Mysore
26
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಸಿಎಂ ತವರಿನಲ್ಲಿ ಸಂವಿಧಾನ ಶಿಲ್ಪಿ ಗ್ಯಾಲರಿ

ಪ್ರಶಾಂತ್ ಎಸ್.

ಅಂಬೇಡ್ಕರ್ ಪುಸ್ತಕ, ಛಾಯಾಚಿತ್ರಗಳ ಪ್ರದರ್ಶನ

ಎಚ್.ಸಿ.ಮಹದೇವಪ್ಪ ಪರಿಕಲ್ಪನೆಯಲ್ಲಿ ಹೊಸ ರೂಪ

೬೦ಕ್ಕೂ ಹೆಚ್ಚು ಪುಸ್ತಕ ಹಾಗೂ ೮೦ಕ್ಕೂ ಹೆಚ್ಚು ಛಾಯಾಚಿತ್ರ ಅಳವಡಿಕೆ 

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಡೆದು ಬಂದ ಹಾದಿ ಸೇರಿದಂತೆ ಸಂವಿಧಾನದ ಮಹತ್ವವನ್ನು ತಿಳಿಸಿ ಕೊಡುವಂತಹ ಅಂಬೇಡ್ಕರ್ ಪುಸ್ತಕ, ಛಾಯಾ ಚಿತ್ರಗಳ ಪ್ರದರ್ಶನ ಗ್ಯಾಲರಿಯನ್ನು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಮಾಡಲಾಗಿದೆ.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಘಟ್ಟಗಳನ್ನು ಬಿಂಬಿಸುವ ಮಾಹಿತಿ: ಈ ಪ್ರದರ್ಶನ ಗ್ಯಾಲರಿಯಲ್ಲಿ ಪುಸ್ತಕಗಳು ಹಾಗೂ ಫೋಟೊಗಳ ಮೂಲಕ ಅವರ ಸಾಧನೆಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಅವರ ಜೀವನದ ಪ್ರಮುಖ ಘಟ್ಟಗಳನ್ನು ಬಿಂಬಿಸುವ ಫೋಟೊಗಳು ಇಲ್ಲಿನ ಗೋಡೆಗಳ ಮೇಲೆ ತೂಗುತ್ತಿವೆ. ಧರ್ಮ ಇರುವುದು ಮನುಷ್ಯರಿಗಾಗಿ, ಧರ್ಮಕ್ಕಾಗಿ ಮನು ಷ್ಯರು ಅಲ್ಲ ಎಂಬಿತ್ಯಾದಿ ಅವರ ಹೇಳಿಕೆಗಳನ್ನು ಕೂಡ ಅಂಬೇಡ್ಕರ್ ಅವರ ಫೋಟೊಸಹಿತ ಪ್ರೇಮ್ ಮಾಡಿ ಅಳವಡಿಸಲಾಗಿದೆ.

ಅಂಬೇಡ್ಕರ್ ಹೆಸರಿನಲ್ಲಿ ಪುಸ್ತಕಗಳು: ವಿವಿಧ ಕೆಲಸಗಳಿಗಾಗಿ ಜಿಲ್ಲೆಯ ವಿವಿಧೆಡೆಯಿಂದ ಸಾರ್ವಜನಿಕರು ಜಂಟಿ ನಿರ್ದೇಶಕರ ಕಚೇರಿಗೆ ಬರುತ್ತಾರೆ. ಹೀಗೆ ಬಂದವರಿಗೆ ಅಂಬೇಡ್ಕರ್‌ರನ್ನು ಪರಿಚಯಿಸಲು ಆಕರ್ಷಣೀಯವಾಗಿ ಗ್ರಂಥಾಲಯ ರಚನೆ ಮಾಡಲಾಗಿದ್ದು ಸಮಯ ಇರುವವರು ಓದಿ ಕೊಳ್ಳಲೆಂದು ಪುಸ್ತಕಗಳನ್ನು ಇರಿಸಲಾಗಿದೆ. ಕಚೇರಿ ಒಳಾವರಣದಲ್ಲಿರುವ ಪುಸ್ತಕಗಳಲ್ಲಿ ‘ಅಂಬೇಡ್ಕರ್’ ಎಂಬ ಶೀರ್ಷಿಕೆಯಲ್ಲಿ ಎರಡು ಸ್ಟ್ಯಾಂಡ್‌ಗಳನ್ನು ಇಡಲಾಗಿದ್ದು ಅವು ಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತು ಹಲವು ಲೇಖಕರು ಬರೆದಿರುವ ಪುಸ್ತಕಗಳನ್ನು ಪರಾಮರ್ಶನಕ್ಕೆ ಇಡಲಾಗಿದೆ.

