Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ನಂಜನಗೂಡು: ಒತ್ತುವರಿಗಾಗಿ ಸ್ಮಶಾನಕ್ಕೆ ನಾಲೆ ಮಣ್ಣು

ಎಸ್.ಎಸ್.ಭಟ್

ಪ್ರತಿಭಟನೆಗಿಳಿದ ಚಾಮಲಾಪುರದ ಹುಂಡಿ ಗ್ರಾಮಸ್ಥರು

ನಂಜನಗೂಡು: ಕಪಿಲಾ ನದಿ ದಡದ ತೋಟದಲ್ಲಿ ರೆಸಾರ್ಟ್ ನಿರ್ಮಿಸಲು ೬ಕೋಟಿ ರೂ.ಗೂ ಹೆಚ್ಚು ಮೊತ್ತದ ನಾಲಾ ಮಣ್ಣನ್ನು ಅಕ್ರಮವಾಗಿ ತಂದು ತುಂಬಿದ್ದ ಪಟ್ಟಭದ್ರ ಹಿತಾಸಕ್ತಿಗಳು ಅದೇ ತೋಟದ ಪಕ್ಕದಲ್ಲಿದ್ದ ಚಾಮಲಾಪುರದ ಹುಂಡಿಯ ಜನತೆಯ ಸ್ಮಶಾನವನ್ನೂ ಒತ್ತುವರಿ ಮಾಡಲು ಆರಂಭಿಸಿದ್ದು, ಸ್ಮಶಾನದ ಜಾಗವನ್ನೆಲ್ಲ ಈಗ ನಾಲೆಯ ಮಣ್ಣು ಆಕ್ರಮಿಸಿಕೊಂಡಿರುವುದರಿಂದ ಅಲ್ಲಿದ್ದ ಪುರಾತನವಾದ ಸಿದ್ದಪ್ಪಾಜಿ ದೇವಾಯವೂ ಭಾಗಶಃ ಮುಚ್ಚಿಹೋಗಿದೆ.

ಕೋಟ್ಯಂತರ ರೂ. ಮೌಲ್ಯದ ನಾಲೆಯ ಮಣ್ಣನ್ನು ಅಕ್ರಮವಾಗಿ ಸಾಗಿಸಿ, ೫ ಎಕರೆ ತೋಟವನ್ನು ಭರ್ತಿ ಮಾಡಿದ ಸುದ್ದಿ ‘ಆಂದೋಲನ’ ದಿನಪತ್ರಿಕೆಯಲ್ಲಿ ಜೂ.೨೩ ರಂದು ಪ್ರಕಟವಾದಾಗ ಕೆಲವು ದಿನಗಳ ಕಾಲ ಮೌನ ವಹಿಸಿದ್ದ ದುರಾತ್ಮರು, ಈಗ ಅದೇ ನಾಲೆಯ ಮಣ್ಣನ್ನು ಅಕ್ರಮವಾಗಿ ಸಾಗಿಸಿ ಅದೇ ತೋಟಕ್ಕೆ ಹೊಂದಿಕೊಂಡಂತಿರುವ ಸ್ಮಶಾನ ಒತ್ತುವರಿಯನ್ನೂ ಆರಂಭಿಸಿದ್ದಾರೆ.

ಲಾರಿಗಳನ್ನು ತಡೆದ ಗ್ರಾಮಸ್ಥರು: ನಾಲೆ ಮಣ್ಣು ತಂದು ಸ್ಮಶಾನವನ್ನು ಒತ್ತುವರಿ ಮಾಡುತ್ತಲೇ ಸಿದ್ದಪ್ಪಾಜಿ ದೇವಾಲಯವನ್ನೂ ಆವರಿಸಿರುವುದನ್ನು ಕಂಡ ಚಾಮಲಾಪುರದ ಜನರು, ಶನಿವಾರ ಸ್ಥಳಕ್ಕೆ ಆಗಮಿಸಿ ಮಣ್ಣು ಸಾಗಿಸುತ್ತಿದ್ದ ೩ ಲಾರಿಗಳು ಹಾಗೂ ೧ ಜೆಸಿಬಿಯನ್ನು ತಡೆದು ಪ್ರತಿಭಟನೆ ನಡೆಸಿ, ೨ ತಿಂಗಳುಗಳಿಂದ ಮೌನವಾಗಿದ್ದ ತಾಲ್ಲೂಕು ಆಡಳಿತಕ್ಕೆ ಬಿಸಿ ಮುಟ್ಟಿಸಿದರು.

ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಸ್ಮಶಾನ ಒತ್ತುವರಿ ವಿರುದ್ಧ ಕ್ರಮ ಜರುಗಿಸಬೇಕು. ಸ್ಮಶಾನ ಉಳಿಸಲೇ ಬೇಕು ಎಂದು ಆಗ್ರಹಿಸಿ ನೂರಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿದರು.

