ಕೆ.ಆರ್.ಪೇಟೆ : ತಾಲ್ಲೂಕಿನ ಬೇಲದಕೆರೆ ಗ್ರಾಮದಲ್ಲಿ ಮೊನ್ನೆ ಸುರಿದ ಭಾರೀ ಮಳೆಗೆ ಮನೆಯೊಂದು ಗೋಡೆ ಸಮೇತ ನೆಲಸಮಗೊಂಡಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಶೀಳನೆರೆ ಹೋಬಳಿಯ ಬೇಲದಕೆರೆ ಗ್ರಾಮದ ಲೇಟ್ ಬೆಟ್ಟಯ್ಯ ಅವರ ಪುತ್ರ ಶ್ರೀಧರ್ ಎಂಬವರ ಮನೆಯು ಭಾರೀ ಮಳೆಗೆ ಗೋಡೆ ಸಮೇತ ಕುಸಿದು ಬಿದ್ದಿದೆ. ಮನೆ ಕುಸಿದು ಬಿದ್ದಿರುವ ವಿಚಾರ ತಿಳಿದ ತಕ್ಷಣ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಮನೆಯವರಿಂದ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದು, ವಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಳಿಕ ಅಧಿಕಾರಿಗಳೊಂದಿಗೆ ನಷ್ಟ ಪರಿಶೀಲಿಸಿದ ಅವರು, ಪ್ರಕೃತಿಯ ವಿಕೋಪಕ್ಕೆ ತುತ್ತಾದ ಪ್ರಕರಣಗಳಿಗೆ ಸರ್ಕಾರವು ವೈಜ್ಞಾನಿಕ ಪರಿಹಾರ ನೀಡಲು ಕ್ರಮ ವಹಿಸಬೇಕು. ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದರೆ ಕೇವಲ ಐದಾರು ಸಾವಿರ ರೂ. ಪರಿಹಾರದ ಚೆಕ್ ನೀಡಿ ರೈತರಿಗೆ ಅವಮಾನ ಮಾಡಬಾರದು ಎಂದು ಹೇಳುವ ಮೂಲಕ ಈ ಹಿಂದೆ ಹಲವು ಮನೆಗಳು ಮಳೆಯಿಂದ ನಷ್ಟಕ್ಕೆ ಒಳಗಾದ ಪ್ರಕರಣದಲ್ಲಿ ಮೂರು ಸಾವಿರ, ಐದು ಸಾವಿರ ಪರಿಹಾರ ನೀಡಿದ್ದಾರೆ. ಆಗ ಲಕ್ಷಾಂತರ ರೂ. ಮೌಲ್ಯದ ಮನೆ ಕಳೆದುಕೊಂಡ ರೈತರು ಐದು ಸಾವಿರ ಪರಿಹಾರದ ಚೆಕ್ ನೋಡಿ ವಾಪಸ್ ಅಧಿಕಾರಿಗಳಿಗೆ ನೀಡಿರುವ ಘಟನೆ ನಡೆದಿದೆ. ಹಾಗಾಗಿ ಮಳೆಯಿಂದ ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡವರಿಗೆ ಕನಿಷ್ಠ 1 ಲಕ್ಷ ರೂ ಪರಿಹಾರವನ್ನಾದರೂ ನೀಡುವ ಮೂಲಕ ರೈತರಿಗೆ ಆಸರೆಯಾಗಬೇಕು ಎಂದು ಸರ್ಕಾರವನ್ನು ಶಾಸಕರು ಒತ್ತಾಯ ಮಾಡಿದರು.
ಈ ವೇಳೆ ಶೀಳನೆರೆ ಹೋಬಳಿ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ಮಧುಕುಮಾರ್, ಗ್ರಾ.ಪಂ.ಅಧ್ಯಕ್ಷ ಅಶೋಕ್, ತಾ.ಪಂ.ಮಾಜಿ ಸದಸ್ಯರಾದ ವಿಜಯಲಕ್ಷಿ ಮಂಜೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಪಾಪೇಗೌಡ, ಮುಖಂಡರಾದ ನಂಜಪ್ಪ, ಕೃಷ್ಣೇಗೌಡ, ಮರೀಗೌಡ ಮತ್ತಿತರರು ಉಪಸ್ಥಿತರಿದ್ದರು.





