Mysore
28
broken clouds

Social Media

ಮಂಗಳವಾರ, 13 ಜನವರಿ 2026
Light
Dark

ಮಂಡ್ಯ ಜಿಲ್ಲೆಯಾದ್ಯಂತ ಮಿತಿ ಮೀರಿದ ಚಿರತೆಗಳ ಹಾವಳಿ

ಹೇಮಂತ್‌ಕುಮಾರ್

೩ ವರ್ಷಗಳಲ್ಲಿ ೧,೫೩೬ ಜಾನುವಾರು ಬಲಿ

ಸೆರೆ ಸಿಕ್ಕ ಚಿರತೆಗಳು ೩೭ ಮಾತ್ರ !

ಮಂಡ್ಯ/ಪಾಂಡವಪುರ: ಜಿಲ್ಲೆಯಾದ್ಯಂತ ಚಿರತೆಗಳ ಹಾವಳಿ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಜನ,ಜಾನುವಾರುಗಳಿಗೆ ಉಪಟಳ ನೀಡುತ್ತಿರುವುದಲ್ಲದೆ, ಅರಣ್ಯದಿಂದ ದೂರ ಇರುವ ಗ್ರಾಮಗಳಿಗೂ ದಾಳಿ ಇಟ್ಟು ರೈತರು ತಮ್ಮ ಕುಟುಂಬ ನಿರ್ವಹಣೆಗಾಗಿ ಸಾಕಿರುವ ಕುರಿ, ಕೋಳಿ, ಮೇಕೆ, ಹಸು,ಕರು, ಎಮ್ಮೆಗಳನ್ನು ಆಹಾರಕ್ಕಾಗಿ ಕೊಲ್ಲುತ್ತಿವೆ.ಇಂತಹ ಘಟನೆಗಳಿಂದ ಆತಂಕಕ್ಕೆ ಒಳಗಾಗಿರುವ ರೈತರು ಪ್ರಾಣ ಭಯದಿಂದ ಹೊಲ ಗದ್ದೆಗಳಿಗೆ ತೆರಳಲು ಭಯಪಡುತ್ತಿದ್ದಾರೆ.

ತಡರಾತ್ರಿ ಮುಖ್ಯ ರಸ್ತೆಗಳಲ್ಲಿಯೇ ಚಿರತೆಗಳು ಕಾಣಿಸಿಕೊಳ್ಳುತ್ತಿವೆ.ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಅವುಗಳು ಸಂಚರಿಸುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಚಿರತೆಗಳ ದಾಳಿಯಿಂದಾಗಿ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ. ಜಾನುವಾರುಗಳು ಬಲಿಯಾಗುತ್ತಿರುವುದರಿಂದ ರೈತರು ಆರ್ಥಿಕವಾಗಿ ನಷ್ಟಕ್ಕೊಳಗಾಗುತ್ತಿದ್ದಾರೆ.

ಕಳೆದೆರಡು ತಿಂಗಳುಗಳಿಂದ ಜಿಲ್ಲೆಯಲ್ಲಿ ಚಿರತೆಗಳ ಸಂಚಾರ, ಕೊಟ್ಟಿಗೆಗೆ ನುಗ್ಗಿ ಜಾನುವಾರುಗಳನ್ನು ಕೊಂದು ಭಕ್ಷಿಸುವ ಘಟನೆಗಳು ಹೆಚ್ಚುತ್ತಿವೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಚಿರತೆಗಳ ಸೆರೆಗೆ ಆಗ್ರಹಿಸುತ್ತಿದ್ದಾರೆ. ಚಿರತೆಗಳನ್ನು ಸೆರೆಹಿಡಿಯದಿದ್ದರೆ ಮುಂದಾಗಬಹುದಾದ ಅಪಾಯಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.

