ಆರ್.ಟಿ.ವಿಠ್ಠಲಮೂರ್ತಿ
ಸದ್ಯದಲ್ಲೇ ದಿಲ್ಲಿಗೆ ತೆರಳಿ ಆಹ್ವಾನ ನೀಡಲಿರುವ ಸಿಎಂ
ಸೆ.೨೨ರಂದು ಚಾಮುಂಡಿಬೆಟ್ಟದಲ್ಲಿ ದಸರೆಗೆ ಚಾಲನೆ
ಬೆಂಗಳೂರು: ಐತಿಹಾಸಿಕ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಈ ಬಾರಿ ಕಾಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕಿ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಸೋನಿಯಾ ಗಾಂಧಿ ಅವರಿಂದ ದಸರಾ ಮಹೋತ್ಸವವನ್ನು ಉದ್ಘಾಟನೆ ಮಾಡಿಸಲು ಸಿಎಂ ಸಿದ್ದರಾಮಯ್ಯ ಉತ್ಸುಕರಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಸೆ.೨೨ ರಂದು ಸೋನಿಯಾ ಗಾಂಧಿ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಿಧನದ ನಂತರ ಭಾರತದ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿರುವ ಸೋನಿಯಾ ಗಾಂಧಿ ಅವರು ೨೦೦೪ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಬಹುಮತ ಗಳಿಸಿದಾಗ, ದೇಶದ ಪ್ರಧಾನಿಯಾಗುವ ಅವಕಾಶ ಹೊಂದಿದ್ದರು.
ಈ ಸಂದರ್ಭದಲ್ಲಿ ಯಾರೆಷ್ಟೇ ವಿರೋಧ ಮಾಡಿದ್ದರೂ ಲೆಕ್ಕಿಸದೆ ಸೋನಿಯಾ ಗಾಂಧಿಯವರು ಪ್ರಧಾನಿಯಾಗಲು ಬಯಸಿದ್ದರೆ ನಿರಾಯಾಸವಾಗಿ ಅವರು ಪ್ರಧಾನ ಮಂತ್ರಿ ಹುದ್ದೆಗೆ ಏರಬಹುದಿತ್ತು.
ಆದರೆ ತಮ್ಮ ವಿದೇಶಿ ಮೂಲದ ಬಗ್ಗೆ ವಿರೋಧ ಪಕ್ಷ ಬಿಜೆಪಿ ತಕರಾರು ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸೋನಿಯಾ ಗಾಂಧಿ ಅವರು, ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದ್ದಲ್ಲದೆ, ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದ ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಗದ್ದುಗೆಯ ಮೇಲೆ ಕೂರಿಸಿದರು.
ಇದಾದ ನಂತರ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿ ಅವರ ಕೈಗೊಂಬೆ ಎಂದು ದೇಶದ ಪ್ರತಿಪಕ್ಷಗಳು ನಿರಂತರವಾಗಿ ಟೀಕೆ ಮಾಡುತ್ತಾ ಬಂದರೂ ಲೆಕ್ಕಿಸದ ಸೋನಿಯಾ ಗಾಂಧಿ ಅವರು, ೨೦೦೪ರಲ್ಲಿ ಮಾತ್ರವಲ್ಲದೆ ೨೦೦೯ರಲ್ಲೂ ಮರಳಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಗದ್ದುಗೆಯ ಮೇಲೆ ಕೂರಿಸುವಲ್ಲಿ ಯಶಸ್ವಿಯಾಗಿದ್ದರು.
ಹೀಗೆ ತಮ್ಮ ಬದುಕಿನುದ್ದಕ್ಕೂ ಅಽಕಾರದಿಂದ ದೂರವಿದ್ದ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸತತ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸುವಂತೆ ನೋಡಿಕೊಂಡಿದ್ದರು. ದಸರೆಯನ್ನು ಉದ್ಘಾಟಿಸಲು ಬರುವಂತೆ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯದಲ್ಲೇ ದಿಲ್ಲಿಗೆ ತೆರಳಲಿದ್ದಾರೆ.
” ಅಧಿಕಾರವನ್ನು ತ್ಯಜಿಸಿ ರಾಜಕಾರಣದಲ್ಲುಳಿದ ಸೋನಿಯಾ ಗಾಂಧಿ ಅವರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಅವರಿಂದಲೇ ಈ ಬಾರಿಯ ದಸರೆಯನ್ನು ಉದ್ಘಾಟನೆ ಮಾಡಿಸಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಚನೆ ಎಂದು ಮೂಲಗಳು ಹೇಳಿವೆ”





