ಜಿ.ಕೃಷ್ಣ ಪ್ರಸಾದ್
ಬಿಲ್ವಪತ್ರೆ ನಮಗೆ ಗೊತ್ತು. ಶಿವಪೂಜೆಗೆ ಇದರ ಎಲೆ ಬೇಕೇಬೇಕು. ದೇವಸ್ಥಾನಗಳ ಮುಂದೆ ಇದನ್ನು ಕಾಣಬಹುದೇ ಹೊರತು, ತೋಟಗಾರಿಕಾ ಬೆಳೆಯಾಗಿ ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುವವರನ್ನು ನಾ ಕಂಡಿಲ್ಲ.
ಕಳೆದ ವರ್ಷ ನಾನು ಒಡಿಶಾದ ಭುವನೇಶ್ವರಕ್ಕೆ ಹೋದಾಗ, ಕೃಷಿ ಮೇಳವೊಂದರಲ್ಲಿ ಗಜ ಗಾತ್ರದ ಬಿಲ್ವ ಕಾಯಿ ನೋಡಿದ್ದೆ. ಹೆಚ್ಚು ಕಮ್ಮಿ ಚಕ್ಕೋತದ ಗಾತ್ರವಿತ್ತು. ಉತ್ತರ ಭಾರತದಲ್ಲಿ ಬಿಲ್ವದ ಹಣ್ಣಿನಿಂದ ಜ್ಯೂಸ್ ಮಾಡುತ್ತಾರೆ. ಬೇಲದ ಹಣ್ಣಿನಂತೆ ‘ಬಿಲ್ವದ ಶರಬತ್’ ಮಾರುವ ತಳ್ಳುಗಾಡಿಗಳು ರಸ್ತೆಯಲ್ಲಿ ಕಾಣಸಿಗುತ್ತವೆ. ಹಣ್ಣಿನಿಂದ ಪಲ್ಪ್, ಮುರಬ್ಬ, ಕ್ಯಾಂಡಿ ಮತ್ತು ಆಯುರ್ವೇದ ಔಷಧಗಳನ್ನು ತಯಾರಿಸುತ್ತಾರೆ.
ಜ್ಯೂಸ್ ಬಿಲ್ವ ಹಣ್ಣನ್ನು ‘ಹೊಟ್ಟೆಯ ಡಾಕ್ಟರ್’ ಎನ್ನಬಹುದು. ಅಜೀರ್ಣ, ಮಲಬದ್ಧತೆ. ಅತಿಸಾರ ಮತ್ತು ಹೊಟ್ಟೆನೋವಿಗೆ ಇದರ ಶರಬತ್ತು ಉತ್ತಮ ಮನೆಮದ್ದು. ಇದರ ನಿರಂತರ ಬಳಕೆಯಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ಜ್ಯೂಸ್ ಬಿಲ್ವ ಬರ ಸಹಿಷ್ಣು ಬೆಳೆ. ಬೇಲದ ಮರ ಬೆಳೆಸಿದಂತೆ, ಜ್ಯೂಸ್ ಬಿಲ್ವ ಹಣ್ಣಿನ ಗಿಡಗಳನ್ನು ಬೇಲಿಯ ಅಂಚಿಗೆ, ಪಾಳು ಬಿದ್ದ ನೆಲದಲ್ಲಿ ಅಥವಾ ನೆಡು ತೋಪಾಗಿ ಬೆಳೆಸಬಹುದು. ಒಮ್ಮೆ ಗಿಡ ಬೆಳೆದ ನಂತರ ಹೆಚ್ಚಿನ ಆರೈಕೆ ಕೇಳದು. ಕಸಿ ಗಿಡ ಮೂರೇ ವರ್ಷದಲ್ಲಿ ಹಣ್ಣು ಕೊಡುತ್ತದೆ. ಐದಾರು ವರ್ಷ ವಯಸ್ಸಿನ ಬಿಲ್ವ ಗಿಡ ೪೦ ರಿಂದ ೫೦ ಕಾಯಿ ಬಿಡುತ್ತದೆ. ವಯಸ್ಸಾದ ಗಿಡ ೩೦೦-೪೦೦ ಕಾಯಿ ಕೊಡುತ್ತದೆ. ಪ್ರತಿ ಕಾಯಿ ಅರ್ಧ ಕೆಜಿಯಿಂದ ಎರಡು ಕೆಜಿವರೆಗೆ ತೂಗುತ್ತದೆ. ಮೈಸೂರಿನ ಸೂಪರ್ ಮಾರ್ಕೆಟ್ ಗೆ ಜ್ಯೂಸ್ ಬಿಲ್ವಾ ಆಗಾಗ ಮಾರಾಟಕ್ಕೆ ಬರುವುದುಂಟು. ಕಿಲೋಗೆ ೧೦೦ ರಿಂದ ೧೫೦ ರೂ. ಬೆಲೆ. ಮೈಸೂರಿನಲ್ಲೂ ಜ್ಯೂಸ್ ಬಿಲ್ವಾ!
