Mysore
29
light rain

Social Media

ಬುಧವಾರ, 14 ಜನವರಿ 2026
Light
Dark

ಜಿಲ್ಲಾ ಕ್ರೀಡಾಂಗಣ, ಬಸ್ ನಿಲ್ದಾಣಕ್ಕೆ ‘ಕತ್ತಲ ಗ್ರಹಣ’!

ಕೆಟ್ಟು ಹಲವಾರು ದಿನಗಳಾದರೂ ದುರಸ್ತಿ ಆಗದ ಹೈಮಾಸ್ ದೀಪಗಳು..

ಚಾಮರಾಜನಗರ: ನಗರದ ಹೊಸ ಖಾಸಗಿ ಬಸ್ ನಿಲ್ದಾಣ ಮತ್ತು ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣ ಮುಖ್ಯರಸ್ತೆಯ ಎಡ-ಬಲ ಬದಿಯಲ್ಲಿ ಇದ್ದು, ಇವೆರಡೂ ಕಡೆ ಇರುವ ಹೈಮಾಸ್ಟ್ ವಿದ್ಯುತ್ ದೀಪಗಳು ಹಲವು ದಿನಗಳಿಂದಲೂ ಬೆಳಗುತ್ತಿಲ್ಲ. ಹೈಮಾಸ್ಟ್ ದೀಪಗಳು ಬರ್ನ್ ಆಗಿವೆಯಾ, ಏನಾದರೂ ತಾಂತ್ರಿಕ ದೋಷ ದಿಂದ ಬೆಳಗುತ್ತಿಲ್ಲವೇ ಎಂಬುದನ್ನು ಇಷ್ಟು ದಿನಗಳಾದರೂ ನಗರಸಭೆಯವರು ಪರಿಶೀಲಿಸುವ ಗೋಜಿಗೇ ಹೋಗಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಹೈಮಾಸ್ಟ್ ದೀಪಗಳು ಬೆಳಗದ ಕಾರಣ ಮುಸ್ಸಂಜೆ ಆಗುತ್ತಿದ್ದಂತೆ ಖಾಸಗಿ ಬಸ್ ನಿಲ್ದಾಣದಲ್ಲಿ ಕಗ್ಗತ್ತಲು ಕವಿಯುತ್ತಿದೆ. ರಾತ್ರಿ ವೇಳೆ ಖಾಸಗಿ ಬಸ್ ಅವಲಂಬಿತರ ಸಂಖ್ಯೆ ಇದ್ದುದರಲ್ಲಿ ಕಡಿಮೆ. ಆದರೂ ನಿಲ್ದಾಣದ ಸುತ್ತ ಮುತ್ತಲಿನ ಸಣ್ಣಪುಟ್ಟ ವ್ಯಾಪಾರಿಗಳು, ಬಸ್ ಅವಲಂಬಿತ ನೌಕರರಲ್ಲದೇ ಈ ಮಾರ್ಗವಾಗಿ ತಮ್ಮ ಮನೆ, ಕೆಲಸದ ಸ್ಥಳಗಳಿಗೆ ತೆರಳುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.

ಇನ್ನು ಜಿಲ್ಲಾ ಅಂಬೇಡ್ಕರ್ ಕ್ರೀಡಾಂಗಣದ ಹೈಮಾಸ್ಟ್ ವಿದ್ಯುತ್ ದೀಪ ಕೆಟ್ಟು ಒಂದು ತಿಂಗಳಾಗಿದೆ. ಮುಂಜಾನೆ, ಮುಸ್ಸಂಜೆ ವಾಯುವಿಹಾರ, ವ್ಯಾಯಾಮ ಮಾಡಲು ಹಾಗೂ ವಿದ್ಯಾರ್ಥಿಗಳು ವಿವಿಧ ಕ್ರೀಡಾ ತರಬೇತಿಗಳನ್ನು ಪಡೆಯಲು ಕತ್ತಲು ದೊಡ್ಡ ಸಮಸ್ಯೆಯಾಗಿದೆ. ವೃದ್ಧರು ಕ್ರೀಡಾಂಗಣದ ಮರ-ಗಿಡಗಳ ಬಳಿ ಕುಳಿತು ಕೆಲ ಕಾಲ ವಿಶ್ರಾಂತಿ ಪಡೆಯುವುದಕ್ಕೂ ಹೈಮಾಸ್ಟ್ ದೀಪ ಬೆಳಗದಿರುವುದು ಅಡ್ಡಿಯಾಗಿದೆ.

ಲಾಂಗ್ ಜಂಪ್, ಹೈಜಂಪ್, ಶಾಟ್‌ಫುಟ್, ಡಿಸ್ಕಸ್ ಥ್ರೋ, ರನ್ನಿಂಗ್, ಜಾವೆಲಿನ್ ಥ್ರೋ ಮೊದಲಾದ ಕ್ರೀಡೆಗಳ ತರಬೇತಿಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಪಡೆಯಲು ಕತ್ತಲೆ ತೊಡಕಾಗಿದೆ. ಶಾಲಾ, ಕಾಲೇಜು ಮುಗಿಸಿಕೊಂಡು ಮನೆಗೆ ಬಂದು ಕ್ರೀಡಾ ಸಮವಸ್ತ್ರ ಧರಿಸಿ ಕ್ರೀಡಾಂಗಣಕ್ಕೆ ಬರುವಷ್ಟರಲ್ಲಿ ಸಂಜೆ ೫.೪೫ ಗಂಟೆಯಾಗುತ್ತದೆ. ಗಂಟೆ ೬.೪೫ ಆಗುತ್ತಿದ್ದಂತೆ ಸೂರ್ಯಾಸ್ತ ಆಗುತ್ತದೆ. ಈ ಒಂದು ಗಂಟೆ ಅವಧಿಯಲ್ಲಿ ಸರಿಯಾಗಿ ತರಬೇತಿ ಪಡೆಯಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ..