ಸಾರ್ವಜನಿಕರಿಗೆ ಅಂಬೇಡ್ಕರ್ ಗ್ಯಾಲರಿ : ೬೦ಕ್ಕೂ ಹೆಚ್ಚು ಪುಸ್ತಕ ಹಾಗೂ ೮೦ಕ್ಕೂ ಹೆಚ್ಚು ಫೋಟೊಗಳನ್ನು ಇಡಲಾಗಿದ್ದು, ಒಂದು ರೀತಿಯಲ್ಲಿ ಅಂಬೇಡ್ಕರ್ ಗ್ಯಾಲರಿಯನ್ನೇ ಮಾಡಿದ್ದೇವೆ. ಪುಸ್ತಕಗಳನ್ನು ಓದುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಯಾವುದಾದರೂ ಪುಸ್ತಕ ಇಷ್ಟವಾದರೆ ಆಸಕ್ತರು ಮನೆಗೆ ಕೊಂಡೊಯ್ದು ಓದಲು ಎರವಲು ಕೊಡಲಾಗುವುದು. ಅಂಥವರು ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಫೋನ್ ಸಂಖ್ಯೆ ನೀಡಿ, ಪುಸ್ತಕವನ್ನು ಕೊಂಡೊಯ್ದು ಓದಿ ವಾಪಸ್ ತಂದುಕೊಡಬಹುದು.

” ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೊಗಳು, ಪುಸ್ತಕಗಳನ್ನು ಇಲಾಖೆಯ ವೆಚ್ಚದಲ್ಲಿ ಖರೀದಿಸಲಾಗಿದೆ. ಕೆಲವು ಪುಸ್ತಕಗಳನ್ನು ಕೆಲ ವಾರ್ಡನ್‌ಗಳು ನೀಡಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತು ಹಲವು ಲೇಖಕರು ಬರೆದಿರುವ ಪುಸ್ತಕಗಳು ಹಾಗೂ ಸಂವಿಧಾನ ಪೀಠಿಕೆಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಅವುಗಳನ್ನು ಯಾರು ಬೇಕಾದರೂ ತೆಗೆದುಕೊಂಡು ಓದಬಹುದಾಗಿದೆ.”

-ಬಿ. ರಂಗೇಗೌಡ, ಜಂಟಿ ನಿರ್ದೇಶಕ, ಸಮಾಜಕಲ್ಯಾಣ ಇಲಾಖೆ.

” ಸಂವಿಧಾನ ಪೀಠಿಕೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ನಡೆದು ಬಂದ ದಾರಿ ಆಧಾರಿತವಾದ ಪುಸ್ತಕಗಳು ಹಾಗೂ ಫೋಟೋಗಳನ್ನು ಪ್ರದರ್ಶನ ಮಾಡಿರುವುದು ತುಂಬಾ ವಿಶೇಷವಾಗಿದೆ. ಕಚೇರಿಗೆ ಬಂದ ಸಂದರ್ಶಕರಿಗೆ ಅವರ ಬಗ್ಗೆ ತಿಳಿದುಕೊಳ್ಳುವಂತಹ ನೂತನ ಚಿಂತನೆ ಮಾಡಿರುವ ಸಮಾಜ ಕಲ್ಯಾಣ ಇಲಾಖೆಯ ಕೆಲಸ ನಿಜಕ್ಕೂ ಶ್ಲಾಘನೀಯ.”

-ವನಸಿರಿ ಉಮೇಶ್, ಕೆ.ಎಂ.ಹಳ್ಳಿ

Tags:
error: Content is protected !!