ಕಬ್ಬಿನ ಗದ್ದೆಗೆ ತೆರಳಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಎಚ್.ಹೊಸೂರು ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿಯಿಂದ ಸಾವನ್ನಪ್ಪಿದ ತನ್ನ ಕರುವನ್ನು ತಾಯಿ ಹಸುವೇ ಹುಡುಕಿಕೊಂಡು ಹೋಗಿ ಪತ್ತೆ ಹಚ್ಚಿದ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ನಡೆದಿದೆ. ಕೊಟ್ಟಿಗೆಗೆ ಚಿರತೆಗಳು ನುಗ್ಗಿ ೬ ಮೇಕೆಗಳನ್ನು ಕೊಂದು ಅವುಗಳಲ್ಲಿ ೪ ಮೇಕೆ ಗಳನ್ನು ಎಳೆದೊಯ್ದಿರುವ ಘಟನೆ ಪಾಂಡವಪುರ ತಾಲ್ಲೂಕಿನ ಗಿರಿಯಾರಹಳ್ಳಿಯಲ್ಲಿ ನಡೆದಿದೆ. ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮದ ರೈತ ಚನ್ನಮಾದೇಗೌಡ ಅವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ಮೂರು ಚಿರತೆ ಮರಿಗಳು ಪತ್ತೆ ಆಗಿವೆ…! ಇಂತಹ ನೂರಾರು ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ.

ಆದರೆ, ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ, ಬೋನಿನ ಕೊರತೆ, ಅಗತ್ಯದಷ್ಟು ವಾಹನಗಳಿಲ್ಲದಿರುವುದು, ಚಿರತೆ ಸೆರೆ ಹಿಡಿಯುವ ತರಬೇತಿ ಪಡೆದ ಸಿಬ್ಬಂದಿಯ ಕೊರತೆ… ಅರಣ್ಯ ಇಲಾಖೆಯ ಇಂತಹ ಹಲವು ನ್ಯೂನ್ಯತೆಗಳಿಂದ ಗ್ರಾಮೀಣ ಜನತೆ ಕಂಗಾಲಾಗಿದ್ದಾರೆ. ಪಾಂಡವಪುರ ತಾಲ್ಲೂಕಿನಲ್ಲಿಯೇ ಇತ್ತೀಚೆಗೆ ಸುಮಾರು ೫೦-೬೦ ಹಸು, ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಇವುಗಳ ಪೈಕಿ ೬ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಬೋನುಗಳು, ಸಿಬ್ಬಂದಿ ಕೊರತೆ ಇದ್ದು, ಚಿರತೆ ಕಾರ್ಯಾಚರಣೆ ಪಡೆಯೂ ಬೇಕಿದೆ ಎಂದು ಉಪ ಅರಣ್ಯಾಧಿಕಾರಿ ಧರ್ಮೇಂದ್ರ ತಿಳಿಸಿದ್ದಾರೆ.