ನಡಿಗೆ, ಓಟ, ವ್ಯಾಯಾಮ ಮಾಡಲು ಸಂಜೆ ಬಹಳಷ್ಟು ನೌಕರರು ಪ್ರತಿದಿನ ಕ್ರೀಡಾಂಗಣಕ್ಕೆ ಧಾವಿಸುತ್ತಾರೆ. ವಿವಿಧ ಕಾರಣಗಳಿಂದ ಬೆಳಿಗ್ಗೆ ಸಮಯ ಸಿಗದೆ ಸಂಜೆಯಲ್ಲಾದರೂ ತಿರುಗಾಡಿ, ಓಡಾಡಿ ದೈಹಿಕ ಸಮತೋಲನ ಕಾಪಾಡಿ ಕೊಳ್ಳಬೇಕು ಎಂದು ಬರುವವರೇ ಹೆಚ್ಚು. ಅಂತಹವರು ಮೊಬೈಲ್ ಬೆಳಕಿನಲ್ಲಿ ರಾತ್ರಿ ೮.೩೦ರ ವರೆಗೂ ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕುವುದನ್ನು ಕಾಣಬಹುದಾಗಿದೆ. ಫುಟ್‌ಬಾಲ್ ಆಟಗಾರರು ಸ್ವತಃ ಚಾರ್ಜಬಲ್ ಲೈಟ್ ಮುಂದಿಟ್ಟುಕೊಂಡು ಮಂದ ಬೆಳಕಿ ನಲ್ಲಿ ಅಭ್ಯಾಸ ಮಾಡುತ್ತಿರುತ್ತಾರೆ! ವಿಪರೀತ ಬೀದಿ ನಾಯಿಗಳು, ವಿಷ ಜಂತುಗಳ ಕಾಟ ಇಲ್ಲಿ ಇರುವುದು ತಿಳಿದಿದ್ದರೂ ಕ್ರೀಡಾಂಗಣ ಮತ್ತು ಬಸ್ ನಿಲ್ದಾಣದ ಹೈಮಾಸ್ಟ್ ದೀಪಗಳನ್ನು ದುರಸ್ತಿ ಪಡಿಸುವ ಕನಿಷ್ಠ ಕಾಳಜಿ ವಹಿಸದಿರುವುದು ವಿಪರ್ಯಾಸ.

ಕ್ರೀಡಾಂಗಣ ಹಾಗೂ ಬಸ್ ನಿಲ್ದಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹೈಮಾಸ್ಟ್ ದೀಪ ದುರಸ್ತಿಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

” ಜಿಲ್ಲಾ ಕ್ರೀಡಾಂಗಣದಲ್ಲಿ ಹೈಮಾಸ್ಟ್ ದೀಪ ಕೆಟ್ಟು ಒಂದು ತಿಂಗಳ ಮೇಲಾಗಿದೆ. ಮೊಬೈಲ್ ಬೆಳಕಿನಲ್ಲಿ ಮಕ್ಕಳು ಕ್ರೀಡಾ ಅಭ್ಯಾಸ ಮಾಡುವಂತಾಗಿದೆ. ಈ ವಿಚಾರ ಹೇಳಿಕೊಳ್ಳಲು ನಾಚಿಕೆ ಆಗುತ್ತದೆ.”

-ಶಿವು, ಕೋಚ್, ಎಸ್‌ಎಐ ಹಾಗೂ ಎಫ್‌ಎಐ, ಚಾ.ನಗರ.

” ೨೦ನೇ ವಾರ್ಡ್ ಗೆ ಸೇರಿರುವ ಜಿಲ್ಲಾ ಕ್ರೀಡಾಂಗಣ ಮತ್ತು ಖಾಸಗಿ ಬಸ್ ನಿಲ್ದಾಣದ ಹೈಮಾಸ್ಟ್ ದೀಪಗಳನ್ನು ಕೂಡಲೇ ದುರಸ್ತಿ ಪಡಿಸಲಾಗುವುದು. ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ.”

-ಚಂದ್ರಶೇಖರ್, ನಗರಸಭೆ ಸದಸ್ಯರು.

” ಜಿಲ್ಲಾ ಕ್ರೀಡಾಂಗಣದ ಹೈಮಾಸ್ಟ್ ದೀಪ ಕೆಟ್ಟಿದ್ದು ಇನ್ನು ೨-೩ ದಿನಗಳಲ್ಲಿ ರಿಪೇರಿ ಆಗಲಿದೆ. ಕ್ರೀಡಾಸಕ್ತರಿಗೆ ಈ ರೀತಿ ಮುಂದೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು.”

-ಕೆ.ಸುರೇಶ್, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

Tags:
error: Content is protected !!