Mysore
20
few clouds

Social Media

ಶುಕ್ರವಾರ, 09 ಜನವರಿ 2026
Light
Dark

ಶಾಲೆ ಆವರಣಕ್ಕೆ ನುಗ್ಗುತ್ತಿದೆ ಕೊಳಚೆ ನೀರು

ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರದ ಗೌತಮ ಪ್ರೌಢಶಾಲೆಯ ಮುಂಭಾಗದ ದೊಡ್ಡ ಚರಂಡಿಯನ್ನು ಸ್ವಚ್ಛಗೊಳಿಸದೆ ಕೊಳಚೆ ನೀರು ಶಾಲೆಯ ಆವರಣಕ್ಕೆ ನುಗ್ಗುತ್ತಿದೆ.

ಗ್ರಾಮದ ಕೆಲವು ಬೀದಿಗಳ ನೀರು ಹರಿದು ಹೋಗಲು ನಿರ್ಮಿಸಿರುವ ಚರಂಡಿಯು ಗೌತಮ ಪ್ರೌಢಶಾಲೆಯ ಆವರಣವನ್ನು ಹಾದು ಹೋಗಿದೆ. ಗ್ರಾಮದ ಅಂಚಿನಲ್ಲಿರುವ ಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಇರುವ ಚರಂಡಿಯನ್ನು ೬ ತಿಂಗಳಿಂದಲೂ ಸ್ವಚ್ಛಗೊಳಿಸಿಲ್ಲ.

ಚರಂಡಿಯಲ್ಲಿ ಕೊಳಚೆ ಹೂಳು ತುಂಬಿಕೊಂಡಿದೆ. ಚರಂಡಿ ಒಳಗೆ ಮತ್ತು ಎಡ, ಬಲ ಬದಿಗಳಲ್ಲಿ ಪಾರ್ಥೇನಿಯಂ ಹಾಗೂ ಇತರೆ ಕಳೆ ಗಿಡಗಳು ಮಂಡಿಯುದ್ದ ಬೆಳೆದು ನಿಂತಿವೆ. ಪರಿಣಾಮ ಕೊಳಚೆ ನೀರು ಸರಾಗವಾಗಿ ಮುಂದೆ ಹರಿಯದೆ ಸಂಗ್ರಹಗೊಂಡು ಶಾಲೆಯ ಆವರಣದತ್ತ ಹರಿಯತೊಡಗಿದೆ.

ಶಾಲೆಯ ವಿದ್ಯಾರ್ಥಿಗಳು ಆವರಣದಲ್ಲಿ ಬೆಳಿಗ್ಗೆ ಪ್ರಾರ್ಥನೆ ಮಾಡುತ್ತಾರೆ. ನಂತರ ಗ್ರೂಪ್ ಸ್ಟಡಿಯಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ ಆಟೋಟಗಳಲ್ಲಿ ತೊಡಗುತ್ತಾರೆ. ಚರಂಡಿಯ ಕೊಳಚೆ ನೀರಿನ ದುರ್ವಾಸನೆ ಸಹಿಸಿಕೊಳ್ಳ ಬೇಕಿದೆ. ಶಾಲೆಯ ಆವರಣದತ್ತಲೇ ನೀರು ನುಗ್ಗುತ್ತಿದೆ.

