Mysore
17
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ತೈಲ ಆಮದು: ಭಾರತಕ್ಕೆ ಈಗ ನ್ಯಾಟೋ ಬೆದರಿಕೆ

ವಿದೇಶ ವಿಹಾರ

ಡಿ.ವಿ.ರಾಜಶೇಖರ 

ಯುಕ್ರೇನ್ ಬಿಕ್ಕಟ್ಟು ಬಗೆಹರಿಯದಿರುವುದು ತೈಲ ಆಮದಿಗೆ ಸಂಬಂಧಿಸಿದಂತೆ ಭಾರತಕ್ಕೆ ಮತ್ತೆ ಮತ್ತೆ ಸಮಸ್ಯೆ ತಂದೊಡ್ಡುತ್ತಿದೆ. ಯುಕ್ರೇನ್ ಯುದ್ಧ ಅಂತ್ಯಗೊಳಿಸುವ ದಿಸೆಯಲ್ಲಿ ಮುಂದಿನ ೫೦ ದಿನಗಳ ಒಳಗೆ ರಷ್ಯಾ ಶಾಂತಿಮಾತುಕತೆಗೆ ಮುಂದಾಗದಿದ್ದರೆ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಹಿನ್ನೆಲೆಯಲ್ಲಿ ಮತ್ತೆ ಸಮಸ್ಯೆ ಎದುರಾಗಿದೆ. ಅಮೆರಿಕದ ನಿರ್ಬಂಧಗಳ ಬೆದರಿಕೆ ಜೊತೆಗೆ ಇದೀಗ ನ್ಯಾಟೋ ಕೂಡ ಭಾರತ, ಚೀನಾ ಮತ್ತು ಬ್ರೆಜಿಲ್‌ಗೆ ಬೆದರಿಕೆ ಹಾಕಿದೆ.

ರಷ್ಯಾ ಶಾಂತಿಮಾತುಕತೆಗೆ ಮುಂದಾಗದಿದ್ದರೆ ಆಮದು ವಹಿವಾಟಿನ ಮೇಲೆ ಶೇ. ಐನೂರರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಅಂದರೆ ರಷ್ಯಾದ ಜೊತೆ ವಾಣಿಜ್ಯ ಬಾಂಧವ್ಯ ಹೊಂದಿರುವ ದೇಶಗಳ ಮೇಲೆ ಈ ಸುಂಕ ವಿಧಿಸುವುದು ಟ್ರಂಪ್ ಉದ್ದೇಶ. ರಷ್ಯಾದಿಂದ ಸಾಕಷ್ಟು ಪ್ರಮಾಣದಲ್ಲಿ ಭಾರತ, ಚೀನಾ ಮತ್ತು ಬ್ರೆಜಿಲ್ ತೈಲ ಆಮದು ಮಾಡಿಕೊಳ್ಳುತ್ತಿವೆ. ಹಾಗೆ ನೋಡಿದರೆ ರಿಯಾಯಿತಿ ದರಗಳಲ್ಲಿ ರಷ್ಯಾ ತೈಲ ಪೂರೈಸುತ್ತಿದೆ. ಈ ವಹಿವಾಟಿನಿಂದ ರಷ್ಯಾಕ್ಕೆ ಸಾಕಷ್ಟು ಆದಾಯವೂ ಬರುತ್ತಿದೆ. ಜೊತೆಗೆ ಅಧಿಕ ತೈಲದ ಬೇಡಿಕೆಯ ದಿನಗಳಲ್ಲಿ ಈ ಮೂರೂ ದೇಶಗಳ ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ.

