ನವೀನ್ ಡಿಸೋಜ
ಮಳೆ ಹಿನ್ನೆಲೆ; ಶಾಲಾ ಶೈಕ್ಷಣಿಕ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ; ಹೆಚ್ಚುವರಿ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಸೂಚನೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಮುಂದುವರಿದಿದ್ದು, ಸೋಮವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಭಾರೀ ಮಳೆಯ ಹಿನ್ನೆಲೆಯಲ್ಲಿ ಈವರೆಗೂ ೧೮ ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿದ್ದು, ಶೈಕ್ಷಣಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ರಜೆಯಿಂದ ಉಂಟಾಗಿರುವ ಶೈಕ್ಷಣಿಕ ವ್ಯತ್ಯಯವನ್ನು ಸರಿದೂಗಿಸಿಕೊಳ್ಳಲು ಪ್ರತಿ ಶನಿವಾರ ಮಧ್ಯಾಹ್ನದ ಬಳಿಕ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಹೀಗಾಗಿ ಶಾಲಾ ಆರಂಭ ಮೇ ೨೯ಕ್ಕೆ ಇದ್ದರೂ ಕೆಲವು ಶಾಲೆಗಳು ಮಾತ್ರ ಮೊದಲ ದಿನ ಆರಂಭವಾದವು. ಆ ಸಮಯದಲ್ಲಿ ಮಳೆ ಹೆಚ್ಚಿದ ಕಾರಣ ಪಾಠಗಳು ಆರಂಭವಾಗಲು ಇನ್ನೂ ಕೆಲವು ದಿನಗಳಿಡಿದವು. ಬಳಿಕ ನಿರಂತರ ಮಳೆಯಿಂದಾಗಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ರಜೆ ಘೋಷಿಸಿತು.
ಭಾರತೀಯ ಹವಾಮಾನ ಇಲಾಖೆಯಿಂದ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದಾಗೆಲ್ಲ ಶಾಲೆಗಳಿಗೆ ರಜೆ ನೀಡಲಾಗಿದೆ. ಹೀಗೆ ಶಾಲಾರಂಭವಾದ ಮೇ ೨೯ರಿಂದ ಆ.೧೮ರವರೆಗೆ ಜಿಲ್ಲೆಯಲ್ಲಿ ಒಟ್ಟು ೧೮ ದಿನಗಳ ಕಾಲ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇದರಿಂದ ಪಠ್ಯಚಟುವಟಿಕೆ ಗಳನ್ನು ನಿಗದಿತ ಶೈಕ್ಷಣಿಕ ಕ್ಯಾಲೆಂಡರ್ ಅನುಸಾರಪೂರೈಸಿ ಕೊಳ್ಳಲು ಗೊಂದಲವಾಗುತ್ತಿದ್ದು, ಶನಿವಾರ ಮಧ್ಯಾಹ್ನದ ಬಳಿಕವೂ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸಿಕೊಳ್ಳಲು ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.
ಈ ಬಾರಿ ಕಡಿಮೆ ತರಗತಿಗಳು ನಡೆದಿರುವುದು ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಶಿಕ್ಷಣ ತಜ್ಞರ ಅಭಿಮತ. ಈ ರಜೆಗಳನ್ನು ಸರಿದೂಗಿಸಿಕೊಳ್ಳಲು ಶನಿವಾರಗಳಂದು ಅರ್ಧ ದಿನ ಹೆಚ್ಚುವರಿ ತರಗತಿಗಳನ್ನು ನಡೆಸಿದರೂ ಅದು ಮಕ್ಕಳು ಮತ್ತು ಶಿಕ್ಷಕರಿಗೆ ಹೊರೆ, ಒತ್ತಡವಾಗಿ ಪರಿಣಮಿಸುವ ಸಾಧ್ಯತೆ ಇದೆ. ಅಲ್ಲದೇ ಒಟ್ಟಾರೆ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕೇರಳ ಮಾದರಿ ಚಿಂತನೆ…: ಪ್ರತಿ ಶೈಕ್ಷಣಿಕ ವರ್ಷದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತಿದೆ. ಇತ್ತೀಚೆಗೆ ಕೇರಳದ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಸಾಂಪ್ರದಾಯಿಕ ಏಪ್ರಿಲ್-ಮೇ ಬೇಸಿಗೆ ರಜೆಯ ಬದಲು ಜೂನ್ ಮತ್ತು ಜುಲೈನ ಮಳೆಗಾಲಕ್ಕೆ ಬದಲಾಯಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಕೊಡಗಿನ ವಿಚಾರದಲ್ಲೂ ಈ ಬದಲಾವಣೆ ಉತ್ತಮ ಎಂಬ ಅಭಿಪ್ರಾಯ ಪೋಷಕರು ಮತ್ತು ಶಿಕ್ಷಕ ವಲಯದಿಂದಲೂ ಕೇಳಿ ಬರುತ್ತಿದೆ.
