ಅನುಚೇತನ್ ಕೆ.ಎಂ.
೩೫ಕ್ಕೂ ಹೆಚ್ಚಿನ ಗರಡಿ ಮನೆಗಳಲ್ಲಿ ಸಿದ್ಧತೆ; ಪ್ರತಿ ಗರಡಿಯಲ್ಲಿ ೧೫ಕ್ಕೂ ಹೆಚ್ಚು ಜಟ್ಟಿಗಳಿಗೆ ತರಬೇತಿ
ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಕುಸ್ತಿಯೂ ಒಂದು. ಈ ಕುಸ್ತಿ ಪಂದ್ಯಾವಳಿಯಲ್ಲಿ ಸೆಣಸಾಡಲು ಕುಸ್ತಿಪಟುಗಳು ಪ್ರತಿನಿತ್ಯ ಗರಡಿ ಮನೆಗಳಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ನಗರದ ೩೫ಕ್ಕೂ ಹೆಚ್ಚಿನ ಗರಡಿಗಳಲ್ಲಿ ಕುಸ್ತಿ ಅಭ್ಯಾಸ ನಡೆಯುತ್ತಿದೆ. ಪ್ರತಿ ಗರಡಿಮನೆಯಲ್ಲಿ ೧೫ಕ್ಕೂ ಹೆಚ್ಚಿನ ಕುಸ್ತಿ ಪಟುಗಳಿಗೆ ಹಿರಿಯ ಪೈಲ್ವಾನರು ಸೂಕ್ತ ರೀತಿಯ ತರಬೇತಿ ನೀಡುತ್ತಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ದಿನವೇ ನಗರದಲ್ಲಿರುವ ಬಹುತೇಕ ಗರಡಿ ಮನೆಗಳಲ್ಲಿ ದೊಡ್ಡಮಟ್ಟಿಗೆ ಪೂಜೆ (ಅಂಬಾತಾಯಿ ಪೂಜೆ)ಯನ್ನು ನೆರವೇರಿಸಲಾಗಿದ್ದು, ಮಟ್ಟಿಯನ್ನು ಮುಟ್ಟಿರುವ ಕುಸ್ತಿ ಪಟುಗಳು ಪಟ್ಟಿಗೆ ಪ್ರತಿ ಪಟ್ಟು ಹಾಕುತ್ತಾ ಕಸರತ್ತು ನಡೆಸುತ್ತಿದ್ದಾರೆ.
೩೫ಕ್ಕೂ ಹೆಚ್ಚಿನ ಗರಡಿಗಳಲ್ಲಿ ಅಭ್ಯಾಸ: ನಗರದಲ್ಲಿ ೩೫ಕ್ಕೂ ಹೆಚ್ಚಿನ ಗರಡಿ ಮನೆಗಳಿದ್ದು, ಎಲ್ಲಾ ಗರಡಿಗಳಲ್ಲಿಯೂ ಕಸರತ್ತು ಆರಂಭವಾಗಿದೆ. ಸಣ್ಣ ಹುಡುಗರಿಂದ ಹಿಡಿದು ವಯಸ್ಕರವರೆಗಿನ ಕುಸ್ತಿ ಪಟುಗಳೂ ನಿತ್ಯವು ಮಟ್ಟಿಯ ಮೇಲೆ ಎದುರಾಳಿಗಳ ವಿರುದ್ಧ ಸೆಣಸಾಡಲು ಸಜ್ಜಾಗುತ್ತಿದ್ದಾರೆ.
ಪ್ರತಿದಿನ ಬೆಳಿಗ್ಗೆ ೬ರಿಂದ ೮ರವರೆಗೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ದಸರಾ ಕುಸ್ತಿ ಪಂದ್ಯಾ ವಳಿಯಲ್ಲಿ ಹಿಂದಿನ ವರ್ಷ ಮೈಸೂರು ಭಾಗಕ್ಕೆ ೭ರಿಂದ ೮ ಸ್ಥಾನಗಳು ದೊರೆತಿದ್ದು, ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ತಯಾರಿ ನಡೆಯುತ್ತಿದೆ.
