ನವೀನ್ ಡಿಸೋಜ
೫,೮೬೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ನಾಟಿ ಕಾರ್ಯ ಪೂರ್ಣ; ಅಗತ್ಯ ರಸಗೊಬ್ಬರ ದಾಸ್ತಾನು
ಮಡಿಕೇರಿ: ಕೆಲ ದಿನಗಳಿಂದ ಜಿಲ್ಲೆಯಲ್ಲಿ ಅಬ್ಬರಿಸಿದ್ದ ವರುಣ ಈಗ ಬಿಡುವು ನೀಡಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ ೫,೮೬೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ನಾಟಿ ಕಾರ್ಯ ಪೂರ್ಣಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳ ಬಿತ್ತನೆ ಕಾರ್ಯಗಳು ಪ್ರಗತಿಯಲ್ಲಿವೆ.
ಕಳೆದ ವಾರ ಸುರಿದ ಭಾರೀ ಮಳೆಯಿಂದ ಕೃಷಿ ಚಟುವಟಿಕೆಗೆ ಒಂದಷ್ಟು ಹಿನ್ನಡೆ ಉಂಟಾಯಿತಾದರೂ ಈಗ ಮಳೆ ಬಿಡುವು ನೀಡಿರುವುದರಿಂದ ಮತ್ತೆ ಕೃಷಿ ಚಟುವಟಿಕೆ ನಡೆಯುತ್ತಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದ್ದರೆ, ಇನ್ನು ಕೆಲ ಭಾಗಗಳಲ್ಲಿ ನಾಟಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ೩೦,೫೨೫ ಹೆಕ್ಟೇರ್ ಗುರಿ ಹೊಂದಲಾಗಿದೆ. ಸದ್ಯ ಇಲ್ಲಿಯವರೆಗೆ ೫,೮೬೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ನಾಟಿ ಕಾರ್ಯ ಪೂರ್ಣಗೊಂಡಿದೆ.
ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಾಫಿ ಬೆಳೆಗಳಿಗೆ ೨೦೨೫ನೇ ಸಾಲಿನ ಮುಂಗಾರು ಹಂಗಾಮಿಗೆ ಸುಮಾರು ೮೮,೬೭೭ ಮೆ. ಟನ್ ರಸಗೊಬ್ಬರಗಳ ಅವಶ್ಯಕತೆ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಏಪ್ರಿಲ್ ಮಾಹೆಯ ಆರಂಭಿಕ ದಾಸ್ತಾನು (ಕಾಪು ದಾಸ್ತಾನು ಸೇರಿ) ೩೫,೯೨೪ ಮೆ. ಟನ್ ಇದ್ದು, ಜುಲೈ ಅಂತ್ಯದವರೆಗೆ ೫೪,೫೨೦ ಮೆ. ಟನ್ ರಸಗೊಬ್ಬರ ವಿವಿಧ ತಯಾರಿಕಾ ಸಂಸ್ಥೆಗಳಿಂದ ಜಿಲ್ಲೆಗೆ ಸರಬರಾಜಾಗಿದೆ.
ಒಟ್ಟಾರೆಯಾಗಿ ಇಲ್ಲಿಯವರೆಗೆ ೯೦,೪೪೪ ಮೆ. ಟನ್ ರಸಗೊಬ್ಬರ ಜಿಲ್ಲೆಯ ರೈತರಿಗೆ ಲಭ್ಯವಿದ್ದು, ಸುಮಾರು ೬೦,೧೨೬ ಮೆ. ಟನ್ ರಸಗೊಬ್ಬರವನ್ನು ರೈತರಿಗೆ ವಿತರಣೆ, ಮಾರಾಟ ಮಾಡಲಾಗಿದೆ. ಬಾಕಿ ೩೦,೩೧೮ ಮೆ. ಟನ್ ರಸಗೊಬ್ಬರ ದಾಸ್ತಾನಿದೆ. ಯೂರಿಯಾ ೫,೮೫೫ ಮೆ. ಟನ್, ಡಿಎಪಿ ೧,೬೪೩ ಮೆ. ಟನ್, ಎಂಓಪಿ ೫,೫೨೬ ಮೆ. ಟನ್, ಎನ್ಪಿಕೆ ಕಾಂಪ್ಲೆಕ್ಸ್ ೧೬,೨೫೦ ಮೆ. ಟನ್ ಹಾಗೂ ಎಸ್‌ಎಸ್‌ಪಿ ೧,೦೪೩ ಮೆ. ಟನ್ ಗೊಬ್ಬರಗಳು ಜಿಲ್ಲೆಯಲ್ಲಿ ದಾಸ್ತಾನಿವೆ.
” ಕೊಡಗು ಜಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ೩೦,೫೨೫ ಹೆಕ್ಟೇರ್ ಗುರಿಯಲ್ಲಿ ಇಲ್ಲಿಯವರೆಗೆ ೫,೮೬೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, ನಾಟಿ ಕಾರ್ಯ ಪೂರ್ಣಗೊಂಡಿದೆ. ೮೮,೬೭೭ ಮೆ. ಟನ್ ರಸಗೊಬ್ಬರಗಳ ಅವಶ್ಯಕತೆ ಇದ್ದು, ಅಗತ್ಯವಿರುವಷ್ಟು ರಸಗೊಬ್ಬರ ಜಿಲ್ಲೆಯಲ್ಲಿ ದಾಸ್ತಾನಿದೆ. ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರಗಳ ಕೊರತೆಯಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಗಳ ಲಭ್ಯತೆ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ.”
-ಡಾ.ಚಂದ್ರಶೇಖರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಕೊಡಗು





