Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಬಾನು ಮುಷ್ತಾಕ್ ಆಯ್ಕೆ ತಪ್ಪು ಎನ್ನುವುದು ಸಂಕುಚಿತ ಭಾವ 

dasara (3)

ಈ ರೀತಿ ಹಬ್ಬ, ಉತ್ಸವಗಳಲ್ಲಿ ಸರ್ಕಾರವು ಧರ್ಮನಿರಪೇಕ್ಷತೆ ಉಳಿಸಿಕೊಳಬೇಕಾಗುತ್ತದೆ. 

ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ರಾಜ್ಯ ಸರ್ಕಾರದ ತೀರ್ಮಾನದಲ್ಲಿ ಯಾವ ವಿಧವಾದ ಲೋಪವೂ ಕಾಣುವುದಿಲ್ಲ. ಅವರನ್ನು ಕರೆದಿರುವುದು ತಪ್ಪು ಅಂತ ಕಾನೂನಾತ್ಮಕವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲದೆ, ಮುಷ್ತಾಕ್ ಅವರು ಅನ್ಯ ಧರ್ಮೀಯರು, ಹಾಗಾಗಿ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಬಾರದು ಎಂಬ ಮನೋಭಾವನೆಯು ಹಿಂದೂ ಧರ್ಮದಲ್ಲಿ ಇಲ್ಲದಿರುವ ಸಂಕುಚಿತತೆಯನ್ನು ಇದೆ ಎಂದು ವಾದ ಮಾಡಿದಂತಾಗುತ್ತದೆ.

ಚಾಮುಂಡೇಶ್ವರಿಯನ್ನು ಆರಾಧಿಸುವುದಕ್ಕೆ ಧಾರ್ಮಿಕ ಹಾಗೂ ಸಾಮಾಜಿಕ ಇತಿಹಾಸ ಇದೆ. ಆದರೆ, ಅದಕ್ಕೆ ಪೂರಕವಾದ ಧಾರ್ಮಿಕ ಭಾವನೆ ಗಳು ಉದ್ಘಾಟಕರಿಗೂ ಇರಬೇಕು ಎಂದು ಹೇಳುವಂತಹ ನಿಯಮಗಳನ್ನು ರೂಪಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಬಾನು ಮುಷ್ತಾಕ್ ಅವರನ್ನು ಕರೆದಿರುವುದನ್ನು ತಪ್ಪು ಎಂದು ಕಾನೂನಾತ್ಮಕವಾಗಿ ಹೇಳಲು ಅವಕಾಶವೇ ಇಲ್ಲ. ದಸರಾ ಉದ್ಘಾಟಿಸಲು ಮುಷ್ತಾಕ್ ಅವರಿಗೆ ಅಭ್ಯಂತರ ಏನೂ ಇಲ್ಲ ಎಂದರೆ, ಮುಂದಿನ ಯಾವುದೇ ಪ್ರಶ್ನೆಗೂ ಅರ್ಥ ಇರುವುದಿಲ್ಲ. ಈ ರೀತಿ ಹಬ್ಬಗಳು ಅಥವಾ ಉತ್ಸವಗಳ ಬಗ್ಗೆ ರಾಜ್ಯ ಸರ್ಕಾರದ ನಡೆ ಹೇಗಿರಬೇಕು ಎಂಬುದರ ಬಗ್ಗೆ ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಆದರೆ, ಸರ್ಕಾರವು ಒಂದು ಧರ್ಮ ನಿರಪೇಕ್ಷತೆ ಅಂದರೆ ಜಾತ್ಯತೀತ ರುಜುವಾತು (ಸೆಕ್ಯುರಲ್ ಕ್ರೆಡೆನ್ಷಿಯಲ್ಸ್) ಅನ್ನು ಉಳಿಸಿಕೊಳ್ಳಬೇಕಾಗುತ್ತದೆ.