” ಕುಸ್ತಿ ಪಟುಗಳಿಗೆ ಹೆಚ್ಚಿನ ಆಹಾರದ ಅವಶ್ಯಕತೆಯಿದ್ದು, ಬೆಲೆ ಏರಿಕೆಯಿಂದ ಖರೀದಿಸಲು ಕಷ್ಟವಾಗುತ್ತಿದೆ. ಸರ್ಕಾರದಿಂದ ಯಾವುದೇ ಸಹಾಯಧನವಿಲ್ಲ. ಹಿಂದಿನಂತೆ ದಾನಿಗಳೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಸರ್ಕಾರ ಪೈಲ್ವಾನರಿಗೆ ಆಹಾರ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥಗಳನ್ನು ಒದಗಿಸಬೇಕು.”
-ಪೈ.ಎಸ್.ಮಹಾದೇವ್, ಗೌರವಾಧ್ಯಕ್ಷ, ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡ
” ನಿತ್ಯ ಬೆಳಿಗ್ಗೆ ಕುಸ್ತಿಪಟುಗಳಿಗೆ ಶಾಖಾಹಾರ ಪೈಲ್ವಾನರು ದೈಹಿಕವಾಗಿ ಕುಸ್ತಿ ಯನ್ನಾಡಲು ಅತ್ಯಂತ ಶಕ್ತಿ, ಸಾಮರ್ಥ್ಯದ ಅವಶ್ಯಕತೆ ಇದೆ. ಹೀಗಾಗಿ ನಿತ್ಯವೂ ಬೆಳಿಗ್ಗೆ ಸಸ್ಯಾಹಾರಿಗಳಿಗೆ ಬೆಣ್ಣೆ, ಹಾಲು, ತುಪ್ಪ, ಡ್ರೈಫ್ರೂಟ್ಸ್ ಫಲಾಹಾರ ನೀಡುತ್ತಿದ್ದರೆ, ಮಾಂಸಹಾರಿಗಳಿಗೆ ಕಾಲು ಸೂಪ್, ತಲೆಮಾಂಸ, ಮೊಟ್ಟೆ ನೀಡಲಾಗುತ್ತಿದೆ. ಅಲ್ಲದೆ, ಎಲ್ಲ ಪೈಲ್ವಾನ್‌ರಿಗೆ ಲೀಟರ್ ಲೆಕ್ಕದಲ್ಲಿ ಬಾದಾಮಿ ಹಾಲನ್ನು ನೀಡಲಾಗುತ್ತಿದೆ.”
” ಕುಸ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪೈಲ್ವಾನರಿಗೆ ವಿಶಿಷ್ಟವಾದ ಸವಲತ್ತುಗಳನ್ನು ಒದಗಿಸಬೇಕು. ಯುವಕರಲ್ಲಿ ಕುಸ್ತಿಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವ ಕೆಲಸವಾಗಬೇಕು.”
-ಪೈ.ದೀಪಕ್ ಕಿರಣ್, ಕುಸ್ತಿಪಟು, ಅಶೋಕಪುರಂ
ಮೈಸೂರಿನಲ್ಲಿರುವ ಗರಡಿ ಮನೆಗಳು: ಕೆ.ಜಿ.ಕೊಪ್ಪಲಿನ ಹೊಸಬೀದಿಯಲ್ಲಿರುವ ಪೈಲ್ವಾನ್ ಬಸವಯ್ಯ ಅವರ ಹತ್ತು ಜನಗಳ ಗರಡಿ, ಚಿಕ್ಕ ಗರಡಿ, ಉಸ್ತಾದ್ ಲಿಂಗೇಗೌಡ ಅವರ ಹತ್ತು ಜನಗಳ ಗರಡಿ, ಪೈಲ್ವಾನ್ ಹುಚ್ಚಯ್ಯ ಅವರ ಗರಡಿ, ಪೈಲ್ವಾನ್ ಬೋರಯ್ಯ ಬಸವಯ್ಯ ಅವರ ಹತ್ತು ಜನಗಳ ಗರಡಿ, ಬೇವಿನಮರದ ಗರಡಿ, ಸುಣ್ಣದ ಕೇರಿಯ ಗೋಪಾಲಸ್ವಾಮಿ ಗರಡಿ ಹಾಗೂ ನಜರ್‌ಬಾದ್‌ನ ದೊಡ್ಡಗರಡಿ ಮನೆಗಳಿವೆ.