ಚರಂಡಿ ಸ್ವಚ್ಛಗೊಳ್ಳದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಬೆಳಗಿನ ಸಮಯವೇ ವಿದ್ಯಾರ್ಥಿಗಳಿಗೆ ಸೊಳ್ಳೆಗಳು ಕಚ್ಚುತ್ತಿವೆ. ಮುಂಗಾರು ಮಳೆಗಾಲವಾಗಿದ್ದು ಹೆಚ್ಚು ಗಾಳಿ ಬೀಸುತ್ತಿರುವುದರಿಂದ ಕೊಳಚೆಯ ದುರ್ವಾಸನೆ ತರಗತಿಗಳಿಗೂ ಹರಡಿದೆ. ಬೊಮ್ಮಲಾಪುರ ಗ್ರಾಮ ಪಂಚಾಯಿತಿ ಕೇಂದ್ರವೂ ಹೌದು. ಗೌತಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಬೊಮ್ಮಲಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಶಿಯಾ ಅವರಿಗೆ ಜೂನ್ ೧೭ ಮತ್ತು ಜುಲೈ ೮ರಂದು ೨ ಬಾರಿ ಚರಂಡಿಯನ್ನು ಸ್ವಚ್ಛ ಮಾಡಿಸಿಕೊಡಿ ಎಂದು ಮನವಿ ಸಲ್ಲಿಸಿ, ಕೋರಿದ್ದಾರೆ.

ಚರಂಡಿಯ ಹೂಳು ತೆಗೆಸಿ ಶುಚಿಗೊಳಿಸದೆ ಇರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪಿಡಿಒಗೆ ಮನವಿ ಸಲ್ಲಿಸಿ ಒಂದು ತಿಂಗಳಾಗಿದೆ. ಆದರೂ ಅವರು ನಿರ್ಲಕ್ಷ  ತಾಳಿದ್ಧಾರೆ. ಶಾಲೆಯ ವಿದ್ಯಾರ್ಥಿಗಳ ಹಿತ ಹಾಗೂ ಗ್ರಾಮದ ನೈರ್ಮಲ್ಯಕ್ಕೆ ಗ್ರಾಪಂ ಆದ್ಯತೆ ನೀಡುತ್ತಿಲ್ಲ ಎಂದು ಪೋಷಕರು ಹಾಗೂ ಶಾಲೆಯ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಸ್ವಲ್ಪ ದಿನ ಕಾಯ್ದು ನೋಡುತ್ತೇವೆ. ಚರಂಡಿಯನ್ನು ಶುಚಿಗೊಳಿಸದಿದ್ದರೆ ಜಿಪಂ ಸಿಇಒ ಮೋನಾ ರೋತ್ ಮತ್ತು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ ಅವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

” ಬೊಮ್ಮಲಾಪುರ ಹಾಗೂ ಸುತ್ತಮುತ್ತ ಇತ್ತೀಚೆಗೆ ಮಳೆಯಾಗುತ್ತಿದೆ. ಇದರಿಂದಾಗಿ ಚರಂಡಿ ಸ್ವಚ್ಛತೆಗಾರರು ಕೆಲಸಕ್ಕೆ ಬರುತ್ತಿಲ್ಲ. ಆದ್ದರಿಂದ ವಿಳಂಬವಾಗಿದೆ. ವಿನಾಕಾರಣ ನಿರ್ಲಕ್ಷ ಮಾಡುತ್ತಿಲ್ಲ. ಇನ್ನು ೩-೪ ದಿನಗಳಲ್ಲಿ ಶುಚಿಗೊಳಿಸಲಾಗುವುದು.”

-ರಶಿಯಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಬೊಮ್ಮಲಾಪುರ.

” ನಮ್ಮ ಶಾಲೆಯ ಬಳಿ ಹಾದುಹೋಗಿರುವ ಚರಂಡಿಯನ್ನು ಶುಚಿ ಮಾಡಿಸಿಕೊಡಿ ಎಂದು ಪಿಡಿಒ ಅವರಿಗೆ ಒಂದು ತಿಂಗಳ ಹಿಂದೆಯೇ ಮನವಿ ಸಲ್ಲಿಸಿದ್ದೇನೆ. ಅವರು ಇತ್ತ ಗಮನಹರಿಸುತ್ತಿಲ್ಲ.”

-ಎಸ್.ವೀರಭದ್ರಯ್ಯ, ಮುಖ್ಯ ಶಿಕ್ಷಕರು, ಗೌತಮ ಪ್ರೌಢಶಾಲೆ.

Tags:
error: Content is protected !!