Mysore
18
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಸಂಚಾರ ಮಲತ್ಯಾಜ್ಯ ಸಂಸ್ಕರಣಾ ವಾಹನಗಳು ಕಾರ್ಯಾರಂಭ

ನವೀನ್ ಡಿಸೋಜ

ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಆರಂಭ; ವಾಹನದಲ್ಲಿಯೇ ನಡೆಯಲಿದೆ ಸಂಪೂರ್ಣ ಪ್ರಕ್ರಿಯೆ

ಮಡಿಕೇರಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಚಾರ ಮಲತ್ಯಾಜ್ಯ ಸಂಸ್ಕರಣಾ ವಾಹನಗಳನ್ನು ಕೊಡಗಿನಲ್ಲಿ ಪರಿಚಯಿಸಲಾಗಿದ್ದು, ಇದರಿಂದ ಜಿಲ್ಲೆಯ ಸ್ವಚ್ಛತೆಗೆ  ಮತ್ತಷ್ಟು ಅನುಕೂಲವಾಗಲಿದೆ.

ಈಗಾಗಲೇ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಮತ್ತು ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಿ ಕಾರ್ಯಾರಂಭಿಸಲಾಗಿದೆ. ಮಲತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಒಂದು ಬಾರಿ ಮಲತ್ಯಾಜ್ಯ ಸಂಸ್ಕರಣೆಗೊಂಡು ಘನ ಮತ್ತು ದ್ರವ ತ್ಯಾಜ್ಯಗಳು ಸಂಪೂರ್ಣವಾಗಿ ಪ್ರತ್ಯೇಕಗೊಂಡು ಸಂಸ್ಕರಣೆಯಾಗಲು ಕನಿಷ್ಠ ೩ ತಿಂಗಳ ಸಮಯಾವಕಾಶ ಬೇಕಾಗುತ್ತದೆ. ಆದರೆ ಸಂಚಾರ ಮಲತ್ಯಾಜ್ಯ ಸಂಸ್ಕರಣಾ ವಾಹನ ಈ ಕಾರ್ಯವನ್ನು ಕೆಲವೇ ಗಂಟೆಗಳಲ್ಲಿ ಮಾಡುತ್ತದೆ.

ಇದು ಪ್ರತ್ಯೇಕಿಸುವ ಮಲತ್ಯಾಜ್ಯದಲ್ಲಿನ ನೀರನ್ನು ಶೇ.೬೦-೭೦ರಷ್ಟು ಶುದ್ಧೀಕರಿಸುತ್ತದೆ. ಈ ನೀರು ಕುಡಿಯಲುಯೋಗ್ಯವಲ್ಲ, ಆದರೆ ತೋಟಗಳಿಗೆ ಮತ್ತು ಗಿಡಗಳಿಗೆ ಬಳಸಬಹುದಾಗಿದೆ. ಇಲ್ಲವಾದರೆ ನೇರವಾಗಿ ಚರಂಡಿಗೆ ಹರಿಯ ಬಿಡಬಹುದಾಗಿದೆ. ಸಂಸ್ಕರಣೆಯ ನಂತರ ಉಳಿಯುವ ಮಲಹೂಳು(ಮಲತ್ಯಾಜ್ಯ) ಶೇ.೮೦ರಷ್ಟು ಸಂಸ್ಕರಣೆಗೊಂಡಿರುತ್ತದೆ. ಇದನ್ನು ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರವಾನಿಸಿ ಗೊಬ್ಬರ ತಯಾರಿಕೆಯಲ್ಲಿ ಬಳಸಬಹುದಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಕೋಶ್ ಟ್ರಸ್ಟ್, ಸ್ವಚ್ಛ ಭಾರತ್ ಮಿಷನ್ (ಗ್ರಾ.) ಮತ್ತು ಕೊಡಗು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಈ ವಾಹನಗಳು ಕಾರ್ಯಾರಂಭ ಮಾಡಿವೆ.

ಜಿಲ್ಲೆಯಲ್ಲಿ ಈಗಾಗಲೇ ಮೂರು ವಾಹನಗಳು ಕಾರ್ಯಾರಂಭಿಸಿದ್ದು, ಪ್ರತಿ ವಾಹನಕ್ಕೆ ೩೦ ಲಕ್ಷ ರೂ. ವೆಚ್ಚ ಮಾಡಲಾಗಿದೆ. ಒಟ್ಟು ೯೦ ಲಕ್ಷ ರೂ. ವೆಚ್ಚದಲ್ಲಿ ೩ ವಾಹನಗಳು ಕಾರ್ಯಾಚರಿಸುತ್ತಿದೆ. ಈ ಯೋಜನೆಗೆ ಅನುದಾನವನ್ನು ಸಂಪೂರ್ಣವಾಗಿ ಸ್ವಚ್ಛ ಭಾರತ್ ಕೋಶ್  ಟ್ರಸ್ಟ್‌ನಿಂದ ಭರಿಸಲಾಗಿದೆ.

ಜಿಲ್ಲೆಯ ಕುಟ್ಟ, ನಾಪೋಕ್ಲು ಮತ್ತು ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಸಂಚಾರ ಮಲ ತ್ಯಾಜ್ಯ ಸಂಸ್ಕರಣಾ ವಾಹನಗಳು ಕಾರ್ಯನಿರ್ವಹಿಸಲಿವೆ. ಮುಂದಿನ ದಿನಗಳಲ್ಲಿ ಗ್ರಾ.ಪಂ. ಮಾತ್ರವಲ್ಲದೆ ತಾಲ್ಲೂಕು ವ್ಯಾಪ್ತಿಯಲ್ಲಿಯೂ ಸೇವೆಗೆ ಲಭ್ಯವಾಗಲಿವೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಲತ್ಯಾಜ್ಯ ಸಂಸ್ಕರಣಾ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಇತರ ಜಿಲ್ಲೆಗಳಲ್ಲೂ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ಈ ವಾಹನದ ಸೌಲಭ್ಯ ದೊರೆಯಲಿದೆ.

” ಕುಟ್ಟ, ನಾಪೋಕ್ಲು, ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಮಲ ತ್ಯಾಜ್ಯ ನಿರ್ವಹಣೆ ಬಹುತೇಕ ಈಗಾಗಲೇ ಉತ್ತಮವಾಗಿದೆ. ಈಗಾಗಲೇ ಭಾಗಮಂಡಲ ಮತ್ತು ಸುಂಟಿಕೊಪ್ಪದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಬ್ಲಾಕ್ ವಾಟರ್ ಮತ್ತು ಗ್ರೇ ವಾಟರ್ ಸ್ವಚ್ಛತೆಗಾಗಿ ೩ ವಾಹನಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಸ್ವಚ್ಛ ಭಾರತ್ ಕೋಶ್ ಟ್ರಸ್ಟ್‌ನಿಂದ ವಾಹನಗಳ ವ್ಯವಸ್ಥೆಯಾಗಿದ್ದು, ಸ್ಥಳದಲ್ಲೇ ಮಲತಾಜ್ಯ ಸಂಸ್ಕರಣೆಯಾಗುತ್ತಿದೆ.”

-ಆನಂದ್ ಪ್ರಕಾಶ್ ಮೀನಾ, ಸಿಇಒ, ಕೊಡಗು ಜಿ.ಪಂ.

Tags:
error: Content is protected !!