Mysore
29
light rain

Social Media

ಬುಧವಾರ, 14 ಜನವರಿ 2026
Light
Dark

ಇಂದು ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ಚಾಲನೆ

ಕೆ.ಬಿ.ರಮೇಶನಾಯಕ

ಕುಣಿದು ಕುಪ್ಪಳಿಸಲು ಸಜ್ಜಾದ ಯುವಪಡೆ

೪೦೦ರಿಂದ ೪೫೦ ತಂಡಗಳು ಭಾಗಿ

೧೦ ದಿನಗಳು ಯುವಪಡೆಗೆ ಸುಗ್ಗಿ ಹಬ್ಬ

ಮಾನಸಗಂಗೋತ್ರಿ ಬಯಲುರಂಗಮಂದಿರದಲ್ಲಿ ವೇದಿಕೆ ಸಜ್ಜು

ಮೊದಲ ದಿನದಂದು ನಟ ಯುವರಾಜ್ ಮೋಡಿ

ದೀಪಾಲಂಕಾರ, ತ್ರೀಡಿ ಸೌಂಡ್ ಅಳವಡಿಕೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಮಹೋತ್ಸವ ದಿನದಿಂದ ದಿನಕ್ಕೆ ಕಳೆಗಟ್ಟ ತೊಡಗಿದೆ. ವರ್ಷವಿಡೀ ತನ್ನತ್ತ ಪ್ರವಾಸಿಗರನ್ನು ಕೈಬೀಸಿ ಕರೆಯುವ ನಗರದಲ್ಲೀಗ ದಸರೆಯ ಸಂಭ್ರಮ ಮೇಳೈಸಿದೆ.

ನಾಡಹಬ್ಬ ದಸರಾ ಮಹೋತ್ಸವ ಸೆ.೨೨ರಿಂದ ಆರಂಭವಾಗಲಿದೆಯಾದರೂ, ಅದಕ್ಕೆ ಮುನ್ನವೇ ಯುವಹೃದಯಗಳಲ್ಲಿ ಸಂಭ್ರಮದ ಹೊನಲು ಹರಿಸುವ ಯುವಸಂಭ್ರಮ ಆರಂಭಕ್ಕೆ ಕೆಲ ಗಂಟೆಗಳಷ್ಟೆ ಬಾಕಿ ಉಳಿದಿವೆ. ಅದಕ್ಕಾಗಿ ಅಂದಾಜು ೪೦೦ ರಿಂದ ೪೫೦ ತಂಡಗಳು ಇನ್ನಿಲ್ಲದ ತಯಾರಿ ನಡೆಸಿವೆ. ಯುವ ಪಡೆಯನ್ನು ಕುಣಿಸುವ ಸಲುವಾಗಿಯೇ ಯುವಸಂಭ್ರಮದ ಆಯೋಜನಾ ಸಮಿತಿ ಕೂಡ ಹಗಲಿರುಳೆನ್ನದೆ ಪೂರ್ವ ತಯಾರಿ ಕೈಗೊಂಡಿದೆ.

ಗೆಲುವು- ಸೋಲೆಂಬುದಿರದ ಹತ್ತು ದಿನಗಳ ಬೃಹತ್ ಕಾರ್ಯಕ್ರಮದಲ್ಲಿ ದಕ್ಷಿಣದ ಚಾಮರಾಜನಗರದಿಂದ ಉತ್ತರದ ಬೀದರ್‌ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ. ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆ.೧೦ರಿಂದ ೨೦ರವರೆಗೆ ನಡೆಯುವ ಯುವ ಸಂಭ್ರಮಕ್ಕೆ ಪೂರ್ಣ ತಯಾರಿ ಮಾಡಿಕೊಳ್ಳಲಾಗಿದೆ.

ಬಯಲು ರಂಗಮಂದಿರದಲ್ಲಿ ವಿದ್ಯುತ್ ದೀಪಾಲಂಕಾರ, ತ್ರೀಡಿ ಸೌಂಡ್ ಅಳವಡಿಕೆ, ಕಾಲೇಜು ಯುವಕ-ಯುವತಿಯರಿಗೆ ಪ್ರತ್ಯೇಕ ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಅತಿಥಿಗಳಿಗೆ ಪ್ರತ್ಯೇಕ ಕೊಠಡಿ ತೆರೆಯಲಾಗಿದೆ. ವಿವಿಐಪಿ, ವಿಐಪಿಗಳಿಗೆ ಪ್ರತ್ಯೇಕ ಗ್ಯಾಲರಿ, ಉಪಸಮಿತಿ ಪದಾಧಿಕಾರಿಗಳು, ಅಧಿಕಾರಿಗಳಿಗೆ ಗ್ಯಾಲರಿ, ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಬೋಗಾದಿ ಮತ್ತು ಹುಣಸೂರು ಭಾಗದಿಂದ ಬಯಲುರಂಗ ಮಂದಿರಕ್ಕೆ ಬರುವ ಮಾರ್ಗಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿ ಕಣ್ಮನ ಸೆಳೆಯುವಂತೆ ಮಾಡಿದ್ದರೆ, ಅನಗತ್ಯವಾಗಿ ವೇದಿಕೆಗೆ ಬಾರದಂತೆ ನೋಡಿಕೊಳ್ಳಲು ಪ್ರತ್ಯೇಕ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಮೊದಲ ದಿನವೇ ನಟ ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಅತಿಥಿಯಾಗಿ ಭಾಗವಹಿಸುವ ಮೂಲಕ ಯುವಕರನ್ನು ಮೋಡಿ ಮಾಡಲಿದ್ದಾರೆ.

