ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಐದು ಯುದ್ಧ ವಿಮಾನ ಹಾಗೂ 1 ಏರ್‌ಕ್ರಾಫ್ಟ್ ಹೊಡೆದುರುಳಿಸಿದ್ದೇವೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭಾರತದ ವಾಯು ರಕ್ಷಣಾ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ ವ್ಯವಸ್ಥೆಗಳು ಐದು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಮತ್ತು ವಾಯುಗಾಮಿ ಕಣ್ಗಾವಲು, ಮುಂಚಿನ ಎಚ್ಚರಿಕೆಗಾಗಿ ವಿನ್ಯಾಸಗೊಳಿಸಲಾದ ವಿಶೇಷ ಮಿಲಿಟರಿ ವಿಮಾನವಾದ AEW&C/ELINT ವಿಮಾನವನ್ನು ನಾಶಪಡಿಸಿವೆ ಎಂದು ಹೇಳಿದ್ದಾರೆ.
ಜಕೋಬಾದಲ್ಲಿ ನಿಲ್ಲಿಸಲಾಗಿದ್ದ ಕೆಲವು F16 ಜೆಟ್‌ಗಳು ಹಾಗೂ ಭೋಲಾರಿಯಲ್ಲಿ AEW&C ಅನ್ನು ನಾಶಪಡಿಸಲಾಗಿದೆ ಎಂದು ಹೇಳಿದರು.
ಹೆಚ್ಚಿನ ವಿವರಗಳ್ನನು ಬಹಿರಂಗಪಡಿಸಿದ ಐಎಎಫ್ ಮುಖ್ಯಸ್ಥರು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ಮೇ.7ರಂದು ಪ್ರತೀಕಾರ ತೀರಿಸಿಕೊಳ್ಳುವ ಮೊದಲು ಕಟ್ಟಡಗಳನ್ನು ಗುರುತಿಸಲಾಗಿತ್ತು ಎಂದು ಹೇಳಿದರು. ಭಾರತೀಯ ದಾಳಿಯಿಂದ ಉಂಟಾದ ಹಾನಿಯ ನಿಖರತೆಯನ್ನು ಉಪಗ್ರಹ ಚಿತ್ರಗಳ ಮೂಲಕ ಲೆಕ್ಕಹಾಕಲಾಗಿದೆ ಎಂದು ಹೇಳಿದರು.





