ಮೈಸೂರು: ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಧರ್ಮಸ್ಥಳ ಚಲೋ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯ ಲಾಭಕ್ಕೆ ಧರ್ಮಸ್ಥಳ ಚಲೋ ಮಾಡ್ತಿದ್ದಾರೆ. ಆದ್ರೆ ಲಾಭ ಸಿಗಲ್ಲ. ನಮಗೆ ಧರ್ಮಸ್ಥಳದ ಬಗ್ಗೆ ಅಪಾರ ಗೌರವವಿದೆ. ಎಸ್.ಐ.ಟಿ ರಚನೆ ಆದಾಗ ಬಿಜೆಪಿ ಯಾಕೆ ವಿರೋಧ ಮಾಡಲಿಲ್ಲ? ಕೆಲಕಡೆ ಏನು ಸಿಗಲಿಲ್ಲ ಅಂತ ಈಗ ಹೋರಾಟ ಮಾಡಲು ಮುಂದೆ ಬಂದಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಹಿಂದೂಗಳು ಒಟ್ಟಾಗುತ್ತಾರೆ ಏನೇನೋ ಹೇಳುತ್ತಾರೆ. ನಾನು ಹಿಂದೂನೇ. ಎಲ್ಲ ಹಿಂದೂಗಳು ಅವರ ಪರ ಇಲ್ಲ. ನಮ್ಮ ಊರಿನಲ್ಲೇ ರಾಮ ಮಂದಿರ ಮಾಡಿದ್ದೇವೆ. ಹಿಂದೂಗಳು ಅಂದ್ರೆ ರಾಜಕೀಯ ಮಾಡೋದಲ್ಲ, ಅಪಪ್ರಚಾರ ಮಾಡೋದು ಅಲ್ಲ, ಸುಳ್ಳು ಹೇಳೋದು ಅಲ್ಲ, ಮನುಷ್ಯತ್ವ ಇಲ್ಲದ ಮೇಲೆ ಅವರನ್ನು ಏನಂತ ಕರೀಬೇಕು? ಎಂದು ಪ್ರಶ್ನೆ ಮಾಡಿದರು.
ಇನ್ನು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ವಿಚಾರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರ ಮನೆಯನ್ನು ರಾಜಕಾರಣ ಮಾಡ್ತಾರೆ. ಸುಳ್ಳು ಹೇಳೋದು ಬಿಟ್ಟರೆ ಬಿಜೆಪಿ ಅವರಿಗೆ ಬೇರೇನೂ ಬರಲ್ಲ. ಲೇಖಕಿ ಬಾನು ಮುಷ್ತಾಕ್ ಅವರಿಗೆ ಗೌರವ ಸಿಗಬೇಕು. ಅವರು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಹೀಗಾಗಿ ದಸರಾ ಉದ್ಘಾಟನೆಗೆ ಕರೆದಿದ್ದೇವೆ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು.
ಇನ್ನು ಚಾಮುಂಡಿ ಬೆಟ್ಟ ಚಲೋ ಮಾಡ್ತೀವಿ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿನೇ ಎಂದು ಸ್ಪಷ್ಟನೆ ನೀಡಿದ ಅವರು, ಆದ್ರೆ ದಸರಾ ಹಬ್ಬ ಎಲ್ಲರ ಹಬ್ಬ. ನಾವು ಮಾಡೋದು ದಸರಾ ಹಬ್ಬ. ಅದಕ್ಕೆ ಧರ್ಮ ಜಾತಿ ಏನು ಇಲ್ಲ ಎಂದರು.
ಇನ್ನು ಡಿಸಿಎಂ ಡಿಕೆಶಿ ಒಂದು ಕಾಲನ್ನು ಬಿಜೆಪಿಯಲ್ಲಿ ಇಟ್ಟಿದ್ದಾರೆ. 50 ಜನ ಎಂಎಲ್‌ಎಗಳು ಬಿಜೆಪಿಗೆ ಹೋಗುತ್ತಾರೆ ಎಂಬ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅದೆಲ್ಲ ಏನಿಲ್ಲ ಎಂದು ಹೊರ ನಡೆದರು.