ಮೈಸೂರಿನ ಪರಿಸರದಲ್ಲಿ ಜ್ಯೂಸ್ ಬಿಲ್ವ ಸುಲಭವಾಗಿ ಬೆಳೆಯುತ್ತದೆ. CSRTI – ಸೆಂಟ್ರಲ್ ಸಿಲ್ಕ್ ಬೋರ್ಡ್‌ನ ಸ್ಟಾಪ್ ಕ್ವಾರ್ಟರ್ಸ್‌ನಲ್ಲೊಂದು ಜ್ಯೂಸ್ ಬಿಲ್ವಾ ಮರವಿದೆ. ಚಾಮರಾಜಪುರಂನ ಮನೆಯೊಂದರಲ್ಲೂ ದೊಡ್ಡ ಜ್ಯೂಸ್ ಬಿಲ್ವಾ ಮರವಿದೆ. ಇದರ ಕಾಯಿ ಮತ್ತು ಎಲೆ ಔಷಧಿಗೆ ಬಳಕೆಯಾಗುತ್ತದೆ.ಸುತ್ತೂರು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಬಿ.ಎನ್.ಜ್ಞಾನೇಶ್ ಈ ಮರಗಳ ಅಧ್ಯಯನ ನಡೆಸುತ್ತಿದ್ದಾರೆ.
ರೇಷ್ಮೆ ಸಂಶೋಧನಾ ಕೇಂದ್ರದ ವಸತಿ ಗೃಹದಲ್ಲಿ ನಮಗೆ ಸಿಕ್ಕ ಬಿಲ್ವ ಹಣ್ಣಿನಿಂದ ಜ್ಯೂಸ್ ಮಾಡಿ ನೋಡಿದೆವು; ಅದ್ಬುತ ರುಚಿ. ಹಲಸು ಮೇಳದಲ್ಲಿ ಬಿಲ್ವಾ ಜ್ಯೂಸ್ ಪರಿಚಯಿಸಿದೆವು. ಕುಡಿದವರದೆಲ್ಲಾ ಒಂದೇ ಮಾತು’ ಯಾವ ಹಣ್ಣು ಇದು? ಇಷ್ಟು ರುಚಿಯಾಗಿದೆ?’ ಬಿಲ್ವಾ ಹಣ್ಣಿನ ತಿರುಳನ್ನು ಕೂಡ ಬೇಲದ ಹಣ್ಣಿನಂತೆಯೇ ಚಪ್ಪರಿಸಬಹುದು.
ಮೈಸೂರಿನ ಶಾರದಾದೇವಿ ನಗರದಲ್ಲಿರುವ ಸಸ್ಯಧಾಮ ನರ್ಸರಿಯವರು ಗುಜರಾತ್ ಮತ್ತು ವಾರಾಣಸಿಯಿಂದ ಗುಣಮಟ್ಟದ ಬಿಲ್ವ ಕಸಿ ಗಿಡಗಳನ್ನು ತರಿಸಿ ಮಾರುತ್ತಿದ್ದಾರೆ. ಆಸಕ್ತರು ವಿಜೀತ್, ೯೮೮೦೧ ೩೦೩೦ ಅವರನ್ನು ಸಂಪರ್ಕಿಸಬಹುದು
ಜ್ಯೂಸ್ ಬಿಲ್ವ ತಳಿಗಳು:
* ಗೋಮಯಾಶಿ : ಗುಜರಾತ್‌ನ ಗೋಧ್ರಾ ತೋಟಗಾರಿಕೆ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದ ತಳಿ. ಮಧ್ಯಮ ಗಾತ್ರಕ್ಕೆ ಬೆಳೆಯುವ ತಳಿ. ದುಂಡನೆಯ ಕಾಯಿಗಳು ೧ ರಿಂದ ೨.೫ ಕೆಜಿ ತೂಗುತ್ತವೆ.
* ನರೇಂದ್ರ NB೯: ವಾರಣಾಸಿ ಮೂಲದ ತಳಿ. ಮಧ್ಯಮ ಗಾತ್ರಕ್ಕೆ ಬೆಳೆಯುವ, ೧ ರಿಂದ ೧. ೫ ಕೆಜಿ ತೂಗುವ ಕಾಯಿ ಬಿಡುತ್ತದೆ. ಜ್ಯೂಸ್ ಮಾಡಲು ಸೂಕ್ತ.
* ನರೇಂದ್ರ NB- ೭: ವಾರಣಾಸಿ ಮೂಲದ ಸಾಧಾರಣ ಎತ್ತರದ ಮರವಾಗುವ ತಳಿ. ೩.೫ ರಿಂದ ೬ ಕೆಜಿ ತೂಗುವ ಮೊಟ್ಟೆಯಾಕಾರದ ಕಾಯಿಯ ತಳಿ. ಇಳುವರಿ ಸಾಧಾರಣ.
* ನರೇಂದ್ರ NB – ೫: ವಾರಣಾಸಿ ಮೂಲದ ಸಾಧಾರಣ ಎತ್ತರದ ತಳಿ. ಕಾಯಿಯ ಸಿಪ್ಪೆ ತೆಳು; ೧ ರಿಂದ ೧.೫ ಕೆಜಿ ಗಾತ್ರದ ಕಾಯಿಗಳು. ಉತ್ತಮ ಇಳುವರಿ ನೀಡುವ ತಳಿ.





