‘ವಿಕ್ರಾಂತ್ ರೋಣ’, ‘ರಂಗಿ ತರಂಗ’, ‘ಅಜ್ಞಾತವಾಸಿ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಸಿದ್ದು ಮೂಲಿಮನಿ ಇದೇ ಮೊದಲ ಬಾರಿಗೆ ‘ಸೀಟ್ ಎಡ್ಜ್’ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ಹಾರರ್ ಕಾಮಿಡಿ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಅವರು ವ್ಲಾಗರ್ ಆಗಿ ಅಭಿನಯಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಟೀಸರ್ ಬಿಡುಗಡೆ ಆಗಿದೆ.
ಸಿದ್ದು ಮೂಲಿಮನಿಗೆ ನಾಯಕಿಯಾಗಿ ರವೀಕ್ಷಾ ಶೆಟ್ಟಿ ಅಭಿನಯಿಸಿದ್ದು, ಮಿಕ್ಕಂತೆ ಗಿರೀಶ್ ಶಿವಣ್ಣ, ರಾಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಚೇತನ್ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎನ್.ಆರ್.ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಗಿರಿಧರ ಟಿ. ವಸಂತಪುರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇದನ್ನು ಓದಿ:ಶಿವರಾಜಕುಮಾರ್ ಅಭಿನಯದ ‘ಬೇಲ್’ ಪ್ರಾರಂಭ: KVN ಪ್ರೊಡಕ್ಷನ್ಸ್ ನಿರ್ಮಾಣ
ಚೇತನ್ ಶೆಟ್ಟಿ ಈ ಹಿಂದೆ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ‘ಸೀಟ್ ಎಡ್ಜ್’ ಅವರ ನಿರ್ದೇಶನದ ಮೊದಲ ಚಿತ್ರ. ಈ ಕುರಿತು ಮಾತನಾಡುವ ಅವರು, ‘ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆಯಲು ಮತ್ತು ಜನಪ್ರಿಯರಾಗಲು ಯೂಟ್ಯೂಬರ್ಸ್ ಮತ್ತು ವ್ಲಾಗರ್ಸ್ ಏನೇನು ಸಾಹಸಗಳನ್ನು ಮಾಡುತ್ತಾರೆ ಎಂಬ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಇದು ಎಲ್ಲಾ ತರಹದ ಪ್ರೇಕ್ಷಕರಿಗೂ ಕನೆಕ್ಟ್ ಆಗುವಂಥ ಸಿನಿಮಾ. ನಮಗೆ ಗೊತ್ತಿಲ್ಲದ ವಿಷಯದಲ್ಲಿ ದುಸ್ಸಾಹಸಕ್ಕೆ ಕೈಹಾಕಿದರೆ, ಏನೇನು ಆಗಬಹುದು ಎಂಬುದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದರು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಸಿನಿಮಾ ಎನ್ನುವ ಸಿದ್ಧು ಮೂಲಿಮನಿ, ‘ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾನೂಬ್ಬ ಯೂಟ್ಯೂಬ್ ವ್ಲಾಗರ್ ಆಗಿ ಕಾಣಿಸಿಕೊಂಡಿದ್ದೇನೆ. ಯಾರೂ ಹೋಗದ ಭಯಾನಕ್ಕೆ ಜಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಬೇಕು ಎಂದು ಹಠಕ್ಕೆ ಬಿದ್ದ ನಾನು, ಘೋಸ್ಟ್ ಹಂಟಿಂಗ್ ವೀಡಿಯೋ ಮಾಡಲು ನಿರ್ಧರಿಸುತ್ತೇನೆ. ಆ ನಂತರ ಏನೆಲ್ಲಾ ಆಗುತ್ತದೆ ಎಂಬುದೇ ಚಿತ್ರದ ಕಥೆ’ ಎಂದರು.
‘ಸೀಟ್ ಎಡ್ಜ್’ ಚಿತ್ರಕ್ಕೆ ಆಕಾಶ್ ಪರ್ವ ಸಂಗೀತ, ದೀಪಕ್ ಕುಮಾರ್ ಜೆ.ಕೆ ಛಾಯಾಗ್ರಹಣವಿದ್ದು, ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.





