ಜಲಾಶಯಗಳು ಇದ್ದರೂ ಜನಸಾಮಾನ್ಯರಿಗೆ ಮತ್ತು ರೈತರಿಗೆ ಅನುಕೂಲವಿಲ್ಲದಿರುವುದರಿಂದ ಮಳೆ ಆಧಾರಿತ ಆರ್ಥಿಕ ಬೆಳೆಗಳನ್ನೇ ರೈತರು ಅವಲಂಬಿಸಿದ್ದಾರೆ. ಆದರೆ ಈ ಸಾಲಿನಲ್ಲಿ ಕಳೆದ ೩ ತಿಂಗಳುಗಳಿಂದ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿದಿರುವುದರಿಂದ ರೈತರ ಬದುಕು ಸಂಕಷ್ಟಕ್ಕೀಡಾಗಿದೆ. ಆರ್ಥಿಕ ಬೆಳೆಗಳಾದ ಹತ್ತಿ, ಹೊಗೆಸೊಪ್ಪು, ಶುಂಠಿ, ಮುಸುಕಿನ ಜೋಳದ ಬೆಳೆಗಳು ಸತತ ಮಳೆಯಿಂದ ಹಾನಿಗೀಡಾಗಿವೆ. ಇದರಿಂದ ಹತ್ತಿ ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕೆಂಬ ರೈತರ ಆಸೆ ಈಡೇರದಂತಾಗಿದೆ.

ಈ ಬಾರಿ ಕೃಷಿ ಕಾರ್ಮಿಕರು, ಅಗತ್ಯ ಔಷಧಿ,  ಸೂಕ್ತವಾದ ಮಾರುಕಟ್ಟೆ ಬೆಲೆ ಇಲ್ಲದ ಕಾರಣ ೪೦,೦೦೦ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿದ್ದ ಹತ್ತಿ ಬೆಳೆಯನ್ನು ಈ ಬಾರಿ ಕೇವಲ ೧೦ ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆದಿದ್ದು, ಅದೂ ಕೂಡ ಉತ್ತಮ ಇಳುವರಿ ಇಲ್ಲದಂತಾಗಿದೆ. ೧೫ ಸಾವಿರ ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುತ್ತಿದ್ದ ರೈತರು, ಖರ್ಚು ಕಡಿಮೆ ಎಂಬ ಉದ್ದೇಶದಿಂದ ೫೦ ಸಾವಿರ ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದಾರೆ.

ಆದರೆ ಹಂಪಾಪುರ, ಕಸಬಾ, ಇನ್ನಿತರ ಹೋಬಳಿ ಪ್ರದೇಶಗಳ ವ್ಯಾಪ್ತಿಯಲ್ಲಿ ಬಹುತೇಕ ರೈತರು ಬೆಳೆದಿರುವ ಮುಸುಕಿನ ಜೋಳಕ್ಕೆ ಬಿಳಿ ಸುಳಿ ರೋಗ ಕಾಣಿಸಿಕೊಂಡು ಬೆಳೆ ಕೈಸೇರದಂತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಲಾಭ ಕಾಣಬಹುದು ಎಂಬ ಆಸೆಯಿಂದ ಲಕ್ಷಾಂತರ ರೂ. ಖರ್ಚು ಮಾಡಿ ೧೦,೦೦೦ ಎಕರೆ ಪ್ರದೇಶದಲ್ಲಿ ರೈತರು ಶುಂಠಿ ಬೆಳೆಯನ್ನು ಬೆಳೆದಿದ್ದರು. ಆದರೆ, ರೋಗ ಬಾಧೆ ಮತ್ತು ಅತಿ ಹೆಚ್ಚು ಮಳೆಯಿಂದಾಗಿ ಶುಂಠಿ ಬೆಳೆ ಸಂಪೂರ್ಣ ನೆಲಕಚ್ಚಿದೆ.