೨೫೦- ೩೦೦ ವರ್ಷಗಳ ಹಿಂದೆ ಯಾವುದೇ ಒಂದು ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಅಥವಾ ಉದ್ಘಾಟನೆಯಲ್ಲಿ ದಲಿತರಿಗೆ ಅವಕಾಶ ಇರುತ್ತಿರಲಿಲ್ಲ. ಹಾಗಂತ ಆ ಕಾಲದ ಪದ್ಧತಿಯನ್ನೇ ನಾವು ಮುಂದುವರಿಸಬೇಕು ಅಂತ ರಾಜ್ಯ ಸರ್ಕಾರ ದಲಿತರನ್ನು ಹೊರಗಿಟ್ಟರೆ, ಅದು ಸಂವಿಧಾನಕ್ಕೆ ಅಪವಾದವಾಗು ತ್ತದೆ. ಅದು ಆರ್ಟಿಕಲ್ ೧೭ರ ಅಸ್ಪೃಶ್ಯತೆ ಪ್ರತಿಬಂಧಕವನ್ನು ಉಲ್ಲಂಘಿಸುತ್ತದೆ. ಅಸ್ಪ ಶ್ಯತೆ ಯನ್ನು ಆಚರಿಸಿದರೆ ಅಥವಾ ಪ್ರತಿಪಾದಿಸಿದರೆ ಶಿಕ್ಷಿಸಲು ಕಾಯ್ದೆ ಇದೆ. ಸಂಪ್ರದಾಯ ಎಂದ ಮಾತ್ರಕ್ಕೆ ಇಂತಹ ಆಚರಣೆಗಳನ್ನು ಮುಂದುವರಿಸಲು ಆಗುವುದಿಲ್ಲ. ಅದೇ ರೀತಿ ರಾಜ್ಯ ಸರ್ಕಾರ ಒಂದು ವೇಳೆ ಹಿಂದೂ ಹಬ್ಬದ ಉದ್ಘಾಟನೆಯಲ್ಲಿ ಹಿಂದೂಗಳೇ ಆಗಿರಬೇಕು ಅಥವಾ ಇಂತಹ ವರ್ಗದವರೇ ಆಗಿರಬೇಕು, ದ್ವೈತರು ಅಥವಾ ಅದ್ವೈತರೇ ಆಗಿರಬೇಕು ಎಂದು ನಿಯಗಳನ್ನು ಹಾಕಿಕೊಂಡರೆ ಅದು ಧರ್ಮನಿರಪೇಕ್ಷತೆಗೆ ದೊಡ್ಡ ಹೊಡೆತವಾಗುತ್ತದೆ. ಒಂದು ಆರಾಧನೆ ಮಾಡುವುದಕ್ಕೆ ಅಗತ್ಯವಾದ ಪ್ರಮಾಣದಷ್ಟೇ ನಂಬಿಕೆ ಉದ್ಘಾಟಿಸುವುದಕ್ಕೂ ಬೇಕಾಗುತ್ತದೆಯೇ? ಈ ದೇಶದಲ್ಲಿ ಶೇ.೭೮ರಿಂದ ೮೦ರಷ್ಟು ಜನರು ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್, ಹಿಂದೂ ಧರ್ಮದ ಬಗ್ಗೆ ವ್ಯಾಖ್ಯಾನ ವಾಡುವಾಗ ಅದೊಂದು ಜೀವನ ವಿಧಾನ (ವೇ ಆಫ್ ಲೈಫ್) ಎಂದು ಹೇಳಿದೆ. ಹೀಗಿರಬೇಕಾದರೆ ಸರ್ಕಾರವು ಚಾಮುಂಡೇಶ್ವರಿಯನ್ನು ಆರಾಧಿಸುವುದಕ್ಕೆ ಬೇಕಿರುವ ನಂಬಿಕೆ ಇರುವವರು ಮಾತ್ರ ದಸರಾ ಉತ್ಸವವನ್ನು ಉದ್ಘಾಟನೆ ಮಾಡಬೇಕು ಎಂದು ಹೇಳಲು ಸಾಧ್ಯವಿಲ್ಲ.

ದಸರಾ ಮಹೋತ್ಸವವನ್ನು ಉದ್ಘಾಟಿಸುವುದಕ್ಕೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ವೈಯಕ್ತಿಕವಾಗಿ ಯಾವುದೇ ಸಮಸ್ಯೆ ಇರದಿದ್ದರೆ, ಯಾವುದೇ ವಿಧವಾದ ಧಾರ್ಮಿಕ ಅಡೆತಡೆ ಇಲ್ಲ ಅನಿಸಿದರೆ, ಅಲ್ಲಿ ವಿವಾದ ಎಂಬುದರ ಪ್ರಸ್ತಾಪಕ್ಕೇ ಜಾಗ ಇರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆ ಇರುವುದರಿಂದ ಪ್ರತಿಯೊಬ್ಬ ರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಹಾಗಾಗಿ ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹೇಳಬಹುದು. ಆದರೆ, ವಾಸ್ತವದ ತಳಹದಿಯಲ್ಲಿ ಆ ಹೇಳಿಕೆಗಳು ಇರಬೇಕು ಅಷ್ಟೆ.

” ೨೫೦- ೩೦೦ ವರ್ಷಗಳ ಹಿಂದೆ ಯಾವುದೇ ಒಂದು ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಅಥವಾ ಉದ್ಘಾಟನೆಯಲ್ಲಿ ದಲಿತರಿಗೆ ಅವಕಾಶ ಇರುತ್ತಿರಲಿಲ್ಲ. ಹಾಗಂತ ಆ ಕಾಲದ ಪದ್ಧತಿಯನ್ನೇ ನಾವು ಮುಂದುವರಿಸಬೇಕು ಅಂತ ರಾಜ್ಯ ಸರ್ಕಾರ ದಲಿತರನ್ನು ಹೊರಗಿಟ್ಟರೆ, ಅದು ಸಂವಿಧಾನಕ್ಕೆ ಅಪವಾದವಾಗುತ್ತದೆ. ಸಂಪ್ರದಾಯ ಎಂದ ಮಾತ್ರಕ್ಕೆ ಇಂತಹ ಆಚರಣೆಗಳನ್ನು ಮುಂದುವರಿಸಲು ಆಗುವುದಿಲ್ಲ”

ಕೆ.ವಿ.ಧನಂಜಯ, ಅಡ್ವೊಕೇಟ್, ಸುಪ್ರೀಂ ಕೋರ್ಟ್

Tags:
error: Content is protected !!