ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳು; ಕಾಫಿ ಮಂಡಳಿಯಿಂದ ಅಗತ್ಯ ಸಲಹೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮಳೆಯಾಗಿರುವುದರಿಂದ ತೋಟಗಾರಿಕಾ ಬೆಳೆಗಳಿಗೆ ಹಾನಿವುಂಟಾಗಿದ್ದು, ಕಾಫಿ ಎಲೆ ಉದುರಿರುವುದು ಹಾಗೂ ಎಲೆಗಳು ಕೊಳೆತಿರುವುದರಿಂದ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಈ ಬಾರಿ ಮೇ ಅಂತ್ಯದಿಂದಲೇ ಮಳೆ-ಶೀತಗಾಳಿ ವಾತಾವರಣ ಕಂಡುಬಂದಿದೆ. ಇದು ಜಿಲ್ಲೆಯ ತೋಟಗಾರಿಕಾ ಬೆಳೆಗಳ ಮೇಲೆ ಪರಿಣಾಮವನ್ನು ಉಂಟುಮಾಡಿದ್ದು, ಮುಖ್ಯವಾಗಿ ಕಾಫಿ ಬೆಳೆಗಾರರಿಗೆ ಬೆಳೆ ನಷ್ಟದ ಭೀತಿ ಎದುರಾಗಿದೆ. ಇದಲ್ಲದೇ ಕಾಳು ಮೆಣಸು, ಅಡಕೆ, ತೋಟಗಾರಿಕಾ ಬೆಳೆಗಳಿಗೆ ಸಮಸ್ಯೆ ಉಂಟಾಗಿದೆ. ಅತಿಯಾದ ಮಳೆ, ತೇವಾಂಶದ ಪರಿಣಾಮದಿಂದಾಗಿ ಶಿಲೀಂಧ್ರಗಳು ನಾಶವಾಗಿ ಕೊಳೆರೋಗ ಕಂಡುಬಂದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಸೂರ್ಲಬ್ಬಿ, ಶಾಂತಹಳ್ಳಿ, ಬಿರು ನಾಣಿ, ಗರ್ವಾಲೆ ಮತ್ತು ಮುಕ್ಕೋಡ್ಲು ಇನ್ನಿತರೆಡೆ ಶೇ.೧೫೬ರಷ್ಟು ಮಳೆಯಾಗಿದೆ. ಆದರೆ ಭಾಗಮಂಡಲ ವ್ಯಾಪ್ತಿಯ ಕೆಲವು ಕಡೆ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ. ಈಗ ಹೆಚ್ಚು ಮಳೆಯಾಗಿರುವ ಪ್ರದೇಶಗಳಲ್ಲಿ ಕಾಫಿಗೆ ಕೊಳೆರೋಗ ಬಾಧಿಸಿದ್ದು, ಇಲ್ಲೆಲ್ಲ ಶೇ.೧೫ರಷ್ಟು ಕಾಫಿ ಉದುರಿದೆ ಎಂದು ಕಾಫಿ ಮಂಡಳಿ ಅಂದಾಜಿಸಿದೆ. ಕೆಲ ದಿನಗಳಿಂದ ಈ ಭಾಗದಲ್ಲಿ ಕಾಫಿ ಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಬೆಳೆ ನಷ್ಟ ಸಂಭವಿಸಿರುವುದನ್ನು ಖಚಿತಪಡಿಸಿದ್ದಾರೆ.
ಜಿಲ್ಲೆಯ ಉಳಿದ ಕಡೆಗಳಲ್ಲಿಯೂ ಇಂತಹದ್ದೇ ಸಮಸ್ಯೆ ಎದುರಾಗಿರಬಹುದಾಗಿದ್ದು, ಜಿಲ್ಲೆಯ ಕಾಫಿ ಉತ್ಪಾದನೆಯಲ್ಲಿ ಕುಂಠಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಕಾಫಿ ಬೆಳೆಗಾರರಿಗೆ ಈ ಬಾರಿ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಈಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಚ್ಚು ನಷ್ಟದಿಂದ ಪಾರಾಗುವಂತೆ ಅವರು ಸಲಹೆ ನೀಡಿದ್ದಾರೆ.
ಜಂಟಿ ಸರ್ವೇಗೆ ಸಮಿತಿ ರಚನೆ: ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗಿರುವ ಬಗ್ಗೆ ಕಾಫಿ ಮಂಡಳಿ ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ತಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳನ್ನೊಳಗೊಂಡಂತೆ ಜಂಟಿ ಸರ್ವೇ ನಡೆಸಲು ಜಿಲ್ಲಾಧಿಕಾರಿ ಸಮಿತಿ ರಚನೆ ಮಾಡಲಿದ್ದಾರೆ. ಸಮಿತಿ ನೀಡುವ ವರದಿಯ ಆಧಾರದ ಮೇಲೆ ಬೆಳೆ ಹಾನಿಗೆ ಸಂಬಂಽಸಿದಂತೆ ಪರಿಹಾರ ವಿತರಣೆಗೆ ಕ್ರಮವಾಗಲಿದೆ.
” ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬಿದ್ದಿರುವ ಪ್ರದೇಶದಲ್ಲಿ ಈಗಾಗಲೇ ಶೇ.೧೫ರಷ್ಟು ಬೆಳೆ ಹಾನಿಯಾಗಿದೆ. ಉಳಿದ ಕಡೆಗಳಲ್ಲಿಯೂ ಸರ್ವೇ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬೆಳೆಗಾರರಿಗೆ ಕೊಳೆರೋಗದಿಂದ ಗಿಡಗಳನ್ನು ರಕ್ಷಿಸಲು ಈಗಾಗಲೇ ಕಾಫಿ ಮಂಡಳಿಯಿಂದ ಅಗತ್ಯ ಸಲಹೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಂಟಿ ಸರ್ವೇ ಮೂಲಕ ಒಟ್ಟಾರೆ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಬೇಕಿದೆ.”
ಚಂದ್ರಶೇಖರ್, ಕಾಫಿ ಮಂಡಳಿ ಉಪನಿರ್ದೇಶಕ




