Mysore
28
scattered clouds

Social Media

ಬುಧವಾರ, 14 ಜನವರಿ 2026
Light
Dark

ಭಾರತೀನಗರ ವ್ಯಾಪ್ತಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ

ಅಣ್ಣೂರು ಸತೀಶ್

ಅಪಘಾತಗಳು ಹೆಚ್ಚಳ, ಸಂಚರಿಸಲು ಭಯಪಡುತ್ತಿರುವ ವೃದ್ಧರು, ಮಕ್ಕಳು,ಮಹಿಳೆಯರು

ದೊಡ್ಡರಸಿನಕೆರೆ, ಅಣ್ಣೂರು, ಭಾರತೀನಗರ ಗ್ರಾಪಂಗಳ ವಿರುದ್ಧ ಸಾರ್ವಜನಿಕರ ಆಕ್ರೋಶ 

ಭಾರತೀನಗರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಮಕ್ಕಳು ಹಾಗೂ ಸಾರ್ವಜನಿಕರು ಭಯದಿಂದಲೇ ಸಂಚರಿಸಬೇಕಾದ ವಾತಾವರಣ ನಿರ್ಮಾಣವಾಗಿದೆ.

ಭಾರತೀನಗರದ ಮಾರಿಗುಡಿ ರಸ್ತೆ, ಮಾದೇಗೌಡ ಬಡಾವಣೆ, ದೇವರಹಳ್ಳಿ ರಸ್ತೆ, ಮದ್ದೂರು-ಮಳವಳ್ಳಿ ಹೆದ್ದಾರಿ, ಹಲಗೂರು ರಸ್ತೆ ಹಾಗೂ ೪ನೇ ವಾರ್ಡ್‌ನ ಗಣೇಶನ ದೇವಾಲಯದ ಸುತ್ತಮುತ್ತ ಬೀದಿನಾಯಿಗಳ ಹಾವಳಿ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಲು ಗ್ರಾಮ ಪಂಚಾಯಿತಿ ಮುಂದಾಗಬೇಕೆಂದು ನಿವಾಸಿಗಳು ಆಗ್ರಹಪಡಿಸಿದ್ದಾರೆ.

ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ರಸ್ತೆ ಅಪಘಾತಗಳೂ ಸಂಭವಿಸುತ್ತಿವೆ. ಇಷ್ಟಾದರೂ ಭಾರತೀನಗರ, ದೊಡ್ಡರಸಿನಕೆರೆ, ಅಣ್ಣೂರು ಗ್ರಾಮ ಪಂಚಾಯಿತಿ ಆಡಳಿತವು ಬೀದಿನಾಯಿಗಳ ಹಾವಳಿ ತಡೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಕರಡಕೆರೆ ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೀದಿ ನಾಯಿಗಳ ಹಾವಳಿ ತಡೆಯಲು ಕ್ರಮಕ್ಕೆ ಮುಂದಾದರೆ, ಪ್ರಾಣಿ ದಯಾ ಸಂಘದವರು ಪ್ರಕರಣ ದಾಖಲಿಸುತ್ತಾರೆ. ಕಾನೂನಿನಡಿ ಶಿಕ್ಷೆಗೆ ಗುರಿಯಾಗ ಬೇಕಾಗುತ್ತದೆ ಎಂಬ ಸಬೂಬು ಹೇಳಿ ಕೊಂಡು ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಅಧಿಕಾರಿ ವರ್ಗ ಉದಾಸೀನತೆ ತೋರುತ್ತಿದೆ.

ನಾಯಿಗಳನ್ನು ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಪಡಿಸಬಾರದು ಎಂಬ ಕಾನೂನು ಜಾರಿಯಲಿಲ್ಲ. ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಗ್ರಾಮಪಂಚಾಯಿತಿಗೆ ಅನುದಾನ ಲಭ್ಯವಿದ್ದರೂ ಆ ಕೆಲಸ ಸಮರ್ಪಕವಾಗಿನಡೆಯುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ರಸ್ತೆಯಲ್ಲಿ ಚಿಕ್ಕಮಕ್ಕಳು, ವಯೋ ವೃದ್ಧರು, ಮಹಿಳೆಯರು ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ನಡು ರಸ್ತೆಯಲ್ಲೇ ನಿಲ್ಲುವ ಬೀದಿ ನಾಯಿಗಳಿಂದಾಗಿ ದ್ವಿಚಕ್ರ ವಾಹನಗಳ ಸವಾರರು ಸಂಚರಿಸಲು ಭಯಪಡುತ್ತಿದ್ದಾರೆ. ಅಪಘಾತಗಳೂ ಸಂಭವಿಸುತ್ತಿವೆ. ಆದರೂ ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ಕ್ರಮವಹಿಸದಿರುವುದು ವಿಪರ್ಯಾಸ. ಸಾರ್ವಜನಿಕರು ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಣ್ಣೂರು ಗ್ರಾಮದ ಪುಟ್ಟಶೆಟ್ಟಿ

” ಭಾರತೀನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳ ಹಾವಳಿ ಹೆಚ್ಚಿರುವ ಬಗ್ಗೆ ದೂರುಗಳು ಬಂದಿವೆ. ನಾಯಿಗಳ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸಲಾಗುವುದು.”

ಎನ್.ಸುಧಾ, ಭಾರತೀನಗರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

” ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಾಯಿಗಳ ಹೆಚ್ಚಳ ನಿಯಂತ್ರಣ ಹಾಗೂ ಖರ್ಚು ವೆಚ್ಚದ ಬಗ್ಗೆ ಚರ್ಚಿಸಿ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ ಚಿಕಿತ್ಸೆ ಮಾಡುವುದರ ಬಗ್ಗೆ ಕ್ರಮ ವಹಿಸುತ್ತೇವೆ.”

ಬಿ.ವಿ.ನಾಗೇಂದ್ರ, ದೊಡ್ಡರಸಿನಕೆರೆ ಗ್ರಾ.ಪಂ. ಪಿಡಿಒ

” ಬೀದಿ ನಾಯಿಗಳ ಹಿಂಡನ್ನು ನೋಡಿದರೆ ಎಂತಹವರೂ ಭಯಪಡುವ ಸ್ಥಿತಿ ಬಂದಿದೆ. ನಾಯಿಗಳು ಕಡಿದರೆ ವ್ಯಾಕ್ಸಿನ್ ಸೌಲಭ್ಯವೂ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ದಯಮಾಡಿ ನಾಯಿಗಳಿಂದಾಗುವ ಸಾವು-ನೋವುಗಳನ್ನು ತಡೆಯಬೇಕು. ಬೀದಿ ನಾಯಿಗಳ ಸಂತತಿಗೆ ಕಡಿವಾಣ ಹಾಕಲು ಗ್ರಾಮ ಪಂಚಾಯಿತಿ ಆಡಳಿತ ಮುಂದಾಗಬೇಕು.”

ಭಾನುಮತಿ, ಶಿಕ್ಷಕಿ

” ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕೆಂದು ಗ್ರಾಮ ಪಂಚಾಯಿತಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಬೀದಿ ನಾಯಿಗಳನ್ನು ನಿಯಂತ್ರಿಸುವುದು ಗ್ರಾಮ ಪಂಚಾಯಿತಿಯ ಜವಾಬ್ದಾರಿ. ಈ ಬಗ್ಗೆ ಕ್ರಮ ವಹಿಸಬೇಕು.”

ಜಯರಾಮು, ಗುರುದೇವರಹಳ್ಳಿ 

Tags:
error: Content is protected !!