ತಾಲ್ಲೂಕಿನಲ್ಲಿ ಮುಂಗಾರು ಪ್ರಾರಂಭದಿಂದ ಇಲ್ಲಿವರೆಗೂ ೬೩೦ ಮಿ.ಮೀ. ವಾಡಿಕೆ ಆಗಬೇಕಾಗಿದ್ದ ಮಳೆ ಪ್ರಮಾಣ ೮೦೦ ಮಿ.ಮೀ. ಆಗಿದೆ. ಅಂದರೆ ಸುಮಾರು ೧೭೦ ಮಿ.ಮೀ. ಹೆಚ್ಚು ಮಳೆಯಾಗಿದೆ. ಜತೆಗೆ ವಾತಾವರಣ ಅತಿಯಾದ ತೇವಾಂಶದಿಂದ ಕೂಡಿದ್ದರಿಂದ ಆರ್ಥಿಕ ಬೆಳೆಗಳಾದ ಹೊಗೆಸೊಪ್ಪು, ಹತ್ತಿ, ಮುಸುಕಿನ ಜೋಳ, ಶುಂಠಿ, ಇನ್ನಿತರ ಬೆಳೆಗಳಿಗೆ ರೋಗಗಳು ಬಾಧಿಸಿ, ಹೂವು ಮತ್ತು ಕಾಯಿ ಕಚ್ಚದೆ ಇಳುವರಿ ಕಾಣದೆ ಬೆಳೆಗಳು ನಾಶವಾಗಿವೆ. ಇದರಿಂದ ರೈತರು ಆರ್ಥಿಕವಾಗಿ ನಷ್ಟಕ್ಕೀಡಾಗಿ ಕಂಗಾಲಾಗಿದ್ದಾರೆ.

ಇಲ್ಲಿನ ರೈತರಿಗೆ ಬೆಳೆಗಳಿಗೆ ಪರಿಹಾರವನ್ನು ಸರ್ಕಾರದ ಮೂಲಕ ಕೊಡಿಸುವಲ್ಲಿ ಶಾಸಕರು, ಸಂಸದರು, ಸಚಿವರು, ರೈತ ಸಂಘದವರು, ಮುಖಂಡರು, ಅಧಿಕಾರಿ ವರ್ಗದವರು ಮುಂದಾದಾಗ ಮಾತ್ರ ರೈತರು ಸುಧಾರಣೆ ಕಾಣಲು ಸಾಧ್ಯವಾಗುತ್ತದೆ.

” ಈ ಬಾರಿ ಸುರಿದ ಹೆಚ್ಚು ಮಳೆ ಮತ್ತು ತೇವಾಂಶ ವಾತಾವರಣದಿಂದಾಗಿ ರೈತರ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಮುಖ್ಯಮಂತ್ರಿಗಳು ರೈತರ ಪರವಾಗಿದ್ದರೆ ಅಲ್ಪಸ್ವಲ್ಪ ಪರಿಹಾರ ನೀಡದೆ, ನಷ್ಟವನ್ನು ಭರಿಸಬೇಕು. ಆ ಮೂಲಕ ಮುಂದಿನ ದಿನಗಳಲ್ಲೂ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.”

-ಬೀರಂಬಳ್ಳಿ ಪ್ರಭಾಕರ್, ರೈತ ಮುಖಂಡ

” ತಾಲ್ಲೂಕಿನಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ.ಇದರಿಂದಾಗಿ ಅನೇಕ ಬೆಳೆಗಳ ಮೇಲೆ ಬಹಳಷ್ಟು ಪರಿಣಾಮ ಉಂಟಾಗಿದೆ. ಹಾನಿಗೀಡಾದ ಬೆಳೆಗಳ ವಿವರಗಳನ್ನು ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗಿದೆ. ಅನೇಕರಿಂದ ಬರುತ್ತಿರುವ ಮನವಿಗಳನ್ನು ಕೂಡ ಸರ್ಕಾರಕ್ಕೆ ಕಳುಹಿಸಲಾಗಿದೆ.”

-ಪ್ರಸಾದ್ ವೈ.ಅರಸು, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು

Tags:
error: Content is protected !!