ರಷ್ಯಾದ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದ್ದರೂ ಈ ವಹಿವಾಟಿನಿಂದಾಗಿ ರಷ್ಯಾ ಬಲಗುಂದಿಲ್ಲ. ಈ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಪರೋಕ್ಷವಾಗಿ ನೆರವಾಗುತ್ತಿರುವ ದೇಶಗಳ ಮೇಲೆ ನಿರ್ಬಂಧ ಹೇರಿದರೆ ಪರಿಣಾಮದ ತೀವ್ರತೆ ಹೆಚ್ಚಬಹುದೆಂಬ ಲೆಕ್ಕಾಚಾರದಿಂದ ಟ್ರಂಪ್ ಇದೀಗ ಹೊಸಪಟ್ಟು ಹಾಕಿದ್ದಾರೆ. ಯುಕ್ರೇನ್ ಯುದ್ಧ ನಿಲ್ಲಿಸುವಲ್ಲಿ ವಿಫಲವಾಗಿರುವ ಟ್ರಂಪ್ ರಷ್ಯಾಕ್ಕೆ ಪಾಠ ಕಲಿಸುವ ದಿಕ್ಕಿನಲ್ಲಿ ಯೋಚಿಸಲಾರಂಭಿಸಿದ್ದಾರೆ. ಯುಕ್ರೇನ್‌ಗೆ ಅಮೆರಿಕದ ಅತ್ಯಾಧುನಿಕ ಯುದ್ಧಾಸ್ತ್ರಗಳನ್ನು ನ್ಯಾಟೋ ಮುಖಾಂತರ ಪೂರೈಸಲು ಯೋಚಿಸುತ್ತಿದ್ದಾರೆ. ಅಮೆರಿಕದಿಂದ ಯೂರೋಪ್ ದೇಶಗಳು ಯುದ್ಧಾಸ್ತ್ರಗಳನ್ನು ಕೊಂಡು ಯುಕ್ರೇನ್‌ಗೆ ಪೂರೈಸುವುದು ಸದ್ಯದ ಆಲೋಚನೆ. ಇದರ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಮೇಲೆ ಒತ್ತಡ ಹೇರಲು ಅವರ ಮಿತ್ರ ದೇಶಗಳ ಮೇಲೆ ನಿರ್ಬಂಧಗಳನ್ನು ಹೇರುವುದು ಮತ್ತು ಆ ಮೂಲಕ ಅವರು ಶಾಂತಿಮಾತುಕತೆಗೆ ಮುಂದಾಗುವಂತೆ ಮಾಡುವುದು ಟ್ರಂಪ್ ಯೋಜನೆ.

ಟ್ರಂಪ್ ಘೋಷಣೆಯ ಬೆನ್ನಲ್ಲಿಯೇ ನ್ಯಾಟೋ ಕೂಡ ರಷ್ಯಾದ ಮಿತ್ರ ದೇಶಗಳಿಗೆ ಬೆದರಿಕೆ ಹಾಕಿದೆ. ಅಮೆರಿಕ ನ್ಯಾಟೋ ಮಿಲಿಟರಿ ಒಕ್ಕೂಟದ ಭಾಗವೇ ಆಗಿದ್ದರೂ ಯೂರೋಪಿನ ಇತರ ಸದಸ್ಯ ದೇಶಗಳು ಇಂಥ ಕ್ರಮಕ್ಕೆ ಮುಂದಾಗಿರಲಿಲ್ಲ. ಆದರೆ ನ್ಯಾಟೋ ಅಧ್ಯಕ್ಷ ಮಾರ್ಕ್ ರುಟ್ಟೇ ಟ್ರಂಪ್ ಅವರು ಘೋಷಿಸಿರುವ ನಿರ್ಬಂಧಗಳನ್ನು ಪುನರುಚ್ಛರಿಸಿದ್ದಾರೆ. ಅಂದರೆ ಅಮೆರಿಕ ಜೊತೆಗೆ ಯೂರೋಪ್ ಕೂಡ ಸೇರಿದಂತಾಗಿದೆ. ಮುಖ್ಯವಾಗಿ ರಷ್ಯಾದ ಆಪ್ತದೇಶಗಳಾದ ಚೀನಾ, ಭಾರತ ಮತ್ತು ಬ್ರೆಜಿಲ್ ಮೇಲೆ ಒತ್ತಡ ಹೇರುವ ಮಾರ್ಗವನ್ನು ಯೂರೋಪ್ ಅನುಸರಿಸಲು ತೀರ್ಮಾನಿಸಿದಂತಿದೆ. ಈ ದೇಶಗಳು ರಷ್ಯಾದ ಮೇಲೆ ಒತ್ತಡ ತರಲಿ ಎಂಬುದು ರುಟ್ಟೇ, ಅವರ ಉದ್ದೇಶ. ತೈಲ ಆಮದಿನ ಮೇಲೆ ನಿರ್ಬಂಧ ಎಂದರೆ ಯಾವುದೇ ದೇಶ ಯಾವುದೇ ದೇಶದಿಂದ ಏನನ್ನು ಕೊಂಡರೂ ಅವುಗಳ ಮೇಲೆ ಹೆಚ್ಚುವರಿಯಾಗಿ ಶೇ. ನೂರರಷ್ಟು ಸುಂಕ ತೆರಬೇಕಾಗುತ್ತದೆ ಎನ್ನುವುದು ಅವರ ನಿಲುವು. ಇದು ಸಹಜವಾಗಿ ದುಬಾರಿ ವಹಿವಾಟಾಗುತ್ತದೆ. ಈ ಭಾರದಿಂದ ತಪ್ಪಿಸಿಕೊಳ್ಳಲು ಸಹಜವಾಗಿ ಈ ಮೂರೂ ದೇಶಗಳು ರಷ್ಯಾದಿಂದ ತೈಲ ಕೊಳ್ಳುವುದನ್ನು ನಿಲ್ಲಿಸುತ್ತವೆ ಎನ್ನುವುದು ನ್ಯಾಟೋ ಮತ್ತು ಅಮೆರಿಕ ಅಧ್ಯಕ್ಷರ ಲೆಕ್ಕಾಚಾರ. ‘ಪುಟಿನ್‌ಗೆ ಫೋನ್ ಮಾಡಿ.. ಶಾಂತಿ ಮಾತುಕತೆಗೆ ಮುಂದಾಗದಿದ್ದರೆ ನಮಗೆ ಕಷ್ಟವಾಗುತ್ತದೆ ಎಂದು ಹೇಳಿ’ ಎಂದು ರುಟ್ಟೇ ಅವರು ಮೂರೂ ದೇಶಗಳ ನಾಯಕರಿಗೆ ಕರೆ ನೀಡಿದ್ದಾರೆ.