ರಾಜ್ಯದ ೨೦ಕ್ಕೂ ಹೆಚ್ಚು ವಿವಿಗಳಿಂದ ತಂಡಗಳ ಆಗಮನ: ಈ ಬಾರಿ ರಾಜ್ಯದ ಮೂಲೆ ಮೂಲೆಯಲ್ಲಿನ ಕಾಲೇಜುಗಳ ತಂಡಗಳು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿವೆ. ರಾಜ್ಯದ ೨೦ಕ್ಕೂ ಹೆಚ್ಚು ವಿವಿಗಳ ತಂಡಗಳು, ಪಿಯು ಕಾಲೇಜು, ಐಟಿಐ, ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ವಿಶ್ವವಿದ್ಯಾನಿಲಯಗಳೂ ತಲಾ ಒಂದೊಂದು ತಂಡವನ್ನು ಆಯ್ಕೆ ಮಾಡಿ ಕಳಿಸಿಕೊಡಲಿವೆ.

ಪ್ರತಿದಿನ ಸಂಜೆ ೬ರಿಂದ ರಾತ್ರಿ ೧೦ ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ೪೦೦ಕ್ಕೂ ಹೆಚ್ಚು ಕಾಲೇಜುಗಳ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ನಿತ್ಯ ತಲಾ ೪೦ರಿಂದ ೫೦ ತಂಡಗಳ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ.

ಇಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡಗಳನ್ನು ಯುವ ದಸರಾಕ್ಕೆ ಆಯ್ಕೆ ಮಾಡಲು ಚಿಂತಿಸಲಾಗಿದ್ದು, ಅದರಂತೆ ಪ್ರತಿದಿನ ೨ ಅಥವಾ ೩ರಂತೆ ಆಯ್ಕೆಯಾಗುವ ಎಲ್ಲ ತಂಡಗಳು ಯುವ ದಸರಾದಲ್ಲಿ ಪ್ರದರ್ಶನ ನೀಡಲಿವೆ.

ವಿಷಯಾಧಾರಿತ ನೃತ್ಯ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಕಾನೂನು ಸುವ್ಯವಸ್ಥೆ, ಸಂವಿಧಾನ ಮತ್ತು ಶಾಸನ, ಹಕ್ಕು ಮತ್ತು ಕರ್ತವ್ಯಗಳು, ಮಾದಕ ವ್ಯಸನ ಮುಕ್ತ ಸಮಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ದಸರಾ, ಡಾ.ಬಿ.ಆರ್. ಅಂಬೇಡ್ಕರ್, ಕರ್ನಾಟಕ ಜಾನಪದ ವೈವಿಧ್ಯತೆ, ಪರಂಪರೆ, ಕನ್ನಡ ಸಾಹಿತ್ಯ ಇನ್ನಿತರೆ ಥೀಮ್ಗಳನ್ನು ಈ ಬಾರಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಈ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಗುರಿ ಯುವ ಸಂಭ್ರಮದ್ದಾಗಿದೆ.

” ಯುವ ಸಂಭ್ರಮದ ಪೂರ್ವ ಸಿದ್ಧತೆ ಕೊನೆಯ ಹಂತದಲ್ಲಿದೆ. ಸೆ.೧೦ರಿಂದ ೨೦ರವರೆಗೆ ನಡೆಯುವ ಯುವ ಸಂಭ್ರಮಕ್ಕೆ ಈ ಬಾರಿ ಹೆಚ್ಚು ತಂಡಗಳು ಆಗಮಿಸುತ್ತಿವೆ. ಅದಕ್ಕೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಪಸಮಿತಿಯ ಉಪವಿಶೇಷಾಧಿಕಾರಿ ಹಾಗೂ ಎಸ್‌ಪಿ ವಿಷ್ಣುವರ್ಧನ್ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಯಾವುದೇ ರೀತಿಯ ಸಮಸ್ಯೆ ಆಗದಂತೆ ಮುತುವರ್ಜಿ ವಹಿಸಲಾಗಿದೆ.”

ಸಿ.ಶಿವಕುಮಾರ್, ಸಹ ಕಾರ್ಯಾಧ್ಯಕ್ಷ, ಯುವ ಸಂಭ್ರಮ ಉಪ ಸಮಿತಿ

Tags:
error: Content is protected !!