ಅರಣ್ಯ ಇಲಾಖೆ ವ್ಯವಸ್ಥೆ ಹೀಗಿದೆ:  ಜಿಲ್ಲೆಯ ಅರಣ್ಯ ವಿಭಾಗವು ಕರ್ನಾಟಕ ರಾಜ್ಯದ ದಕ್ಷಿಣ ವಲಯದ ಮಧ್ಯ ಪ್ರದೇಶದಲ್ಲಿದೆ. ಈ ವಿಭಾಗವು ಮಂಡ್ಯ ಕಂದಾಯ ಜಿಲ್ಲೆಯ ಎಲ್ಲಾ ಏಳು ತಾಲ್ಲೂಕುಗಳನ್ನೂ ಒಳಗೊಂಡಿದೆ. ಪ್ರತಿ ತಾಲ್ಲೂಕಿಗೂ ಒಂದು ಶ್ರೇಣಿ ಕಚೇರಿಯನ್ನು ಹೊಂದಿದೆ. ಮಂಡ್ಯ ವಿಭಾಗದ ಒಟ್ಟು ಅಧಿಸೂಚಿತ ಅರಣ್ಯ ಪ್ರದೇಶದ ವ್ಯಾಪ್ತಿ ೧೭,೩೩೧.೯೯ ಹೆಕ್ಟೇರ್. ಮಂಡ್ಯ ಜಿಲ್ಲೆಯ ಒಟ್ಟು ಅಧಿಸೂಚಿತ ಅರಣ್ಯ ಪ್ರದೇಶದ ವ್ಯಾಪ್ತಿ (ಕಾವೇರಿ ವನ್ಯಜೀವಿ ವಿಭಾಗಕ್ಕೆ ಹಸ್ತಾಂತರಿಸಲಾದ ಸಂರಕ್ಷಿತ ಪ್ರದೇಶದ ಜೊತೆಗೆ) ೨೬,೨೩೫.೩೨ ಹೆಕ್ಟೇರ್. ಇದು ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶದ (೪,೯೬೧ ಕಿಮೀ) ಸುಮಾರು ೫.೨೯ ರಷ್ಟಿದೆ. ಈ ವಿಭಾಗವು ಕಾವೇರಿ, ಹೇಮಾವತಿ, ಲೋಕಪಾವನಿ ಮತ್ತು ಶಿಂಷಾ ನದಿಗಳಿಂದ ಆವರಿಸಿದೆ. ಮಂಡ್ಯ ವಿಭಾಗದ ಅರಣ್ಯಗಳು ಮುಖ್ಯವಾಗಿ ಒಣ ಪತನಶೀಲ ಮತ್ತು ಪೊದೆಸಸ್ಯ ಪ್ರಕಾರಗಳಾಗಿವೆ. ಈ ವಿಭಾಗವು ಮಂಡ್ಯ ಮತ್ತು ನಾಗಮಂಗಲದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಎರಡು ಉಪವಿಭಾಗಗಳನ್ನು ಹೊಂದಿದೆ.  ಮಂಡ್ಯ ಉಪವಿಭಾಗವು ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಶ್ರೀರಂಗಪಟ್ಟಣವಲಯಗಳನ್ನು ಒಳಗೊಂಡಿದೆ. ನಾಗಮಂಗಲ ಉಪವಿಭಾಗವು ನಾಗಮಂಗಲ, ಪಾಂಡವಪುರ ಮತ್ತು ಕೆ.ಆರ್.ಪೇಟೆ ವಲಯಗಳನ್ನು ಒಳಗೊಂಡಿದೆ. ಮಂಡ್ಯ ವಿಭಾಗವು ಹೆಚ್ಚಾಗಿ ಅರಣ್ಯೀಕರಣ ವಿಭಾಗವಾಗಿದೆ.

೩ ವರ್ಷಗಳಲ್ಲಿ ೩೭ ಚಿರತೆಗಳು ಸೆರೆ !:  ಮಂಡ್ಯ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ವರದಿ ಪ್ರಕಾರ ಮಂಡ್ಯ ಪ್ರಾದೇಶಿಕ ವಿಭಾಗದಲ್ಲಿ ೨೦೨೨-೨೩ನೇ ಸಾಲಿನಲ್ಲಿ ೧೯, ೨೦೨೩-೨೪ನೇ ಸಾಲಿನಲ್ಲಿ ೮ ಹಾಗೂ ೨೦೨೪-೨೫ನೇ ಸಾಲಿನಲ್ಲಿ ೧೦ ಚಿರತೆಗಳು ಸೇರಿದಂತೆ ಒಟ್ಟು ೩೭ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಕಳೆದ ೩ ವರ್ಷಗಳಲ್ಲಿ ನಡೆದ ಮಾನವ-ವನ್ಯ ಪ್ರಾಣಿ ಸಂಘರ್ಷಕ್ಕೆ ಸಂಬಂಧಿಸಿದಂತೆ ೨೦೨೩-೨೪ನೇ ಸಾಲಿನಲ್ಲಿ ೫೯೫ ಜಾನುವಾರುಗಳು ಸಾವನ್ನಪ್ಪಿದ್ದು (ಪರಿಹಾರ ೪೦.೫೦ ಲಕ್ಷ.ರೂ.), ೨೦೨೩-೨೪ನೇ ಸಾಲಿನಲ್ಲಿ ೩೫೩ ಜಾನುವಾರುಗಳು ಮೃತಪಟ್ಟಿವೆ(ಪರಿಹಾರ ೨೨.೯೭ ಲಕ್ಷ ರೂ.) ೨೦೨೪-೨೫ನೇ ಸಾಲಿನಲ್ಲಿ ೫೮೮ ಜಾನುವಾರುಗಳು ಸಾವನ್ನಪ್ಪಿವೆ(ಪರಿಹಾರ ೪೮.೨೫ ಲಕ್ಷ ರೂ.) ಎಂದು ತಿಳಿಸಲಾಗಿದೆ.

