ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಚಿತ್ರವು ಇದೇ ಸೆ.05ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಧನಂಜಯ್, ನವೀನ್ ಶಂಕರ್ ಮತ್ತು ಶರಣ್ ವಿಶೇಷ ಅತಿಥಿಗಳಾಗಿ ಬಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರದ ನಿಜವಾದ ಹೀರೋ ತರುಣ್ ಎಂದ ಶರಣ್, ‘ಅವರು ಒಂದು ಸಿನಿಮಾದ ಆಯ್ಕೆ ಹೇಗಿದೆ ಅನ್ನೋದಕ್ಕೆ ನನ್ನ ಜರ್ನಿ ಸಾಕ್ಷಿ. ಅವರು ನನ್ನ ಸಿನಿಮಾಗಳ ಕಥೆ ಆಯ್ಕೆ ಮಾಡುತ್ತಾರೆ. ‘ಏಳುಮಲೆ’ ಟ್ರೇಲರ್ ನೋಡಿದರೆ ಸಿನಿಮಾ ನೋಡಲೇ ಬೇಕು ಎನಿಸುತ್ತದೆ. ಇದು ಕಂಟೆಂಟ್ ಸಿನಿಮಾ. ಈ ಚಿತ್ರ ದೊಡ್ಡ ಹಿಟ್ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ತರಹದ ಪ್ರೇಮಕಥೆ ನೋಡದೆ ಬಹಳ ದಿನಗಳೇ ಆಗಿದ್ದವು ಎಂದ ಧನಂಜಯ್, ‘ಈ ತಂಡದಲ್ಲಿ ಪ್ರಾಮಾಣಿಕತೆ ಎದ್ದು ಕಾಣಿಸುತ್ತಿದೆ. ಆ ಪ್ರಾಮಾಣಿಕತೆಯೇ ಈ ಸಿನಿಮಾ ಗೆಲ್ಲಿಸುತ್ತದೆ ಎಂಬ ನಂಬಿಕೆ ಇದೆ. ಸಿನಿಮಾವನ್ನೇ ನಂಬಿಕೆಕೊಂಡು ಸಿನಿಮಾದಿಂದ ದುಡಿದು ಮತ್ತೆ ಸಿನಿಮಾ ಮಾಡುವುದು ಸವಾಲು. ಅದಕ್ಕಾಗಿ ಪ್ಯಾಶನ್, ರಿಸ್ಕ್ ತೆಗೆದುಕೊಳ್ಳಬೇಕು. ಅದನ್ನು ತರುಣ್ ಮಾಡುತ್ತಿದ್ದಾರೆ’ ಎಂದರು.
ಚಿತ್ರದ ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ‘ಒಬ್ಬ ನಿರ್ದೇಶಕನಾಗಿ ನನಗೆ ಏನು ಸಂಭಾವನೆ ಬರುತ್ತದೆ ಅದನ್ನು ಇಟ್ಕೊಂಡು ಸಿನಿಮಾ ಮಾಡುತ್ತೇನೆ. ಅದಕ್ಕೆ ಅಟ್ಲಾಂಟಾ ನಾಗೇಂದ್ರ ಅವರು ನೈತಿಕ ಬೆಂಬಲವಾಗಿ ನಿಲ್ಲುತ್ತಾರೆ. ತುಂಬಾ ಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ. ಎಲ್ಲರೂ ಪ್ರೀತಿಯಿಂದ ಈ ಚಿತ್ರ ಮಾಡಿದ್ದಾರೆ. ಇದು ಪುನೀತ್ ಸಿನಿಮಾ. ಇದು ಅವನ ಪ್ರಾಮಾಣಿಕತೆ. ‘ಏಳುಮಲೆ’ ಪ್ರೀತಿಯೇ ಪರಮ ಶ್ರೇಷ್ಠ ಎಂದು ಹೇಳುತ್ತದೆ. ಇದನ್ನು ನಾವು ಥ್ರಿಲ್ಲರ್ ಅಂಶಗಳ ಮೂಲಕ ಹೇಳುತ್ತಿದ್ದೇವೆ. ಈ ಚಿತ್ರ ನಿರಾಶೆ ಮಾಡುವುದಿಲ್ಲ’ ಎಂದರು.
‘ಏಳುಮಲೆ’ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ರಕ್ಷಿತಾ ಸಹೋದರ ರಾಣಾ ನಾಯಕನಾಗಿ, ‘ಮಹಾನಟಿ’ ಖ್ಯಾತಿಯ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಡಿ.ಇಮ್ಮಾನ್ ಸಂಗೀತವಿದೆ.