ಈ ಹೆಚ್ಚುವರಿ ಸುಂಕದ ಬೆದರಿಕೆ ಸಹಜವಾಗಿಯೇ ಭಾರತವನ್ನು ಆತಂಕಕ್ಕೆ ದೂಡಿದೆ. ಭಾರತದ ಜನರ ಇಂಧನ ಅಗತ್ಯವನ್ನು ಪೂರೈಸುವುದು ಸರ್ಕಾರದ ಕರ್ತವ್ಯವಾಗಿರುವುದರಿಂದ ಇಂಥ ನಿರ್ಬಂಧಗಳನ್ನು ಹೇರುವುದು ಅಮಾನವೀಯ ಎಂದು ಭಾರತದ ವಿದೇಶಾಂಗ ಖಾತೆ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ವ್ಯಕ್ತಮಾಡಿದ್ದಾರೆ. ಈ ಘೋಷಣೆ ನ್ಯಾಟೋದ ದ್ವಿಮುಖ ನೀತಿಯನ್ನು ಬಹಿರಂಗಗೊಳಿಸಿದೆ. ಏಕೆಂದರೆ ನ್ಯಾಟೋ ಸಂಘಟನೆಯ ಹಲವು ದೇಶಗಳು ರಷ್ಯಾದ ತೈಲ ಮತ್ತು ಅನಿಲವನ್ನು ಬೇರೆ ಬೇರೆ ದಾರಿಗಳಲ್ಲಿ ಪಡೆಯುತ್ತಿವೆ. ಹಿಂಬಾಗಿಲಿನಿಂದ ತೈಲ ಪಡೆಯುವುದನ್ನು ಮುಚ್ಚಿಟ್ಟು ಮುಂಬಾಗಿಲಿನಿಂದ ತೈಲ ಪಡೆಯುವ ದೇಶಗಳ ಮೇಲೆ ಕ್ರಮ ನ್ಯಾಯಬದ್ಧವಾದುದಲ್ಲ ಎಂದು ಅವರು ಹೇಳಿದ್ದಾರೆ.