” ವಿಶ್ವೇಶ್ವರಯ್ಯ ನಾಲಾ ಬಯಲಿನಲ್ಲಿಯೇ ಅತಿ ಹೆಚ್ಚು ಚಿರತೆ ದಾಳಿಗಳು ನಡೆಯುತ್ತಿವೆ. ರೈತರು ತಮ್ಮ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಒಂದೆಡೆ ಚಿರತೆಗಳು ಕೊಟ್ಟಿಗೆಗೇ ನುಗ್ಗುತ್ತಿದ್ದರೆ, ಮತ್ತೊಂದೆಡೆ ಬಯಲಿನಲ್ಲಿ ಮೇಯಿಸಲು ಬಿಟ್ಟಾಗ ಕುರಿ, ಮೇಕೆಗಳನ್ನು ತಿಂದುಹಾಕುತ್ತಿವೆ. ಕುರಿಗಾಹಿಗಳ ಮೇಲೂ ದಾಳಿ ನಡೆಸುತ್ತಿವೆ. ಆದ್ದರಿಂದ ಅರಣ್ಯಾಽಕಾರಿಗಳು ಚಿರತೆ ಸ್ಕ್ವಾಡ್‌ಗಳನ್ನು ಹೆಚ್ಚಿಸಲು ಸನ್ನದ್ಧರಾಗಿಸಬೇಕಿದೆ.”

ಮಂಗಲ ಯೋಗೀಶ್, ಪರಿಸರ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಂಡ್ಯ

” ಹಳ್ಳಿಗಾಡಿನ ಪ್ರದೇಶದಲ್ಲಿ ಚಿರತೆಗಳು ಎಲ್ಲಿಂದ ಬಂದು ಸೇರಿವೆಯೋ ಗೊತ್ತಿಲ್ಲ. ಅರಣ್ಯ ಇಲಾಖೆ ಹೆಚ್ಚು ನಿಗಾ ವಹಿಸಬೇಕು. ಮೊನ್ನೆ ತಾನೆ ಟಿ.ಎಸ್.ಛತ್ರ, ಇಂಗಲಗುಪ್ಪೆ ಗ್ರಾಮಗಳಲ್ಲಿ ಚಿರತೆ ನಾಲ್ಕು ಮೇಕೆಗಳನ್ನು ಕೊಂದುಹಾಕಿದೆ. ಜನ ಹೊಲ, ಗದ್ದೆಗಳಿಗೆ ಹೋಗಿಬರಲು ಹೆದರುವಂತಾಗಿದೆ.”

ಬೋಳಾರೇಗೌಡ, ಇಂಗಲಗುಪ್ಪೆ.

” ಅರಣ್ಯ ಇಲಾಖೆಯಲ್ಲಿ ಬೋನಿನ ಕೊರತೆ, ಸಿಬ್ಬಂದಿ ಕೊರತೆ ಇದೆ. ವಾಹನ ಸೌಕರ್ಯವಿಲ್ಲ ಎಂದೆಲ್ಲ ಹೇಳುತ್ತಿದ್ದಾರೆ. ಚಿರತೆಗಳು ಮಾನವರನ್ನು ತಿಂದು ಹಾಕಿದರೂ ಇವರು ಇದೇ ಸಬೂಬು ಹೇಳುತ್ತಾರೆ. ಈ ಇಲಾಖೆಗೆ ರೈತರ ಬದುಕಿನ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಜಾನುವಾರುಗಳು ಬಲಿಯಾಗಿ, ಇವರು ಬಂದು ಪರಿಶೀಲಿಸಿ, ಬೋನು ಇಡುವಷ್ಟರಲ್ಲಿ ಇನ್ನಷ್ಟು ನಷ್ಟ ಸಂಭವಿಸಿರುತ್ತದೆ.”

ಎಂ.ಪುಟ್ಟರಾಜು, ಟಿ.ಎಸ್.ಛತ್ರ 

Tags:
error: Content is protected !!