ಹೊಸದಿಲ್ಲಿ : ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಮೂರು ಸೇನಾಪಡೆಗಳು ಗೌರವ ಸಲ್ಲಿಸಿದವು. ಇದಕ್ಕೂ ಮುನ್ನ ರಾಜ್‌ಘಾಟ್‌ಗೆ ತೆರಳಿ ಮೋದಿ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದ ನಂತರ ಐಎಎಫ್ ನ ಎರಡು ಹೆಲಿಕಾಪ್ಟರ್ ಪುಷ್ಪವೃಷ್ಟಿ ಮಾಡಿತು. ಒಂದು ಹೆಲಿಕಾಪ್ಟರ್ ಧ್ವಜದೊಂದಿಗೆ ಹಾರಿದರೆ, ಇನ್ನೊಂದು ಹೆಲಿಕಾಪ್ಟರ್ ಆಪರೇಷನ್ ಸಿಂಧೂರ್ ಬ್ಯಾನರ್ ಅನ್ನು ಪ್ರದರ್ಶಿಸಿತು.
ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದಾರೆ.