” ಮಳೆಗಾಲದಲ್ಲಿ ನೀಡಲಾದ ರಜೆಯನ್ನು ಸರಿದೂಗಿಸಲು ಶಾಲಾ ಆಡಳಿತ ಮಂಡಳಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆ ಸೇರಿ ತೀರ್ಮಾನಿಸಿ ಶನಿವಾರ ಹೆಚ್ಚುವರಿ ತರಗತಿಗಳನ್ನು ನಡೆಸಬೇಕೆಂದು ಸೂಚಿಸಲಾಗಿದೆ. ರಜಾ ದಿನಗಳಲ್ಲಿನ ಪಾಠ ಪ್ರವಚನಗಳನ್ನು ಹೆಚ್ಚುವರಿ ತರಗತಿಗಳ ಮೂಲಕ ಸರಿದೂಗಿಸಿಕೊಳ್ಳುತ್ತೇವೆ. ಈಗಾಗಲೇ ಮಳೆ ಪರಿಸ್ಥಿತಿ ನೋಡಿಕೊಂಡು ಶನಿವಾರ ಮಧ್ಯಾಹ್ನದ ನಂತರ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.”
-ಸಿ.ರಂಗಧಾಮಯ್ಯ, ಶಿಕ್ಷಣ ಇಲಾಖೆ ಉಪನಿರ್ದೇಶಕ
” ನಮ್ಮ ಸಂಸ್ಥೆಯಲ್ಲಿ ಪ್ರತಿ ದಿನ ನಡೆಯುವ ಪಠ್ಯೇತರ ಚಟುವಟಿಕೆಗಳನ್ನು ಶನಿವಾರ ಮಧ್ಯಾಹ್ನ ನಡೆಸುವ ಮೂಲಕ ಉಳಿದ ದಿನಗಳಲ್ಲಿ ಪಠ್ಯ ಚಟುವಟಿಕೆಗೆ ಒತ್ತು ನೀಡುತ್ತೇವೆ. ಹಾಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ಕೇವಲ ಪಠ್ಯ ಚಟುವಟಿಕೆಗಳನ್ನೇ ನಡೆಸುವುದು ಮತ್ತು ಹೆಚ್ಚುವರಿ ತರಗತಿಗಳನ್ನು ನಡೆಸುವುದರಿಂದ ಮಕ್ಕಳಿಗೆ ಒತ್ತಡವಾಗುವ ಸಾಧ್ಯತೆ ಇದೆ. ಜಾಗತಿಕವಾಗಿ ಹವಾಮಾನ ಬದಲಾವಣೆಯಾಗುತ್ತಿದ್ದು, ಕೇರಳದಂತೆ ಬೇಸಿಗೆ ರಜೆಯನ್ನು ಬದಲಾವಣೆ ಮಾಡುವ ಚಿಂತನೆಯ ಅಗತ್ಯತೆಯೂ ಈಗ ಕಾಣುತ್ತಿದೆ.”
-ಬಿ.ಪಿ.ಬೋಪಣ್ಣ , ಪ್ರಾಂಶುಪಾಲರು, ಉದ್ಗಮ್ ವಿದ್ಯಾಸಂ





