ಎಚ್.ಎಸ್.ದಿನೇಶ್ ಕುಮಾರ್
ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಸಿಕ್ಕಿದ್ದರಿಂದ ಎಚ್ಚೆತ್ತ ಪೊಲೀಸರು
ಇಷ್ಟು ದಿನ ಸುಮ್ಮನಿದ್ದ ಪೊಲೀಸರ ಬಗ್ಗೆ ಜನರಿಗೆ ಆಶ್ಚರ್ಯ!
೨ ವರ್ಷಗಳಲ್ಲಿ ೧೭೦ ಕೆಜಿ ಗೂ ಹೆಚ್ಚು ಗಾಂಜಾ ವಶ
ಮಾದಕ ವಸ್ತು ಮಾರಾಟಗಾರರಿಗೆ ಕಾಲೇಜುಗಳೇ ಟಾರ್ಗೆಟ್
ಮಾರುವವರು, ಸೇವಿಸುವವರ ಮೇಲೆ ಪೊಲೀಸ್ ಹದ್ದಿನಕಣ್ಣು
ಮೈಸೂರು: ನಗರದಲ್ಲಿ ಬೃಹತ್ ಎಂಡಿಎಂಎ ತಯಾ ರಿಕಾ ಘಟಕ ಪತ್ತೆಯಾಗಿದ್ದು, ಇದರಿಂದ ಎಚ್ಚೆತ್ತ ಪೊಲೀಸರು ಗಾಂಜಾ ಸೇವಿಸುವವರು, ಮಾರಾಟ ಮಾಡುವವರ ವಿರುದ್ಧ ಸಮರ ಸಾರಿದ್ದಾರೆ. ಈ ಸಂಬಂಧ ೪೦ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಈ ಪ್ರಮಾಣದಲ್ಲಿ ಇದ್ದರೂ, ಇಷ್ಟು ದಿನ ಪೊಲೀಸರೇಕೆ ಮೌನವಾಗಿದ್ದರು ಎಂಬುದು ಸಾರ್ವಜನಿಕರ ಆಶ್ಚರ್ಯ ಭರಿತ ಪ್ರಶ್ನೆಯಾಗಿದೆ.
ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದಕ್ಕೆ ಕಳೆದ ೨ ವರ್ಷಗಳ ಅವಧಿಯಲ್ಲಿ ಪೊಲೀಸರು ವಶಪಡಿಸಿ ಕೊಂಡಿ ರುವ ಮಾದಕ ವಸ್ತುಗಳ ಪ್ರಮಾಣವೇ ಸಾಕ್ಷಿ.
೨ ವರ್ಷಗಳ ಅವಧಿಯಲ್ಲಿ ೧೭೦ ಕೆ.ಜಿ.ಗೂ ಹೆಚ್ಚು ಗಾಂಜಾ ಹಾಗೂ ಕೆಜಿಗಟ್ಟಲೆ ಎಂಡಿಎಂಎಯನ್ನು ಜಪ್ತಿ ಮಾಡಿರುವ ಪೊಲೀಸರು, ಈ ಸಂಬಂಧ ೫೦ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಾಸ್ತವ ಹೀಗಿದ್ದರೂ ಪೊಲೀಸರು ಮಾದಕ ವಸ್ತುಗಳ ಮಾರಾಟಗಾರರು ಹಾಗೂ ಬಳಸುವವರ ವಿರುದ್ಧ ಗಂಭೀರ ಕ್ರಮಗಳನ್ನು ಏಕೆ ತೆಗೆದುಕೊಳ್ಳಲಿಲ್ಲ ಎಂಬುದೇ ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಪೊಲೀಸರೇ ಉತ್ತರ ನೀಡಬೇಕಿದೆ.
ಮುಂಬೈ ಪೊಲೀಸರು ಮೈಸೂರಿಗೆ ಬಂದು ಶೆಡ್ ಒಂದರ ಮೇಲೆ ದಾಳಿ ನಡೆಸಿ ೩೯೦ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಐದು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಿಂದ ಮೈಸೂರು ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿಯನ್ನೇ ಮಾಡಿದೆ.
ಘಟನೆಯಿಂದ ಮುಜುಗರಕ್ಕೆ ಒಳಗಾದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾರುವವರು ಹಾಗೂಬಳಸುವವರನ್ನು ಕೂಡಲೇ ಪತ್ತೆಹಚ್ಚಿ ಎಂದು ತಾಕೀತು ಮಾಡಿದ್ದಾರೆ.