ಅಭಿವೃದ್ಧಿಯ ಭಾಗವೇ ಆಗಿರುವ ತೈಲಕ್ಕೆ ಅಪಾರ ಬೇಡಿಕೆ ಇದೆ. ಬೇಡಿಕೆ ಇರುವಷ್ಟು ತೈಲ ಭಾರತದಲ್ಲಿ ಲಭ್ಯವಿಲ್ಲದೆ ಇರುವುದರಿಂದ ಸಹಜವಾಗಿಯೇ ಇತರ ದೇಶಗಳಿಂದ ಕೊಳ್ಳಬೇಕಾಗಿ ಬಂದಿದೆ. ಚೀನಾ ಮತ್ತು ಬ್ರೆಜಿಲ್‌ನ ಸ್ಥಿತಿಯೂ ಭಿನ್ನವಲ್ಲ. ಅಮೆರಿಕ ಮತ್ತು ಇರಾನ್ ಸಂಬಂಧ ಹದಗೆಟ್ಟ ಕಾರಣ ಹಲವು ದಶಕಗಳ ಹಿಂದೆಯೇ ಭಾರತಕ್ಕೆ ತೈಲ ಸಮಸ್ಯೆ ತಲೆದೋರಿತು. ಇರಾನ್ನ ತೈಲ ಪೂರೈಕೆಯ ಮೇಲೆ ಅಮೆರಿಕ ನಿರ್ಬಂಧ ಹೇರಿತು. ಕ್ರಮೇಣ ಇರಾನಿನಿಂದ ತೈಲ ಕೊಳ್ಳುವ ದೇಶಗಳ ಮೇಲೆಯೂ ನಿರ್ಬಂಧ ಹೇರಲಾಯಿತು. ಇರಾನಿನಿಂದ ಭಾರತ ಸಾಕಷ್ಟು ಪ್ರಮಾಣದಲ್ಲಿ ತೈಲ ಮತ್ತು ಅನಿಲವನ್ನು ಕೊಳ್ಳುತ್ತಿತ್ತು. ಅಮೆರಿಕದ ನಿರ್ಬಂಧಗಳಿಂದಾಗಿ ಭಾರತ ಅನಿವಾರ್ಯವಾಗಿ ಇರಾನ್‌ನಿಂದ ತೈಲ ಕೊಳ್ಳುವುದನ್ನು ನಿಲ್ಲಿಸಬೇಕಾಯಿತು. ಅರಬ್ ದೇಶಗಳಿಂದ ಹೆಚ್ಚು ತೈಲವನ್ನು ಭಾರತ ಕೊಳ್ಳಲಾರಂಭಿಸಿತು. ಇರಾನ್ ರಿಯಾಯಿತಿ ದರಗಳಲ್ಲಿ ಭಾರತಕ್ಕೆ ತೈಲ ಪೂರೈಸುತ್ತಿತ್ತು. ಅಂಥ ರಿಯಾಯಿತಿ ಅರಬ್ ದೇಶಗಳಿಂದ ಸಿಗದ ಕಾರಣ ಆಮದು ವೆಚ್ಚ ಹೆಚ್ಚಾಗುತ್ತಿತ್ತು. ಭಾರತ ಇರಾಕ್ ನಿಂದ ಕೊಳ್ಳುತ್ತಿದ್ದ ವಹಿವಾಟಿಗೂ ಅಮೆರಿಕದಿಂದಾಗಿ ಕುತ್ತು ಉಂಟಾಯಿತು.

