ಮೂಲಸೌಕರ್ಯಕ್ಕಾಗಿ ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದ ರೈತ ಸಂಘ; ಸರ್ವೆ ನಡೆಸಿ ವರದಿ ನೀಡಲು ಡಿಸಿ ಸೂಚನೆ
ಹನೂರು: ತಾಲ್ಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಯಬೇಕು ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಜುಲೈ ೩೧ರಂದು ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ತಿಂಗಳಾಗುತ್ತಾ ಬಂದರೂ ಯಾವುದೇ ಸಮಸ್ಯೆಗಳು ಬಗೆಹರಿಯದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಗ್ರಾಮಗಳು ಎದುರುಸುತ್ತಿರುವ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಬಗೆಹರಿಸಬೇಕು, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ತಹಸಿಲ್ದಾರ್ ಚೈತ್ರರವರು ಗೋಪಿನಾಥಂ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು.
ನಂತರ ತಹಸಿಲ್ದಾರ್ ಚೈತ್ರರವರು ಆಗಸ್ಟ್ ೧೨ರಂದು ಆಲಂಬಾಡಿ ಗ್ರಾಮದಲ್ಲಿ ರೈತ ಸಂಘದವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ ಆ.೧೬ರಂದು ರೈತ ಮುಖಂಡರ ಜೊತೆ ಸಭೆ ನಡೆಸಿದ್ದು, ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಮೊದಲು ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ಜನಸಂಖ್ಯೆ, ಅವರು ಉಳುಮೆ ಮಾಡುತ್ತಿರುವ ಭೂಮಿ, ಇನ್ನಿತರ ಸಮೀಕ್ಷೆಗಳನ್ನು ಮಾಡಿ ವರದಿ ನೀಡಲು ತಂಡ ರಚನೆ ಮಾಡಿದ್ದರು. ಡಿಸಿ ಸೂಚನೆಯಂತೆ ರಾಮಾಪುರ ಹೋಬಳಿಯ ರಾಜಸ್ವ ನಿರೀಕ್ಷಕ ಶಿವಕುಮಾರ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಸರ್ವೆ ನಡೆಸಿದ್ದಾರೆ. ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದಲ್ಲಿ ೧೪೧ ಕುಟುಂಬಗಳಿದ್ದು, ೩೯೬ ಜನಸಂಖ್ಯೆ ಹೊಂದಿದೆ. ಜಂಬೂರ್‌ಪಟ್ಟಿಯಲ್ಲಿ ೪೦ ಮನೆಗಳಿದ್ದು ೧೩೫ ಜನಸಂಖ್ಯೆ ಇದೆ. ಪುಂಗುಂ ಗ್ರಾಮದಲ್ಲಿ ೨೪ ಕುಟುಂಬಗಳಿದ್ದು ೭೨ ಜನಸಂಖ್ಯೆ, ಆತೂರು ಗ್ರಾಮದಲ್ಲಿ ೧೧ ಮನೆಗಳಿದ್ದು ೩೬ ಜನಸಂಖ್ಯೆ ಹೊಂದಿದೆ. ಮಾರಿಕೋಟೆಯಲ್ಲಿ ೭೦ ಕುಟುಂಬಗಳು ೨೯ ಜನಸಂಖ್ಯೆ, ಅಪ್ಪು ಕಾಂಪ್‌ಪಟ್ಟಿಯಲ್ಲಿ ೨ ೯೧೦೪ ಜ೧ನಸಂಖ್ಯೆ, ತೆಂಗೋಮ್ ಗ್ರಾಮದಲ್ಲಿ ೩೪ ಕುಟುಂಬಗಳಿದ್ದು ೯೯ ಜನಸಂಖ್ಯೆ, ಹುಡುಕಾಡು ಗ್ರಾಮದಲ್ಲಿ ೪೫ ಕುಟುಂಬಗಳಿದ್ದು ೧೨೮ ಜನಸಂಖ್ಯೆಯನ್ನು ಹೊಂದಿರುವುದು ಸರ್ವೆ ಕಾರ್ಯದಲ್ಲಿ ತಿಳಿದುಬಂದಿದೆ. ಇನ್ನು ೨ ದಿನಗಳಲ್ಲಿ ಸಂಪೂರ್ಣ ಸರ್ವೆ ನಡೆಸಿ ವರದಿ ನೀಡುವುದಾಗಿ ರಾಜಸ್ವ ನಿರೀಕ್ಷಕ ಶಿವಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.
ನಾಲ್ಕು ಗ್ರಾಮಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ: ಗೋಪಿನಾಥಂ ಗ್ರಾಪಂನ ಅಪ್ಪುಕಾಂಪಟ್ಟಿ, ಮಾರಿಕೋಟೆ, ಆಲಂಬಾಡಿ, ಹೊಗೇನಕಲ್ ಗ್ರಾಮಗಳಿಗೆ ಈವರೆಗೂ ವಿದ್ಯುತ್ ಸಂಪರ್ಕ ಕಲ್ಪಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ಯುಟಿ ಕೇಬಲ್ ಮುಖಾಂತರ ವಿದ್ಯುತ್ ಸಂಪರ್ಕ ನೀಡಲು ಪರಿಕರಗಳು ಬಂದಿವೆ. ಆದರೆ ಅರಣ್ಯ ಇಲಾಖೆಯವರು ಕಾಮಗಾರಿ ನಡೆಸಲು ಅನುಮತಿ ನೀಡದೆ ಇರುವುದರಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ.
ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸದೆ ಇರುವುದರಿಂದ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೭ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಇಲ್ಲದೆ ಕುಡಿಯಲು ಕೊಳವೆ ಬಾವಿ ನೀರನ್ನೇ ಅವಲಂಬಿಸಬೇಕಿದೆ.
” ಗೋಪಿನಾಥಂ ಗ್ರಾಪಂನ ಹಲವು ಗ್ರಾಮಗಳಿಗೆ ಸರ್ಕಾರದ ಮೂಲಸೌಲಭ್ಯಗಳು ಸಿಗದೆ ಜನರು ಪರಿತಪಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜೆಜೆಎಂ ಅನ್ನು ಕಲ್ಪಿಸಲು ಸಂಸದ ಸುನಿಲ್ ಬೋಸ್‌ರವರನ್ನು ಭೇಟಿ ಮಾಡಿ ಗ್ರಾಮಗಳಿಗೆ ನೀರು ಕೊಡಿಸಲು ತೀರ್ಮಾನಿಸಿದ್ದೇವೆ.”
ಅಮ್ಜದ್ ಖಾನ್, ಅಧ್ಯಕ್ಷರು, ರೈತ ಸಂಘ
” ರಾಜ್ಯದ ಗಡಿ ಗ್ರಾಮ ಗೋಪಿನಾಥಂನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಸರ್ಕಾರ ಅನುಮೋದನೆ ನೀಡಿದೆ. ಈಗಾಗಲೇ ಆಸ್ಪತ್ರೆ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾ ಗಿದ್ದು, ಶಾಸಕರು ಮುಂದಿನ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಈ ಗ್ರಾಮದಲ್ಲಿ ಆಸ್ಪತ್ರೆ ಪ್ರಾರಂಭ ಮಾಡಿದರೆ ರೋಗಿಗಳು ತಮಿಳುನಾಡಿಗೆ ಹೋಗುವುದು ತಪ್ಪಲಿದೆ.”
ಡಾ.ಪ್ರಕಾಶ್, ತಾಲ್ಲೂಕು ವೈದ್ಯಾಧಿಕಾರಿ