ಆಯುಕ್ತರ ಸಿಟ್ಟಿನಿಂದ ಆತಂಕಕ್ಕೆ ಒಳಗಾದ ನಗರ ವ್ಯಾಪ್ತಿಯ ಎಲ್ಲಾ ಠಾಣೆಗಳ ಪೊಲೀಸರು, ದಿಢೀರ್ ಕಾರ್ಯಾಚರಣೆ ಆರಂಭಿಸಿದ್ದಾರೆ. ತಮ್ಮ ವ್ಯಾಪ್ತಿಯ ಉದ್ಯಾನವನಗಳು, ಸ್ಮಶಾನಗಳು, ಖಾಲಿ ನಿವೇಶನಗಳು… ಹೀಗೆ ಎಲ್ಲೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಕೇವಲ ಎರಡು ದಿನಗಳ ಅಂತರದಲ್ಲಿ ನಗದ ವಿವಿಧೆಡೆ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತಿದ್ದ ೧೦ ಮಂದಿಯನ್ನು ಬಂಧಿಸಲಾಗಿದೆ.
ಮಾದಕ ವಸ್ತು ಸೇವನೆ ಮಾಡುತ್ತಿದ್ದ ೫೦ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇದು ಶ್ಲಾಘನೀಯ. ಆದರೆ, ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲ ಹಾಗೂ ಬಳಸುವವರ ಸಂಖ್ಯೆ ಹೆಚ್ಚಾಗಿರುವುದು ಇಷ್ಟು ದಿನ ಪೊಲೀಸರಿಗೆ ಗೊತ್ತಿರಲಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಕಾಲಕಾಲಕ್ಕೆ ಪರಿಶೀಲನೆ ನಡೆಸಿದ್ದಲ್ಲಿ ಇಂತಹ ಬೃಹತ್ ಜಾಲ ಮೈಸೂರಿನತ್ತ ಮುಖ ಮಾಡಲು ಧೈರ್ಯ ತೋರುತ್ತಿರಲಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದ ಪೆಡ್ಲರ್, ಮಾದಕ ವಸ್ತುಗಳ ತಯಾರಿಕೆಗೆ ಮೈಸೂರು ಕೂಡ ಸೇಫ್ ಎಂದು ಹೇಳಿರುವುದನ್ನು ಇಲ್ಲಿನ ಠಾಣಾಧಿಕಾರಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಅವರೇ ಆಲೋಚಿಸಬೇಕು ಎಂದು ಜನರು ಮಾತನಾಡುತ್ತಾರೆ.
ಈ ಎಲ್ಲಾ ಘಟನೆಗಳ ನಂತರ ಮಾದಕ ವಸ್ತು ಮಾರಾಟ ಹಾಗೂ ಸೇವನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಅಂತಹವರನ್ನು ಮಟ್ಟಹಾಕಲು ತೀರ್ಮಾನಿಸಿದೆ. ಸೆನ್ ಠಾಣೆಯ ಪೊಲೀಸರು, ಸಿಸಿಬಿ ಹಾಗೂ ಠಾಣಾ ಮಟ್ಟದಲ್ಲಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುವ ಮೂಲಕ ಗಾಂಜಾ ಮಾರಾಟಗಾರರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ.
ಹೊರ ಜಿಲ್ಲೆಗಳಿಂದ ಮಾದಕ ವಸ್ತು: ಗಾಂಜಾವನ್ನು ಕೆಲ ಹಳ್ಳಿಗಳಲ್ಲಿ ಗುಟ್ಟಾಗಿ ಬೆಳೆಯುತ್ತಾರೆ. ಚೆಂಡು ಹೂವಿನ ತೋಟದ ಮಧ್ಯೆ ಅಥವಾ ಮನೆಯ ಹಿತ್ತಲಿನಲ್ಲಿ ಬೆಳೆಯುವವರ ಸಂಖ್ಯೆ ಹೆಚ್ಚು. ಅಂತಹವರು ಗಾಂಜಾ ಮಾರಾಟಗಾರರ ಜೊತೆ ಸಂಪರ್ಕ ಹೊಂದಿರುತ್ತಾರೆ. ಇನ್ನು ಎಂಡಿಎಂಎ ಮುಂತಾದ ಮಾದಕ ವಸ್ತುಗಳು ಇತರೇ ರಾಜ್ಯಗಳಿಂದ ಸರಬರಾಜಾಗುತ್ತವೆ.
ಕಾಲೇಜುಗಳೇ ಟಾರ್ಗೆಟ್: ನಗರದ ಪ್ರತಿಷ್ಠಿತ ಕಾಲೇಜುಗಳೇ ಮಾದಕ ವಸ್ತುಗಳ ಮಾರಾಟಗಾರರ ಟಾರ್ಗೆಟ್. ಕಾಲೇಜು ಮುಂದೆ ಅಡ್ಡಾಡುವ ಪೆಡ್ಲರ್‌ಗಳು ಅಲ್ಲಿನ ಟೀ ಶಾಪ್, ಸಣ್ಣ ಹೋಟೆಲ್ ಕೆಲಸಗಾರರ ಮೂಲಕ ವಿದ್ಯಾರ್ಥಿಗಳಿಗೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮಾಡುತ್ತಾರೆ.