ಈ ಸುದ್ದಿ ತಿಳಿದು ದೌಡಾಯಿಸಿದ ನಂಜನಗೂಡು ಟೌನ್ ಪೊಲೀಸರು ಹಾಗೂ ತಾಲ್ಲೂಕು ಆಡಳಿತದವರು ಕೊನೆಗೂ ಅಕ್ರಮ ಮಣ್ಣು ಸಾಗಾಣಿಕೆಗಾಗಿ  ಗ್ರಾಮಸ್ಥರೇ ತಡೆದು ನಿಲ್ಲಿಸಿದ್ದ ೩ ಲಾರಿಗಳು ಹಾಗೂ ಒಂದು ಜೆಸಿಬಿ ವಾಹನವನ್ನು ವಶಕ್ಕೆ ಪಡೆದರು.

ಭಾನುವಾರ ಸರ್ವೆಯರ್ರನ್ನು ಕರೆಸಿ ಸ್ಮಶಾನದ ಅಳತೆ ಮಾಡಿಸಿ ಒತ್ತುವರಿ ತೆರವು ಮಾಡಿಸುವುದಾಗಿ ಕಂದಾಯ ಅಧಿಕಾರಿಗಳಾದ ಹರೀಶ ಹಾಗೂ ಪ್ರೀತಂ ನೀಡಿದ ಭರವಸೆಯ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು.

ಸ್ಮಶಾನ ಒತ್ತುವರಿ ತೆರವಾಗುವುದರೊಳಗೆ ಗ್ರಾಮದಲ್ಲಿ ಯಾರಾದರೂ ಮೃತರಾದರೆ ಶವವನ್ನು ಅಂತ್ಯಸಂಸ್ಕಾರಕ್ಕೆ ತಾಲ್ಲೂಕು ಕಚೇರಿಗೆ ಕೊಂಡೊಯ್ಯುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ನಗರಸಭಾ ಸದಸ್ಯ ಚಂದ್ರು ಹಾಗೂ ಗ್ರಾಮದ ಮುಖಂಡ ಶಂಕರಪ್ಪ, ಮತ್ತಿತರರು ತಾಲ್ಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.

” ಸ್ಮಶಾನದ ಭೂಮಿ ಅಳತೆ ಮಾಡಲಾಗುವುದು. ಒತ್ತುವರಿಯಾಗಿದ್ದರೆ ಭಾನುವಾರವಾದರೂ ತೆರವುಗೊಳಿಸಲಾಗುವುದು.”

-ಶಿವಕುಮಾರ್ ಕ್ಯಾಸನೂರು, ತಹಸಿಲ್ದಾರ್

” ಗ್ರಾಮಸ್ಥರು ತಡೆದಿದ್ದ ನಾಲ್ಕೂ ವಾಹನಗಳನ್ನು ಠಾಣೆಗೆ ತಂದು ನಿಲ್ಲಿಸಲಾಗಿದ್ದು, ಕಂದಾಯ ಅಧಿಕಾರಿಗಳು ನೀಡಬಹುದಾದ ದೂರು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಅದು ನಾಲೆಯ ಮಣ್ಣು ಎಂದು ದೃಢಪಟ್ಟರೆ ನೀರಾವರಿ ಅಧಿಕಾರಿಗಳು ದೂರು ದಾಖಲಿಸಬೇಕಾಗುತ್ತದೆ.”

-ರವೀಂದ್ರ, ಎಸ್‌ಐ, ನಗರ ಠಾಣೆ

” ಅಧಿಕಾರಿಗಳು ಶಾಮೀಲಾಗದಿದ್ದರೆ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಮಣ್ಣು ಸಾಗಾಣಿಕೆ ಹೇಗೆ ಸಾಧ್ಯ? ಜೂನ್ ತಿಂಗಳಲ್ಲೇ ನಾಲೆಯ ಮಣ್ಣಿನ ಅಕ್ರಮ ಸಾಗಣೆ ಕುರಿತು ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದು ಕೆಡಿಪಿ ಸಭೆಯಲ್ಲೂ ಪ್ರತಿಧ್ವನಿಸಿ, ಶಾಸಕರು ಈ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ನಂತರಸಭೆಗೆ ಬನ್ನಿ ಎಂದು ಸೂಚಿಸಿದ್ದರೂ ಮತ್ತೆ ಮಣ್ಣು ಸಾಗಣೆ ಆರಂಭವಾಗಲು ಮತ್ತು ಸ್ಮಶಾನ ಒತ್ತುವರಿಯಾಗಲು ತಾಲ್ಲೂಕಿನ ಅಧಿಕಾರಿಗಳೇ ಕಾರಣರಾಗಿದ್ದು, ಮೊದಲು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.”

-ಶಂಕರಪುರ ಸುರೇಶ

Tags:
error: Content is protected !!