ಹಿಂದೆ ಅಧ್ಯಕ್ಷರಾಗಿದ್ದ ಸದ್ದಾಂ ಹುಸೇನ್ ಭಾರತಕ್ಕೆ ರಿಯಾಯಿತಿ ದರಗಳಲ್ಲಿ ತೈಲ ಕೊಡುತ್ತಿದ್ದರು. ಸದ್ದಾಂ ವಿರುದ್ಧ ಅಮೆರಿಕ ಯುದ್ಧ ಘೋಷಿಸಿದ ಪರಿಣಾಮವಾಗಿ ತೈಲ ಪೂರೈಕೆಯಲ್ಲಿ ಸಮಸ್ಯೆ ಎದುರಿಸಬೇಕಾಯಿತು. ಆಫ್ರಿಕಾ ದೇಶಗಳಲ್ಲಿ ಅಸ್ಥಿರತೆ ಮತ್ತು ಅಮೆರಿಕದ ಹಸ್ತಕ್ಷೇಪ ಹಲವು ಬಾರಿ ಆ ದೇಶಗಳಿಂದ ತೈಲ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಕೆಲವು ವಷಗಳ ಹಿಂದೆ ರಷ್ಯಾ ದೇಶ ನೆರೆಯ ಯುಕ್ರೇನ್ ದೇಶದ ಮೇಲೆ ಅತಿಕ್ರಮಣ ಮಾಡಿತು. ರಷ್ಯಾ ತೆಕ್ಕೆಯಿಂದ ಹೊರಹೋಗಿ ನ್ಯಾಟೋ ಗುಂಪಿಗೆ ಸೇರುವುದು ಯುಕ್ರೇನ್‌ನ ಉದ್ದೇಶವಾಗಿತ್ತು. ಯುಕ್ರೇನ್ ನ್ಯಾಟೋ ಸದಸ್ಯ ದೇಶವಾಗುವುದನ್ನು ತನ್ನ ಸಾರ್ವಭೌಮತ್ವಕ್ಕೆ ಒಡ್ಡಿದ ಬೆದರಿಕೆ ಎಂದು ರಷ್ಯಾ ಭಾವಿಸಿತು. ತನ್ನ ನೆರೆಯಲ್ಲಿಯೇ ನ್ಯಾಟೋ ಮಿಲಿಟರಿ ಬಂದು ನೆಲೆ ಸ್ಥಾಪಿಸುವುದನ್ನು ರಷ್ಯಾ ಒಂದು ಸವಾಲಾಗಿ ತೆಗೆದುಕೊಂಡು ಯುಕ್ರೇನ್ ಮೇಲೆ ಅತಿಕ್ರಮಣ ಮಾಡಿತು. ಈ ಅತಿಕ್ರಮಣದ ವಿರುದ್ಧ ಅಮೆರಿಕ ಮತ್ತು ಯೂರೋಪ್ ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿದವು.

ಇದರ ಪರಿಣಾಮವಾಗಿ ಯೂರೋಪ್‌ಗೆ ರಷ್ಯಾದಿಂದ ಪೂರೈಕೆಯಾಗುತ್ತಿದ್ದ ಅನಿಲ ಮತ್ತು ತೈಲ ಪೂರೈಕೆಯಲ್ಲಿ ವ್ಯತ್ಯಯ ಆಯಿತು. ಅನಿಲ ಮತ್ತು ತೈಲ ಅಭಾವದಿಂದ ಯೂರೋಪ್ ತಲ್ಲಣಿಸಿತು. ಆದರೆ ಇತರ ಮೂಲಗಳಿಂದ ಅನಿಲ ಮತ್ತು ತೈಲ ಪಡೆದು ಯೂರೋಪ್ ಪರಿಸ್ಥಿತಿಯನ್ನು ಕ್ರಮೇಣ ನಿಭಾಯಿಸಿತು. ರಷ್ಯಾದ ಬಹು ಮುಖ್ಯ ಸಂಪನ್ಮೂಲ ತೈಲ ಮತ್ತು ಅನಿಲ. ನಿರ್ಬಂಧಗಳಿಂದಾಗಿ ಸಂಕಷ್ಟಕ್ಕೆ ಒಳಗಾದ ರಷ್ಯಾ ಚೀನಾ, ಭಾರತ ಮತ್ತು ಬ್ರೆಜಿಲ್‌ಗೆ ಹೆಚ್ಚು ತೈಲ ಮತ್ತು ಅನಿಲವನ್ನು ರಿಯಾಯಿತಿ ದರದಲ್ಲಿ ಕೊಡಲು ಆರಂಭಿಸಿ ಪರಿಸ್ಥಿತಿಯನ್ನು ನಿಭಾಯಿಸಿತು. ರಿಯಾಯಿತಿ ದರಗಳಲ್ಲಿ ರಷ್ಯಾದಿಂದ ಕೊಂಡ ತೈಲವನ್ನು ಭಾರತ ಸಂಸ್ಕರಿಸಿ ಬೇರೆ ದೇಶಗಳಿಗೆ ಮಾರಿದ್ದೂ  ಇದೆ. ಯೂರೋಪ್ ಮತ್ತು ಪಶ್ಚಿಮದ ಹಲವು ದೇಶಗಳು ಈ ತೈಲವನ್ನು ಕೊಂಡದ್ದೂ ಇದೆ. ಸಾಕಷ್ಟು ಪ್ರಮಾಣದಲ್ಲಿ ಮತ್ತು ಕಡಿಮೆ ದರಗಳಲ್ಲಿ ರಷ್ಯಾ ತೈಲ ಪೂರೈಸಿದ್ದರಿಂದ ಭಾರತ ಆರ್ಥಿಕವಾಗಿ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರಲಿಲ್ಲ. ಅಮೆರಿಕ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲೂ ಇಲ್ಲ. ಆದರೆ ಯುಕ್ರೇನ್ ಯುದ್ಧ ತೈಲ ಸಮಸ್ಯೆಯನ್ನು ಜೀವಂತವಾಗಿಯೇ ಇಟ್ಟಿತ್ತು. ಇದೀಗ ಅದು ಸ್ಛೋಟಿಸಿದೆ.

