ಮೈಸೂರಿನ ರಾಮಸ್ವಾಮಿ ವೃತ್ತದ ಮೂಲಕ ಪ್ರತಿನಿತ್ಯ ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಸಾವಿರಾರು ಜನರು ನಗರ ಸಾರಿಗೆ ಬಸ್‌ಗಳ ಮೂಲಕ ಸಂಚರಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್ಗಳ ಚಾಲಕರು ಇಲ್ಲಿನ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡದೆ ಹಾಗೆಯೇ ಹೋಗುತ್ತಾರೆ.
ರಾಮಸ್ವಾಮಿ ವೃತ್ತದ ಮೂಲಕ ಸಂಚರಿಸುವ ಬಹುತೇಕ ಬಸ್‌ಗಳು ನಿಲುಗಡೆಯಾಗದೇ ಇರುವುದರಿಂದ ಸಿಟಿ ಬಸ್ ನಿಲ್ದಾಣ, ಗ್ರಾಮಾಂತರ ಬಸ್ ನಿಲ್ದಾಣಕ್ಕೆ ತೆರಳಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸದ್ವಿದ್ಯಾ ಕಾಲೇಜು, ಮರಿಮಲ್ಲಪ್ಪ ಕಾಲೇಜು , ಮಹಾರಾಣಿ ಕಾಲೇಜು, ಹಾರ್ಡ್ವಿಕ್ ಕಾಲೇಜು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಬಸ್ ಇಲ್ಲದೇ ಪರಿತಪಿಸುವಂತಾಗಿದೆ. ಮಧ್ಯಾಹ್ನ ೩ರಿಂದ ಸಂಜೆ ೫ರವರೆಗೂ ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್‌ಗಳನ್ನು ನಿಲ್ಲಿಸುವುದೇ ಇಲ್ಲ.
ಈ ಬಗ್ಗೆ ಮೈಸೂರು ನಗರ ಸಾರಿಗೆ ವಿಭಾಗೀಯ ನಿಯಂತ್ರಕರಿಗೆ ದೂರು ನೀಡಿದರೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು, ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳುತ್ತಾರೆಯೇ ಹೊರತು, ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಈಗಲಾದರೂ ರಾಮಸ್ವಾಮಿ ವೃತ್ತದ ಬಸ್ ನಿಲ್ದಾಣದಲ್ಲಿ ಪ್ರತಿಯೊಂದು ನಗರ ಸಾರಿಗೆ ಬಸ್ಸನ್ನೂ ನಿಲುಗಡೆ ಮಾಡುವ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಅನಿರುದ್ಧ, ಮೈಸೂರು
.