ವಿದ್ಯಾರ್ಥಿಗಳೇ ಏಜೆಂಟ್: ಇದು ಮಾತ್ರ ಆತಂಕಕಾರಿ ಬೆಳವಣಿಗೆ. ಒಮ್ಮೆ ಗಾಂಜಾ ಸೇವನೆಯ ಚಟಕ್ಕೆ ಬೀಳುವ ವಿದ್ಯಾರ್ಥಿಯು ತನ್ನ ಸಹಪಾಠಿಯನ್ನೂ ಚಟಕ್ಕೆ ಬೀಳಿಸುವ ಯತ್ನ ಮಾಡುತ್ತಾನೆ. ಅದು ಯಶಸ್ವಿಯಾದಲ್ಲಿ ಮತ್ತೊಬ್ಬ, ಮಗದೊಬ್ಬ ಎಂಬಂತೆ ಚಟವನ್ನು ಅಂಟಿಸಿಕೊಳ್ಳುತ್ತಾರೆ. ಈ ವೇಳೆ ಪೆಡ್ಲರ್ ಜೊತೆ ನಂಟು ಬೆಳೆಸಿಕೊಳ್ಳುವ ವಿದ್ಯಾರ್ಥಿಯೇ ಗಾಂಜಾ ಮಾರಾಟಕ್ಕೆ ಮಧ್ಯವರ್ತಿಯಾಗುತ್ತಾನೆ.
ಮಾದಕ ವಸ್ತು ತಡೆಗೆ ಏನು ಮಾಡಬೇಕು?:
* ಮಾದಕ ವಸ್ತುಗಳು ಹೆಚ್ಚು ಮಾರಾಟವಾಗುವ ಸ್ಥಳಗಳನ್ನು ಗುರುತಿಸಬೇಕು. ಅಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕು.
* ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಂಶಯ ಬಂದ ವಿದ್ಯಾರ್ಥಿಗಳ ಬಗ್ಗೆ ನಿಗಾ ಇಡಬೇಕು, ಪೋಷಕರಿಗೆ ಮಾಹಿತಿ ನೀಡಬೇಕು
* ಶಿಕ್ಷಣ ಸಂಸ್ಥೆಗಳು ಮಾದಕ ವಸ್ತುಗಳ ಬಳಕೆ ವಿರುದ್ಧ ಆಗಾಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು
* ಮಾನಸಿಕ ತಜ್ಞರಿಂದ ಶಾಲಾ, ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕವಾಗಿ ಉಪನ್ಯಾಸಗಳನ್ನು ಏರ್ಪಡಿಸಬೇಕು
* ಹೊರ ದೇಶದ ವಿದ್ಯಾರ್ಥಿಗಳು ವಾಸಿಸುವ ಸ್ಥಳ ಹಾಗೂ ಹಾಸ್ಟೆಲ್‌ಗಳ ಮೇಲೆ ನಿಗಾ ವಹಿಸಬೇಕು
* ಆಯಾ ಠಾಣಾ ಮಟ್ಟದ ಪೊಲೀಸರು ತಿಂಗಳಿನಲ್ಲಿ ಒಮ್ಮೆಯಾದರೂ ಹಾಸ್ಟೆಲ್‌ಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು
* ಪೋಷಕರು ಮಕ್ಕಳ ಬಗ್ಗೆ ಅತಿಯಾದ ನಂಬಿಕೆ ಇಡುವ ಬದಲು ಆಗಿಂದಾಗ್ಗೆ ಕಾಲೇಜಿಗೆ ತೆರಳಿ ಮಕ್ಕಳ ಬಗ್ಗೆ ಮಾಹಿತಿ ಪಡೆಯಬೇಕು.
” ಗಾಂಜಾ ಹಾಗೂ ಮಾದಕ ವಸ್ತುಗಳ ಮಾರಾಟ ಹಾಗೂ ಸೇವಿಸುವವರ ಬಗ್ಗೆ ಇಲಾಖೆ ಹದ್ದಿನ ಕಣ್ಣಿರಿಸಿದೆ. ಮಾದಕ ವಸ್ತು ಮಾರಾಟ ಮಾಡುವವನು ಸಿಕ್ಕಿಬಿದ್ದರೆ, ಆತನನ್ನು ವಿಚಾರಣೆಗೊಳಪಡಿಸಿ ಅದರ ಮೂಲವನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಸಂಬಂಧ ಸಾರ್ವಜನಿಕರೂ ನಮಗೆ ಮಾಹಿತಿ ಒದಗಿಸಿದಲ್ಲಿ ಅನುಕೂಲವಾಗುತ್ತದೆ.”
-ಸೀಮಾ ಲಾಟ್ಕರ್, ಪೊಲೀಸ್ ಆಯುಕ್ತರು