ನ್ಯಾಟೋ ಸದಸ್ಯತ್ವ ಪಡೆಯುವ ತನ್ನ ಉದ್ದೇಶವನ್ನು ಯುಕ್ರೇನ್ ಹಿಂತೆಗೆದು ಕೊಳ್ಳುವವರೆಗೆ ಯುದ್ಧ ಮುಂದುವರಿಸುವ ಇಚ್ಛೆಯನ್ನು ಪುಟಿನ್ ವ್ಯಕ್ತಮಾಡಿದ್ದಾರೆ. ಆದರೆ ಅದನ್ನು ಯೂರೋಪ್ ಮತ್ತು ಅಮೆರಿಕ ಒಪ್ಪುವುದಿಲ್ಲ. ಯಾವ ಸಂಘಟನೆಯ ಭಾಗವಾಗಿರಬೇಕು ಎಂಬುದು ಆಯಾ ದೇಶಗಳಿಗೆ ಸೇರಿದ್ದು ಎಂದು ಯೂರೋಪ್ ನಾಯಕರು ವಾದ ಮಾಡುತ್ತಿದ್ದಾರೆ. ಯುಕ್ರೇನ್ ದೇಶವನ್ನು ತಮ್ಮ ವ್ಯಾಪ್ತಿಗೆ ತಂದುಕೊಳ್ಳಲು ಯೂರೋಪ್ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ ಎನ್ನುವುದನ್ನು ಪುಟಿನ್ ಪ್ರತಿರೋಧ ತೋರಿಸಿದೆ.

ಭಾರತ ಮತ್ತು ಅಮೆರಿಕದ ನಡುವೆ ಆಮದು-ರಫ್ತು ಸುಂಕ ಕುರಿತಂತೆ ಮಾತುಕತೆಗಳು ನಡೆಯುತ್ತಿದ್ದು ಅವು ಇನ್ನೂ ಒಪ್ಪಂದದ ಹಂತ ತಲುಪಿಲ್ಲ. ಟ್ರಂಪ್ ಘೋಷಿಸಿರುವ ಸುಂಕದ ಯುದ್ಧ ಸಹಜವಾಗಿಯೇ ಭಾರತದ ವಾಣಿಜ್ಯ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ಅಂತಿಮವಾಗಿ ಸುಂಕದ ಹೊರೆ ಖಚಿತ. ಇದರ ಜೊತೆಗೆ ರಷ್ಯಾದಿಂದ ಭಾರತ ಕೊಳ್ಳಲಿರುವ ತೈಲದ ಮೇಲೆಯೂ ಹೆಚ್ಚು ಸುಂಕ ಬಿದ್ದರೆ ದೇಶ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುವುದು ಖಚಿತ.

” ಸಾಕಷ್ಟು ಪ್ರಮಾಣದಲ್ಲಿ ಮತ್ತು ಕಡಿಮೆ ದರಗಳಲ್ಲಿ ರಷ್ಯಾ ತೈಲ ಪೂರೈಸಿದ್ದರಿಂದ ಭಾರತ ಆರ್ಥಿಕವಾಗಿ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರಲಿಲ್ಲ. ಅಮೆರಿಕ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲೂ ಇಲ್ಲ. ಆದರೆ ಯುಕ್ರೇನ್ ಯುದ್ಧ ತೈಲ ಸಮಸ್ಯೆಯನ್ನು ಜೀವಂತವಾಗಿಯೇ ಇಟ್ಟಿತ್ತು. ಇದೀಗ ಅದು ಸ್ಛೋಟಿಸಿದೆ.”

Tags:
error: Content is protected !!