Mysore
29
few clouds

Social Media

ಗುರುವಾರ, 29 ಜನವರಿ 2026
Light
Dark

ನೀರಿನ ಸಮಸ್ಯೆಯಿದ್ದರೂ ಜಲಾಶಯದ ನೀರು ಕಾಮಗಾರಿಗೆ ಬಳಕೆ’

water tank

ಮಹಾದೇಶ್ ಎಂ.ಗೌಡ

ಅಜ್ಜೀಪುರ-ರಾಮಾಪುರ ರಸ್ತೆ ಅಭಿವೃದ್ಧಿಗೆ ನೀರು ಬಳಸುವ ಗುತ್ತಿಗೆದಾರನ ವಿರುದ್ಧ ರೈತ ಸಂಘ ಆಕ್ರೋಶ 

ಹನೂರು: ತಾಲ್ಲೂಕಿನ ರಾಮಾಪುರ, ಕೌದಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದೆ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದರೂ ಗುತ್ತಿಗೆದಾರನೊಬ್ಬ ಉಡುತೊರೆ ಜಲಾಶಯದ ನೀರನ್ನು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.

ತಾಲ್ಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದೆ ಐದು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ನೀರಿಲ್ಲದೆ ಬೆಳೆಗಳೆಲ್ಲ ಒಣಗುತ್ತಿವೆ. ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಪೂರೈಸಲು ಉಡುತೊರೆ ಜಲಾಶಯದಿಂದ ಒಂದು ವಾರದಿಂದ ನಾಲೆಗಳ ಮುಖಾಂತರ ಹಳ್ಳಕ್ಕೆ ನೀರು ಹರಿಸಲಾಗುತ್ತಿದೆ. ಅಜ್ಜೀಪುರ ಗ್ರಾಮದಿಂದ ರಾಮಾಪುರ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮೈಸೂರು ಮೂಲದ ಅಶೋಕ್ ಎಂಬವರು ಟೆಂಡರ್ ಪಡೆದುಕೊಂಡಿದ್ದಾರೆ.

ಇದನ್ನು ಓದಿ:ತಾಲ್ಲೂಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ : ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಆದರೆ ಇವರು ತಮಿಳುನಾಡು ಮೂಲದವರಿಗೆ ಉಪಗುತ್ತಿಗೆ ನೀಡಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ತಮಿಳುನಾಡು ಮೂಲದ ಗುತ್ತಿಗೆದಾರ ಉಡುತೊರೆ ಜಲಾಶಯದಿಂದ ರೈತರಿಗೆ ಹಳ್ಳದ ಮೂಲಕ ಹೋಗುತ್ತಿರುವ ನೀರು ಹಾಗೂ ಬಸಪ್ಪನ ದೊಡ್ಡಿ ಗ್ರಾಮದ ಸುಬ್ಬಯ್ಯನ ಕೆರೆಯಲ್ಲಿ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ಟ್ಯಾಂಕರ್‌ಗಳಲ್ಲಿ ನೀರನ್ನು ಅಕ್ರಮವಾಗಿ ಶೇಖರಣೆ ಮಾಡಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಗುತ್ತಿಗೆದಾರ ಮುಖ್ಯರಸ್ತೆಯಲ್ಲಿಯೇ ಅಕ್ರಮವಾಗಿ ಟ್ಯಾಂಕರ್ ಮೂಲಕ ನೀರು ಸಾಗಿಸುತ್ತಿದ್ದರೂ ಸಂಬಂಧಪಟ್ಟ ನೀರಾವರಿ ನಿಗಮದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಚರ್ಚೆಗೆ ಗ್ರಾಸವಾಗಿದೆ. ಸಂಬಂಧಪಟ್ಟ ನೀರಾವರಿ ನಿಗಮದ ಅಧಿಕಾರಿಗಳು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಅಕ್ರಮ ತಡೆದ ರೈತ ಮುಖಂಡರು: ಅಜ್ಜೀಪುರ- ರಾಮಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರ ಕಡೆಯವರುಉಡುತೊರೆಹಳ್ಳ ಜಲಾಶಯ ವ್ಯಾಪ್ತಿಯ ನಾಲೆಯಲ್ಲಿ ನೀರು ತುಂಬಲು ಬಂದ ಟ್ಯಾಂಕರ್ ವಾಹನವನ್ನು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ರಾಜಣ್ಣ ತಡೆದು, ರೈತರ ಉಪಯೋಗಕ್ಕೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಆದರೆ ನೀವು ವಾಣಿಜ್ಯ ಬಳಕೆಗೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಹಣ ನೀಡಿ ನೀರು ಖರೀದಿಸಿಕೊಳ್ಳಿ ಎಂದು ವಾಪಸ್ ಕಳುಹಿಸಿದ್ದಾರೆ.

” ಉಡುತೊರೆ ಜಲಾಶಯದಿಂದ ನಾಲೆಗಳ ಮುಖಾಂತರ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರನ್ನು ಅಕ್ರಮವಾಗಿ ಟ್ಯಾಂಕರ್ ಮೂಲಕ ತೆಗೆದುಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿಲ್ಲ. ತಕ್ಷಣ ನಮ್ಮ ಸಿಬ್ಬಂದಿಯನ್ನು ಕಳುಹಿಸಿ ನೀರು ತೆಗೆದುಕೊಳ್ಳದಂತೆ ಸೂಚನೆ ಕೊಡಲಾಗುವುದು.”

-ಕರುಣಾಮಯಿ, ಎಇಇ, ಕಾವೇರಿ ನೀರಾವರಿ ನಿಗಮ

” ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ ಜಲಾಶಯದಿಂದ ನೀರು ತುಂಬಿಕೊಳ್ಳುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆತನಿಗೆ ನೀರು ತುಂಬಿಕೊಳ್ಳದಂತೆ ಸೂಚನೆ ನೀಡಿದ್ದೇವೆ. ಆದರೂ ಅಕ್ರಮವಾಗಿ ನೀರು ಶೇಖರಣೆ ಮಾಡುತ್ತಿರುವುದು ಗೊತ್ತಾಗಿದೆ. ಅಧಿಕಾರಿಗಳು ಸೂಕ್ತ ಕ್ರಮ ವಹಿಸದಿದ್ದರೆ, ನಾವು ಹೋರಾಟ ಮಾಡುತ್ತೇವೆ.”

-ಅಮ್ಜದ್ ಖಾನ್, ಅಧ್ಯಕ್ಷ, ರೈತ ಸಂಘ

Tags:
error: Content is protected !!